ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋ ಫೈನಾನ್ಸ್‌ಗಳಿಂದ ಸಾಲದ ಸುಳಿಗೆ- ಚುಕ್ಕಿ ನಂಜುಂಡಸ್ವಾಮಿ ಆರೋಪ

ಮಹಿಳಾ ದಿನಾಚರಣೆ
Last Updated 9 ಮಾರ್ಚ್ 2022, 5:30 IST
ಅಕ್ಷರ ಗಾತ್ರ

ಹರಿಹರ: ಪುರುಷ ರೈತರೆಲ್ಲಾ ಕೃಷಿ ಕಾರಣಕ್ಕಾಗಿ ಈಗಾಗಲೇ ಸಾಲಗಾರ ರಾಗಿದ್ದು, ಮೈಕ್ರೋ ಫೈನಾನ್ಸ್‌ಗಳ ಕೃಪೆಯಿಂದ ರೈತ ಮಹಿಳೆಯರೂ ಈಗ ಸಾಲದ ಸುಳಿಗೆ ಸಿಲುಕಿದ್ದಾರೆ ಎಂದು ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಆರೋಪಿಸಿದರು.

ವಿಶ್ವ ಮಹಿಳಾ ದಿನದ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ಆಯೋಜಿಸಿದ್ದ ರೈತ ಮಹಿಳೆಯರ ಸಭೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾಗತೀಕರಣ ಹಾಗೂ ಆಡಳಿತಗಾರರ ತಪ್ಪು ನೀತಿಗಳಿಂದಾಗಿ ದೇಶದ ಪುರುಷ ರೈತರೆಲ್ಲಾ ಬ್ಯಾಂಕುಗಳ ಸಾಲಗಾರರಾಗಿದ್ದಾರೆ. ಮನೆತನದ ಕೃಷಿ ಕಾರ್ಯಕ್ಕೆ ಪರದೆಯ ಹಿಂದಿನಿಂದಲೇ ಗಣನೀಯ ಪ್ರಮಾಣದಲ್ಲಿ ಶ್ರಮಿಸುವ ರೈತ ಮಹಿಳೆಯರೂ ಸಾಲದ ಸುಳಿಯಲ್ಲಿ ಅರಿವಿಲ್ಲದೆ ಸಿಲುಕುತ್ತಿದ್ದಾರೆ’ ಎಂದು ಆಪಾದಿಸಿದರು.

‘ಮಹಿಳಾ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ರೈತ ಮಹಿಳೆಯರು ಹಳ್ಳಿ ಮಟ್ಟದಲ್ಲೇ ಸಂಘಟಿತರಾಗಬೇಕು. ರೈತ ಸಂಘ ಎಂದರೆ ಪುರುಷ ರೈತರು ಮಾತ್ರ ಎಂಬ ಕಲ್ಪನೆ ಸಮಾಜದಲ್ಲಿ ಮೂಡಿದೆ. ರೈತ ಸಂಘವೆಂದರೆ ಅದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ರೈತರಿದ್ದಾರೆ ಎಂಬ ಸಂದೇಶ ಸಮಾಜದಲ್ಲಿ ಮೂಡಿಸಬೇಕಾಗಿದೆ’ ಎಂದರು.

‘ಕೃಷಿ ಬಿಕ್ಕಟ್ಟಿನೊಳಗೆ ರೈತ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳು’ ವಿಷಯ ಕುರಿತು, ರಾಮನಗರದ ಹಿರಿಯ ಮಹಿಳಾ ರೈತ ಮುಖಂಡರಾದ ಅನಸೂಯಮ್ಮ ಮಾತನಾಡಿ, ‘ಒಬ್ಬ ನೌಕರ ಸತ್ತರೆ ಆತನ ಪತ್ನಿಗೆ ಪೆನ್ಷನ್, ಪಿಎಫ್, ಕೆಜಿಐಡಿಯ ಹಣ ನೀಡಿ ಅನುಕಂಪದ ಆಧಾರದಲ್ಲಿ ನೌಕರಿಯನ್ನೂ ನೀಡಲಾಗುತ್ತದೆ. ಅದೇ ರೀತಿ ರೈತರೊಬ್ಬರಿಗೆ ಮದುವೆಯಾದ ಪತ್ನಿಯ ಹೆಸರು ಸದರಿ ಕುಟುಂಬದ ಜಮೀನಿನ ಪಹಣಿಯಲ್ಲಿ ಸೇರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಬದಲಾಗುತ್ತಿರುವ ಕೃಷಿ ಸನ್ನಿವೇಶದಲ್ಲಿ ಮಹಿಳೆ’ ವಿಷಯವಾಗಿ ಕೊಟ್ಟೂರಿನ ಗಾಯತ್ರಿ ವಿ. ಮಾತನಾಡಿ, ‘ಮಳೆಯಾಶ್ರಿತ ಕೃಷಿ ಪ್ರದೇಶ ಹೆಚ್ಚಾಗಿರುವ ವಿಜಯನಗರ ಜಿಲ್ಲೆಯಿಂದ ಬಹುತೇಕ ರೈತರು ಕುಟುಂಬ ಸಮೇತ ಹೊಟ್ಟೆಪಾಡಿಗೆ ಗುಳೆ ಹೋಗುತ್ತಿರುತ್ತಾರೆ. ಆ ರೈತರನ್ನು ಮತ್ತೆ ತಮ್ಮ ಜಮೀನುಗಳಲ್ಲೇ ಕೆಲಸ ಮಾಡುವ ಪ್ರಯತ್ನ ಆರಂಭಿಸಿದ್ದೇವೆ’ ಎಂದರು.

ದಾವಣಗೆರೆಯ ರೈತ ಮಹಿಳೆ ತದ್ವನಮ್ ಸಂಸ್ಥೆಯ ಸರೋಜಮ್ಮ ಮಾತನಾಡಿ, ‘ಕೃಷಿಯ 36 ಬಗೆಯ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾ ಆರ್ಥಿಕ ಸಬಲತೆ ಗಳಿಸಿದ್ದೇನೆ. ಕೃಷಿ ಇಲಾಖೆ ಸ್ಮರಣೀಯ ಸಹಕಾರ ನೀಡಿದೆ. ಕೃಷಿಯಲ್ಲಿ ಸಾವಯವ, ಉಪ ಉತ್ಪನ್ನಗಳ ಮಾರಾಟ ಮಾಡಿದರೆ ರೈತ ಸಾಲದ ಸುಳಿಗೆ ಸಿಲುಕದೆ, ಇನ್ನೊಬ್ಬರಿಗೆ ಸಾಲ ನೀಡುವ ಶಕ್ತಿ ಪಡೆಯುತ್ತಾನೆ’ ಎಂದರು.

ದಾವಣಗೆರೆಯ ಸಹಜ ಕೃಷಿಕ ಸುನಿತಾ ಶಂಕರಗೌಡ ಮಾತನಾಡಿ, ‘ಕೃಷಿ ಹುಟ್ಟಿದ್ದು ಮಹಿಳೆಯರಿಂದ. ನಮ್ಮ ಜಮೀನಿನಲ್ಲಿ ಔಷಧ ಸಸ್ಯ ಸೇರಿ ನಮ್ಮ ಮನೆಗೆ ಬೇಕಾದ ಎಲ್ಲವನ್ನೂ ಬೆಳೆಯುತ್ತೇವೆ. ಕ್ರಿಮಿನಾಶಕ, ರಾಸಾಯನಿಕ ಗೊಬ್ಬರದಅವಲಂಬನೆ ಇಲ್ಲ. ಮಕ್ಕಳನ್ನು ಕಾಲೇಜಿಗೆ ಕಳುಹಿಸದೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಕೃಷಿಯನ್ನು ಇಷ್ಟದಿಂದ ಮಾಡಿದರೆ, ಯಾರ ಹಂಗೂ ನಮಗಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂವಾದದಲ್ಲಿ ರೈತ ಮಹಿಳಾ ಮುಖಂಡರಾದ ಕೋಲಾರದ ನಳಿನಿ ಗೌಡ, ಪ್ರೇಮಾ ಬಾಯಿ, ಹುಬ್ಬಳ್ಳಿಯ ಮಂಜುಳಾ ಪೂಜಾರ್, ಕವಿತಾ, ಮಂಡ್ಯದ ನಂದಿನಿ ಜಯರಾಮ್, ಸುರೇಖಾ ಕಂಬೋಜಿ, ಸುಮಾ, ಸಾವಂತ್, ಕೆ.ಟಿ. ಗಂಗಾಧರ್, ತೇಜಸ್ವಿ ಪಟೇಲ್, ಗರಡಿಮನಿ ಬಸಣ್ಣ, ಎಚ್.ಬಿ. ಕೊಟ್ರೇಶ್, ದೊಗ್ಗಳ್ಳಿ ಮಹೇಶ್, ನಂದಿತಾವರೆ ಶಂಭಣ್ಣ, ನಂದೀಶ್, ಮಾರುತಿರಾವ್, ಕೆಂಚನಹಳ್ಳಿ ಪರಮೇಶ್, ವಸಂತಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT