ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರಿಗೆ ಜನಪರ ಸಮಸ್ಯೆಗಳು ಕಾಣಿಸಲಿಲ್ಲವೇ?

ಬಿಜೆಪಿ ಕಾರ್ಯಕಾರಿಣಿ: ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಪ್ರಶ್ನೆ
Last Updated 6 ನವೆಂಬರ್ 2020, 16:26 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ಚಿಂತಿಸುವುದನ್ನು ಬಿಟ್ಟು ‘ಲವ್ ಜಿಹಾದ್’, ಗೋಹತ್ಯೆ ನಿಷೇಧದ ಬಗ್ಗೆ ಚರ್ಚೆ ನಡೆಸಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ತೇಲಿಬಿಟ್ಟು ದೇಶದಲ್ಲಿ ಸಾಮರಸ್ಯ ಹಾಳುಗೆಡುವುದೇ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಸೂಚಿಯಾಗಿದೆ’ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆರೋಪಿಸಿದರು.

‘1954ರ ಕಾಯ್ದೆಯ ಪ್ರಕಾರ ವರನಿಗೆ 21 ಮತ್ತು ವಧುವಿಗೆ 18 ವರ್ಷ ತುಂಬಿದ್ದು, ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ಯಾವುದೇ ವ್ಯಕ್ತಿ, ಧರ್ಮ ಅಥವಾ ಜಾತಿಯವರನ್ನಾದರೂ ವಿವಾಹವಾಗಬಹುದು. ಆದರೆ, ಬಿಜೆಪಿಯವರು ರಾಜಕೀಯದ ಹೊಟ್ಟೆಪಾಡಿಗಾಗಿ ‘ಲವ್ ಜಿಹಾದ್’ ಪದವನ್ನು ಸೃಷ್ಟಿಸಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಕೋವಿಡ್‌ನಿಂದಾಗಿ ಹಲವು ಉದ್ಯಮಗಳು ಮುಚ್ಚಿಹೋಗಿವೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣಿಸಿ ಒಂದೊತ್ತಿನ ಊಟಕ್ಕೂ ಜನರು ಪರಿತಪಿಸುವ ಸಮಯದಲ್ಲಿ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ ಮಾಡಿರುವುದು ಖಂಡನೀಯ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿದರು.

‘ಗೋಹತ್ಯೆ ನಿಷೇಧಕ್ಕೆ ಮೊದಲು ತಕ್ಷಣದಿಂದಲೇ ಗೋಮಾಂಸ ರಫ್ತನ್ನು ಸರ್ಕಾರ ನಿಷೇಧಿಸಲಿ. ಈ

ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಏಕೆಂದರೆ ಬಿಜೆಪಿಯ ಸಂಗೀತ್ ಸೋಮ್ ಅವರು ದೇಶದ ಬಹುದೊಡ್ಡ ಗೋಮಾಂಸ ರಫ್ತುದಾರರಾಗಿದ್ದಾರೆ’ ಎಂದು ಟೀಕಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ, ‘ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿದೆ. ನ್ಯಾಯಾಲಯದಲ್ಲಿ ಈ ಹಿಂದೆಯೆ ಪ್ರಕರಣ ಬಿದ್ದುಹೋದರೂ ಈಗ ರಾಜಕೀಯ ದುರುದ್ದೇಶದಿಂದ ಅದನ್ನು ಮುನ್ನೆಲೆಗೆ ತಂದು ಅವರನ್ನು ಬಂಧಿಸಲಾಗಿದೆ. ಶಿರಾ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿದರು.

ಪಾಲಿಕೆ ಸದಸ್ಯ ಚಮನ್‌ ಸಾಬ್ ಮಾತನಾಡಿ, ‘ಗೋಮಾಂಸ ತಿನ್ನಬಾರದು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಗೋವಿನ ಹಾಲು ಮತ್ತು ತುಪ್ಪ ತಿಂದರೆ ಒಳ್ಳೆಯದು ಎಂದು ಇಸ್ಲಾಂ ಧರ್ಮದಲ್ಲಿದೆ. ಅದಕ್ಕಾಗಿ ನಮ್ಮ ಧರ್ಮಗುರು ಪ್ರವಾದಿ ಪೈಗಂಬರು ಎಂದಿಗೂ ಗೋಮಾಂಸ ತಿನ್ನಲಿಲ್ಲ. ಆದರೆ ಗೋಮಾಂಸ ಆರೋಗ್ಯಕ್ಕೆ ಹಾನಿಕಾರಕ ಎಂಬ ಆದೇಶ ಇಲ್ಲ. ಅದನ್ನು ನಮ್ಮ ಆಯ್ಕೆಗೆ ಬಿಟ್ಟಿದ್ದಾರೆ’ ಎಂದರು.

ಸೈಯದ್ ಚಾರ್ಲಿ, ಕೆ.ಎಂ.ಮಂಜುನಾಥ್, ಡಿ.ಶಿವಕುಮಾರ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT