ಶುಕ್ರವಾರ, ಜೂನ್ 18, 2021
21 °C
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಖಾಸಗೀಕರಣದಿಂದ ದೇಶದ ಅಭಿವೃದ್ಧಿ: ಉದ್ಯಮಿ ವಿಜಯ ಸಂಕೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇಶದ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಖಾಸಗೀಕರಣವೊಂದೇ ಸೂಕ್ತ ಹಾಗೂ ಪರಿಹಾರ ಮಾರ್ಗ ಎಂದು ವಿಆರ್‍ಎಲ್ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯದಿಂದ ಸೋಮವಾರ ಏರ್ಪಡಿಸಿದ್ದ ‘ಸಾಧನೆ-ಪ್ರೇರಣೆ ಕುರಿತು ಸಾಧಕರೊಂದಿಗೆ ಮಾತುಕತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನ ಯಾವುದೇ ದೇಶದಲ್ಲಿಯೂ ಸರ್ಕಾರವೇ ಕಂಪನಿಗಳನ್ನು ತೆರೆದು ವಹಿವಾಟು ನಡೆಸುವ ಸಂಪ್ರದಾಯವಿಲ್ಲ. ಶಿಕ್ಷಣ, ಆರೋಗ್ಯ, ಮೂಲಸೌಲಭ್ಯ ಅಭಿವೃದ್ಧಿಗೆ ಮಾತ್ರ ಸರ್ಕಾರದ ಸೇವೆ ಸೀಮಿತವಾಗಿವೆ. ಇದರಿಂದ ಎಲ್ಲೆಡೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ’ ಎಂದು ಹೇಳಿದರು.

‘ಭಾರತದಲ್ಲಿ ರಾಜಕೀಯ ಮತ್ತು ಸ್ವಹಿತಾಸಕ್ತಿಗಾಗಿಯೇ ಸರ್ಕಾರ ಸಂಸ್ಥೆಗಳು ಆರಂಭಿಸಿದಂತಾಗಿದೆ. ಸರ್ಕಾರದ ಹೆಸರಿನಲ್ಲಿ ನಿಗಮ, ಮಂಡಳಿ, ಕಾರ್ಖಾನೆಗಳು ಆರಂಭವಾಗಿವೆ. ಕೆಲವರನ್ನು ರಾಜಕೀಯವಾಗಿ ತೃಪ್ತಿಪಡಿಸುವುದನ್ನು ಹೊರತುಪಡಿಸಿದರೆ ಅವುಗಳಿಂದ ಸಾರ್ವಜನಿಕರಿಗೆ ಎಷ್ಟು ಉಪಯೋಗವಾಗಿದೆ, ಅದರ ಒಟ್ಟಾರೆ ಪ್ರಯೋಜನ ಯಾರಿಗೆ ಆಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಆದರೆ ರಾಜಕಾರಣಿಗಳು ಅವುಗಳ ಹೆಸರಿನಲ್ಲಿ ಲಾಭ ಪಡೆಯುತ್ತಿದ್ದಾರೆ. ಅಧಿಕಾರ ಅನುಭವಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ’ ಎಂದರು.

‘ಯಾರೂ ಯಾವುದೇ ಸಾಧಕರನ್ನು ಅನುಕರಣೆ ಮಾಡಬಾರದು. ಅವರ ಸಾಧನೆ ಪ್ರೇರಣೆಯಿಂದ ನಿಮ್ಮದೇ ಶೈಲಿಯಲ್ಲಿ, ನಿಮ್ಮದೇ ಯೋಜನೆ ಮತ್ತು ಯೋಚನೆಯಿಂದ ಕಾರ್ಯ ರೂಪಿಸಿಕೊಳ್ಳಿ. ನಷ್ಟ, ಸಮಸ್ಯೆ, ಸವಾಲುಗಳು ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯ. ಅವುಗಳನ್ನು ಮೆಟ್ಟಿ ಮುನ್ನಡೆಯುವ ವಿಭಿನ್ನ ದಾರಿ ಕಂಡುಕೊಳ್ಳಿ. ಸೋಲು, ಅವಮಾನ, ನಷ್ಟದ ಅನುಭವ ಉನ್ನತಿಗೆ ಹಾದಿ ತೋರುತ್ತದೆ’ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಎಲ್ಲ ನೆರವು ನೀಡಲು ವಿಆರ್‍ಎಲ್ ಸಂಸ್ಥೆ ಬದ್ಧವಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ವೃತ್ತಿಪರ ಕೌಶಲ, ಅಭಿವೃದ್ಧಿ, ಮಾರ್ಗದರ್ಶನ, ತರಬೇತಿ ನೀಡುವ ಕುರಿತು ಸಂಸ್ಥೆಯ ಆಡಳಿತ ಮಂಡಳಿ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ‘ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಮುನ್ನುಗ್ಗುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ, ಸಾಧನೆಗೆ ಬಡತನ ಅಥವಾ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ. ಅದಕ್ಕೆ ಇಚ್ಛಾಶಕ್ತಿ ಅಗತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು