ಶನಿವಾರ, ಮಾರ್ಚ್ 6, 2021
28 °C
ಕಾಂಗ್ರೆಸ್‌ನ ಮೇಯರ್‌ ಆಕಾಂಕ್ಷಿಯಾಗಿದ್ದ ಅಭ್ಯರ್ಥಿಯನ್ನೇ ಸೆಳೆದ ಬಿಜೆಪಿ

ದೇವರಮನಿ ಶಿವಕುಮಾರ್‌ ಬಿಜೆಪಿಗೆ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಅಚ್ಚರಿಯ ರಾಜಕೀಯ ಬೆಳವಣಿಗೆಗಳಾಗಿವೆ. ಕಾಂಗ್ರೆಸ್‌ನಿಂದ ಮೇಯರ್‌ ಆಕಾಂಕ್ಷಿಯಾಗಿದ್ದ ದೇವರಮನಿ ಶಿವಕುಮಾರ್‌ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ.

ಕಾಂಗ್ರೆಸ್‌ನಿಂದ ದೇವರಮನಿ ಶಿವಕುಮಾರ್‌ ಮತ್ತು ಜೆ.ಎನ್‌. ಶ್ರೀನಿವಾಸ್‌ ಮೇಯರ್‌ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ವರಿಷ್ಠರು ಶ್ರೀನಿವಾಸ್‌ ಅವರ ಮನವೊಲಿಸಿ ಶಿವಕುಮಾರ್‌ ಅವರನ್ನೇ ಅಂತಿಮಗೊಳಿಸಿದ್ದರು. ಆದರೆ ಗೆಲುವಿಗೆ ಬೇಕಾದ ಸ್ಥಾನಗಳನ್ನು ಹೊಂದಿಸುವ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ನೊಂದು ಹೊರ ನಡೆದಿದ್ದರು.

ಜಿಎಂಐಟಿ ಅತಿಥಿ ಗೃಹಕ್ಕೆ ತೆರಳಿದ ಶಿವಕುಮಾರ್‌ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದನ್ನು ಘೋಷಿಸಿದ್ದಾರೆ. ಪಾಲಿಕೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ಮೇಯರ್‌ಗೆ ಸಲ್ಲಿಸಿದ್ದಾರೆ.

ಶಾಸಕ ಎಸ್‌.ಎ. ರವೀಂದ್ರನಾಥ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಜಯಪ್ರಕಾಶ್‌ ಕೊಂಡಜ್ಜಿ ಅವರೂ ಇದ್ದರು.

‘ಬೆಳಗಿನಿಂದ ಸಂಜೆಯವರೆಗೆ ಕಾಂಗ್ರೆಸ್‌ನ ಎಲ್ಲ ಸದಸ್ಯರು ನಾವು ಒಟ್ಟಿಗೆ ಇದ್ದೆವು. ರಾತ್ರಿ ನಮ್ಮಲ್ಲಿಂದ ಹೊರಗೆ ಹೋಗಿರುವ ಅವರು ಬಿಜೆಪಿಗೆ ಸೇರಿದ್ದಾರೆ. ನಾವು ಅಷ್ಟು ಬೆಂಬಲ ನೀಡಿದ್ದೆವು. ವರಿಷ್ಠರು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದರು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿಯನ್ನು ಕಂಡು, ಬಿಜೆಪಿಯ ತತ್ವ ಸಿದ್ಧಾಂತವನ್ನು ಒಪ್ಪಿ ಬಿಜೆಪಿಗೆ ಬರುತ್ತೇನೆ ಎಂದು ದೇವರಮನಿ ಶಿವಕುಮಾರ್‌ ಹೇಳಿದರು. ಅವರಾಗಿಯೇ ಪಕ್ಷಕ್ಕೆ ಬರುವಾಗ ನಾವು ಬರಮಾಡಿಕೊಳ್ಳಬೇಕಾಗುತ್ತದೆ. ಬುಧವಾರ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯೆಗಾಗಿ ಸಂಪರ್ಕಿಸಲು ಯತ್ನಿಸಿದಾಗ, ದೇವರಮನಿ ಶಿವಕುಮಾರ್‌ ಕರೆ ಸ್ವೀಕರಿಸಿಲ್ಲ.

ಕಳೆದ ವರ್ಷ ಮೇಯರ್‌ ಚುನಾವಣೆ ಮುಗಿದ ತಕ್ಷಣ ಭಾರತ್‌ ಕಾಲೊನಿ ವಾರ್ಡ್‌ನ ಯಶೋದಾ ರಾಜೀನಾಮೆ ನೀಡಿದ್ದರು. ಇದೀಗ ಯಲ್ಲಮ್ಮನಗರ ವಾರ್ಡ್‌ನ ಶಿವಕುಮಾರ್ ರಾಜೀನಾಮೆ ನೀಡಿದ್ದರಿಂದ ಎರಡು ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು