ಮಂಗಳವಾರ, ನವೆಂಬರ್ 12, 2019
20 °C
ಹಿರೇಕಲ್ಮಠದ ಸ್ವಾಮೀಜಿ ಮಧ್ಯಸ್ಥಿಕೆ

ಸುಖಾಂತ್ಯ ಕಂಡ ಕೋಣನ ವಿವಾದ

Published:
Updated:
Prajavani

ಹೊನ್ನಾಳಿ: ಒಂದು ವಾರದಿಂದ ಎರಡು ಗ್ರಾಮಗಳ ಮಧ್ಯೆ ಜಗಳಕ್ಕೆ ಕಾರಣವಾಗಿದ್ದ ‘ದೇವರ ಕೋಣ’ ವಿವಾದ ಶುಕ್ರವಾರ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ ಕಂಡಿತು.

ಕೋಣನ ವಿಚಾರವನ್ನು ಗ್ರಾಮಸ್ಥರು ಪ್ರತಿಷ್ಠೆ ಮಾಡಿಕೊಂಡಿದ್ದ ಕಾರಣ ಗುರುವಾರ ಡಿಎನ್‍ಎ ಪರೀಕ್ಷೆ ನಡೆಸಲು ಪೊಲೀಸ್‌ ಇಲಾಖೆ ನಿರ್ಧಾರ ಕೈಗೊಂಡಿತ್ತು.

ರಕ್ತದ ಮಾದರಿ ತೆಗೆದರೆ ಕೋಣ ದೇವರ ಬಲಿಗೆ ಅರ್ಹತೆ ಪಡೆಯುವುದಿಲ್ಲ ಎಂಬ ವಿಚಾರ ಪ್ರಸ್ತಾಪವಾಯಿತು. ಇದರಿಂದ ಪೊಲೀಸರು ಹಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಂಧಾನಕ್ಕೆ ಮುಂದಾದರು. ಆಗ ಹಾರನಹಳ್ಳಿ ಗ್ರಾಮಸ್ಥರು ರಾಜಿ ಪಂಚಾಯಿತಿ ಮಾಡುವುದಾದರೆ ಹಿರೇಕಲ್ಮಠದಲ್ಲಿ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಮಾಡೋಣ ಎಂದರು.

ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ತಹಶೀಲ್ದಾರ್ ಹಾಗೂ ಪೊಲೀಸರ ಎದುರು ರಾಜಿ ಸಂಧಾನ ನಡೆಯಿತು.

ಎರಡೂ ಗ್ರಾಮಗಳ ಜನರಿಗೆ ಬುದ್ಧಿ ಹೇಳಿದ ಸ್ವಾಮೀಜಿ ತಮ್ಮ ತೀರ್ಮಾನ ಒಪ್ಪುವುದಾದರೆ ಮಧ್ಯಸ್ಥಿಕೆ ವಹಿಸಿಕೊಳ್ಳುವುದಾಗಿ ಹೇಳಿದರು. ಅದಕ್ಕೆ ಹಾರನಹಳ್ಳಿ ಹಾಗೂ ಬೇಲಿಮಲ್ಲೂರು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.

ಇಬ್ಬರೂ ಕರ್ತೃ ಗದ್ದುಗೆ ಮುಟ್ಟಿ ತಮ್ಮ ಅನಿಸಿಕೆ ಹೇಳಿಕೊಂಡು ಪ್ರಮಾಣ ಮಾಡಿ ಬನ್ನಿ, ನಂತರ ತೀರ್ಮಾನ ನೀಡುವುದಾಗಿ ಸ್ವಾಮೀಜಿ ತಿಳಿಸಿದರು.

ಅದರಂತೆ ಎರಡೂ ಗ್ರಾಮಗಳ ಮುಖಂಡರು ಗದ್ದುಗೆ ಮುಟ್ಟಿ ಅನಿಸಿಕೆ ವ್ಯಕ್ತಪಡಿಸಿ ಪ್ರಮಾಣ ಮಾಡಿ ಬಂದರು. ನಂತರ ಸ್ವಾಮೀಜಿ, ಕೋಣವನ್ನು ಬೇಲಿಮಲ್ಲೂರು ಗ್ರಾಮಸ್ಥರು ತೆಗೆದುಕೊಂಡು ಹೋಗಲಿ ಎಂದು ಸೂಚಿಸಿದರು. ಇದಕ್ಕೆ ಹಾರನಹಳ್ಳಿ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.

ಸಿಪಿಐ ದೇವರಾಜ್, ಪಿಎಸ್‍ಐ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ತಹಶೀಲ್ದಾರ್ ತುಷಾರ್ ಬಿ. ಹೊಸೂರು, ನ್ಯಾಮತಿ ಪಿಎಸ್‍ಐ ಹನುಮಂತಪ್ಪ ಶಿರಿಹಳ್ಳಿ ಇದ್ದರು.

ಪ್ರತಿಕ್ರಿಯಿಸಿ (+)