ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ | ಏಕ ವ್ಯಕ್ತಿ ರಕ್ತದ ಪ್ಲೇಟ್‌ಲೆಟ್‌ಗೆ ಬೇಡಿಕೆ: ಯಂತ್ರಗಳ ಕೊರತೆ

Published 11 ಜುಲೈ 2024, 5:29 IST
Last Updated 11 ಜುಲೈ 2024, 5:29 IST
ಅಕ್ಷರ ಗಾತ್ರ

ದಾವಣಗೆರೆ: ಹೆಚ್ಚುತ್ತಿರುವ ಡೆಂಗಿ ರೋಗಿಗಳಿಗೆ ಏಕ ವ್ಯಕ್ತಿಯಿಂದ ಪಡೆದ ರಕ್ತದಿಂದ ಸಂಗ್ರಹಿಸಿದ ಪ್ಲೇಟ್‌ಲೆಟ್‌ ನೀಡುವುದು ಪರಿಣಾಮಕಾರಿ. ಆದರೆ, ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಏಕ ವ್ಯಕ್ತಿಯ ರಕ್ತದಿಂದ ಪ್ಲೇಟ್‌ಲೆಟ್‌ ಸಂಗ್ರಹಿಸುವ ಯಂತ್ರದ ಕೊರತೆ ಇರುವುದರಿಂದ ರೋಗಿಗಳು ಪರದಾಡುವಂತಾಗಿದೆ.

ಡೆಂಗಿ ಬಾಧಿತರ ಚಿಕಿತ್ಸೆಗೆ ಪ್ಲೇಟ್‌ಲೆಟ್‌ಗಳೇ ಸಂಜೀವಿನಿ. ಅನೇಕರು ದಾನ ಮಾಡಿದ ರಕ್ತದಿಂದ ಪ್ರತ್ಯೇಕಿಸಿದ ‘ರ‍್ಯಾಂಡಮ್‌ ಡೋನರ್‌ ಪ್ಲೇಟ್‌ಲೆಟ್‌’ (ಆರ್‌ಡಿಪಿ)ಗಳು ಆಯಾ ರಕ್ತನಿಧಿ ಕೇಂದ್ರಗಳಲ್ಲಿ ಸಿಗುತ್ತಿದೆ. ಡೆಂಗಿ ಬಾಧಿತರಿಗೆ ಈ ಮಾದರಿಯ ಪ್ಲೇಟ್‌ಲೇಟ್‌ಗಳಿಂದ ನಿರೀಕ್ಷಿತ ಫಲಿತಾಂಶ ಸಿಗುವುದು ಅನುಮಾನ. ಗಣನೀಯವಾಗಿ ಕುಸಿದ ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸಲು ನಿಗದಿತವಾಗಿ ಒಬ್ಬರ ರಕ್ತದಿಂದ ಸಂಗ್ರಹಿಸಿದ ಪ್ಲೇಟ್‌ಲೆಟ್‌ಗೆ ವೈದ್ಯರು ಶಿಫಾರಸು ಮಾಡುತ್ತಿದ್ದಾರೆ. ಪ್ರತ್ಯೇಕಿಸುವ ಯಂತ್ರದ ಕೊರತೆಯಿಂದಾಗಿ ಏಕವ್ಯಕ್ತಿಯ ರಕ್ತದ ಪ್ಲೇಟ್‌ಲೆಟ್‌ ತರುವುದು ರೋಗಿಗಳ ಸಂಬಂಧಿಗಳಿಗೆ ಸವಾಲಾಗಿದೆ.

ಏಕವ್ಯಕ್ತಿಯ ರಕ್ತದಿಂದ ಪ್ಲೇಟ್‌ಲೆಟ್‌ಗಳನ್ನು ಸಂಗ್ರಹಿಸಲು ‘ಪ್ಲೇಟ್‌ಲೆಟ್‌ ಅಫೆರಿಸಿಸ್‌’ ಯಂತ್ರವನ್ನು ರಕ್ತನಿಧಿ ಕೇಂದ್ರದಲ್ಲಿ ಅಳವಡಿಸಿಕೊಳ್ಳಬೇಕು. ಈ ಯಂತ್ರದಿಂದ ಏಕಕಾಲಕ್ಕೆ ರಕ್ತ ಸಂಗ್ರಹಿಸಿ, ಪ್ಲೇಟ್‌ಲೆಟ್‌ ಬೇರ್ಪಡಿಸಿ ಮತ್ತೆ ರಕ್ತವನ್ನು ದಾನಿಗಿ ವರ್ಗಾಯಿಸಬಹುದಾಗಿದೆ. ₹ 40 ಲಕ್ಷದಷ್ಟು ದುಬಾರಿ ಬೆಲೆಯ ಈ ಯಂತ್ರ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ. ಇದಕ್ಕೆ ಔಷಧ ನಿಯಂತ್ರಣ ಮಂಡಳಿಯ ಹೆಚ್ಚುವರಿ ಪರವಾನಗಿ ಕಡ್ಡಾಯ. ಹಲವು ರಕ್ತನಿಧಿ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ಆರ್‌ಡಿಪಿ ಪ್ಲೇಟ್‌ಲೆಟ್‌ಗಳು ಸಿಗುತ್ತಿವೆ. ಒಬ್ಬ ದಾನಿ ಪ್ಲೇಟ್‌ಲೆಟ್‌ ಪಡೆಯಲು ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ರಕ್ತನಿಧಿ ಕೇಂದ್ರಗಳ ಬಾಗಿಲು ಬಡಿಯಬೇಕಾಗಿದೆ. ದಾವಣಗೆರೆಯಲ್ಲಿ ಏಕದಾನಿ ಪ್ಲೇಟ್‌ಲೆಟ್‌ ಒದಗಿಸಬಲ್ಲ ರಕ್ತನಿಧಿ ಕೇಂದ್ರ ಇರುವುದು ಎರಡು ಮಾತ್ರ.

ಡೆಂಗಿಪೀಡಿತ ಗರ್ಭಿಣಿಯೊಬ್ಬರಿಗೆ ‘ಬಿ ನೆಗೆಟಿವ್‌’ ರಕ್ತ ಗುಂಪಿನ ಪ್ಲೇಟ್‌ಲೆಟ್‌ಗಳ ಅಗತ್ಯವಿತ್ತು. ಏಕದಾನಿ ಪ್ಲೇಟ್‌ಲೆಟ್‌ಗೆ ವೈದ್ಯರು ಶಿಫಾರಸು ಮಾಡಿದ್ದರು. ರಕ್ತದಾನಕ್ಕೆ ಮುಂದೆ ಬಂದ ಮೂವರಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ 2.30 ಲಕ್ಷಕ್ಕಿಂತ ಕಡಿಮೆ ಇತ್ತು. ದಾನಿಯ ದೇಹದಲ್ಲಿ 2.50 ಲಕ್ಷಕ್ಕಿಂತ ಹೆಚ್ಚು ಪ್ಲೇಟ್‌ಲೆಟ್‌ಗಳು ಇದ್ದಾಗ ಮಾತ್ರ ರಕ್ತ ಪಡೆಯಲಾಗುತ್ತದೆ. ರಕ್ತದಾನಿಗಳಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಿರುವವರನ್ನು ಹುಡುಕಿ ಪಡೆಯುವುದು ಸವಾಲಾಗಿದೆ ಎನ್ನುತ್ತಾರೆ ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಅನಿಲ್‌ ಬಾರಂಗಲ್‌.

ಏಕವ್ಯಕ್ತಿಯ ದೇಹದಿಂದ ಸಂಗ್ರಹಿಸುವ ರಕ್ತವನ್ನು ವಿಶೇಷ ಉಪಕರಣದಲ್ಲಿ ಹರಿಸಿ ಪ್ಲೇಟ್‌ಲೆಟ್‌ಗಳನ್ನು ಪ್ರತ್ಯೇಕಿಸಲಾಗುತ್ತದೆ. ಬಳಿಕ ಅದೇ ವೇಳೆ ಆ ರಕ್ತವನ್ನು ಮತ್ತೆ ದಾನಿಗೇ ನೀಡಲಾಗುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ 3 ಗಂಟೆ ಸಮಯ ಹಿಡಿಯುತ್ತದೆ. ಏಕವ್ಯಕ್ತಿಯ ಪ್ಲೇಟ್‌ಲೆಟ್‌ ಯೂನಿಟ್‌ವೊಂದಕ್ಕೆ ಅಂದಾಜು ₹ 11,800 ನಿಗದಿಪಡಿಸಲಾಗಿದೆ. ಪ್ಲೇಟ್‌ಲೆಟ್‌ಗಳಿಗೆ ಇಷ್ಟು ಬೆಲೆ ತೆರುವ ಆರ್ಥಿಕ ಸ್ಥಿತಿ ಬಹುತೇಕ ರೋಗಿಗಳಲ್ಲಿಲ್ಲ.

‘ಸಾಮಾನ್ಯವಾಗಿ ವ್ಯಕ್ತಿಯೊಬ್ಬರ ದೇಹದಲ್ಲಿ 1.50 ಲಕ್ಷದಿಂದ 5 ಲಕ್ಷದವರೆಗೆ ಪ್ಲೇಟ್‌ಲೆಟ್‌ಗಳಿರುತ್ತವೆ. ರೋಗಿಯ ಸಮಾನ ರಕ್ತದ ಗುಂಪಿನ ದಾನಿಯ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಪ್ಲೇಟ್‌ಲೆಟ್‌ ಸಂಗ್ರಹಿಸಲಾಗುತ್ತದೆ. ವ್ಯಕ್ತಿಯೊಬ್ಬರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಪ್ಲೇಟ್‌ಲೆಟ್‌ಗಳನ್ನು ತಿಂಗಳಿಗೆ ಎರಡು ಬಾರಿ ದಾನ ಮಾಡಬಹುದು. ಗರಿಷ್ಠ 5 ದಿನಗಳವರೆಗೆ ಪ್ಲೇಟ್‌ಲೆಟ್‌ ಸಂಗ್ರಹಿಸಿಡಬಹುದು’ ಎಂದು ಅವರು ಹೇಳುತ್ತಾರೆ.

ರಕ್ತದಿಂದ ಪ್ಲೇಟ್‌ಲೆಟ್‌ ವಿಂಗಡಿಸುವ ವ್ಯವಸ್ಥೆ ಜಿಲ್ಲಾ ಆಸ್ಪತ್ರೆಯಲ್ಲಿದೆ. ರೋಗಿಗಳಿಗೆ ಇದನ್ನು ಉಚಿತವಾಗಿ ನೀಡಲಾಗುತ್ತಿದೆ. ಒಬ್ಬರೇ ನೀಡುವ ರಕ್ತದಿಂದ ಪ್ಲೇಟ್‌ಲೆಟ್‌ ಸಂಗ್ರಹಿಸುವ ವ್ಯವಸ್ಥೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಇದೆ
ಡಾ.ಕೆ.ಎಚ್‌.ಗಂಗಾಧರ್‌ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಎರಡು ವಾರಗಳಿಂದ ಪ್ಲೇಟ್‌ಲೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಒಬ್ಬರೇ ದಾನ ನೀಡಿದ ರಕ್ತದಿಂದ ಸಂಗ್ರಹಿಸಿದ ಪ್ಲೇಟ್‌ಲೆಟ್‌ಗೆ ತಡಕಾಡಬೇಕು. ಎಲ್ಲ ಕಡೆ ಅಗತ್ಯ ಯಂತ್ರ ಇದ್ದಲ್ಲಿ ಸಮಸ್ಯೆ ಬಗೆಹರಿಯುತ್ತದೆ.
ಅನಿಲ್‌ ಬಾರಂಗಲ್‌ ಕಾರ್ಯದರ್ಶಿ ರೆಡ್‌ಕ್ರಾಸ್‌ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT