ಶುಕ್ರವಾರ, ಆಗಸ್ಟ್ 19, 2022
25 °C

ದಿನೇಶ್‌ ಶೆಟ್ಟಿಯ ಭ್ರಷ್ಟಾಷಾರ ಶೀಘ್ರ ಬಹಿರಂಗ: ಮೇಯರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಿನೇಶ್‌ ಶೆಟ್ಟಿ ಸೋತು ಕೆಲಸ ಇಲ್ಲದೇ ಇರುವುದರಿಂದ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಇದು ಅತಿಯಾಗುತ್ತಿದೆ. ಯಾರಿಗೆಲ್ಲ ಡೋರ್‌ನಂಬರ್‌ ಕೊಟ್ಟಿದ್ದಾರೆ. ತಮ್ಮ ಅನುಕೂಲಕ್ಕಾಗಿ ಎಷ್ಟು ಟೆಂಡರ್‌ ಬದಲಾಯಿಸಿದ್ದಾರೆ, ಕರೆದಿದ್ದಾರೆ ಎಂಬ ಪಟ್ಟಿಯೇ ಇದೆ. ಅದನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಎಚ್ಚರಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಯರ್‌ ಮತ್ತು ಕಮಿಷನರ್‌ ಒಪ್ಪಂದ ಮಾಡಿಕೊಂಡು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಾನು ಮೇಯರ್‌ ಆದಾ ಮರು ತಿಂಗಳಿನಿಂದ ಕೊರೊನಾ ಬಂದಿದೆ. ಒಂದೇ ಒಂದು ಟೆಂಡರ್‌ ಕರೆದಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಲೂ ಕೊರೊನಾ ಅಡ್ಡಿಯಾಗಿದೆ. ಸುಳ್ಳು ಆರೋಪ ಮಾಡುವುದಕ್ಕಾದರೂ ಕೆಲಸ ನಡೆದಿರಬೇಕಲ್ಲ. ದಿನೇಶ್‌ ಶೆಟ್ಟಿ ನಗರಸಭೆ ಸದಸ್ಯನಾಗಿ ಐದು ವರ್ಷ, ಪಾಲಿಕೆ ಸದಸ್ಯನಾಗಿ 10 ವರ್ಷ ತಿಂದು ತಿಂದು ಅವರಿಗೆ ಅದೇ ಅಭ್ಯಾಸವಾಗಿದೆ. ಅದನ್ನೇ ನಮ್ಮ ಮೇಲೆ ಆರೋಪಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಅವರು ಭ್ರಷ್ಟಾಚಾರ ಮಾಡಿದ್ದರೆ ಯಾಕೆ ಬಹಿರಂಗಪಡಿಸುತ್ತಿಲ್ಲ ಎಂಬ ಪ್ರಶ್ನೆಗೆ, ‘ಶೀಘ್ರದಲ್ಲಿ ಬಹಿರಂಗಪಡಿಸುತ್ತೇನೆ’ ಎಂದು ಭರವಸೆ ನೀಡಿದರು.

ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಇಂಥವರಿಂದಲೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಅವರನ್ನು ಕಾಂಗ್ರೆಸ್‌ನಿಂದ ಹೊರ ಹಾಕಲಿ’ ಎಂದು ಸಲಹೆ ನೀಡಿದರು.

‘ಸ್ಮಾರ್ಟ್‌ಸಿಟಿ ಯೋಜನೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಂದಿಲ್ಲ ಎಂದು ಇನ್ನೊಂದು ಸುಳ್ಳು ಹೇಳಿದ್ದಾರೆ. ಮನಮೋಹನ್‌ಸಿಂಗ್‌ ಪ್ರಧಾನಿ ಆಗಿರುವಾಗ ಸ್ಮಾರ್ಟ್‌ಸಿಟಿ ಯೋಜನೆ ಬಂದಿಲ್ಲ. ಮೋದಿ ಪ್ರಧಾನಿ ಆದ ಮೇಲೆ ಬಂದಿದೆ. ಸಿದ್ದೇಶ್ವರ ಅವರು ನಾಲ್ಕು ಬಾರಿ ಸಂಸದರಾದವರು. ಅವರಿಂದಾಗಿ ದಾವಣಗೆರೆ ಸೇರಿದೆ. ಸಂಸದರು ಸರ್ವಾಧಿಕಾರಿ ಧೋರಣೆ ತೋರುತ್ತಾರೆ ಎಂಬುದು ಕೂಡ ಸುಳ್ಳು. ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಶಾಸಕರು, ಸಂಸದರು ಹೀಗೆ ಎಲ್ಲರಿಗೂ ಸಮಾನ ಗೌರವ ನೀಡುವ ಪಕ್ಷ ನಮ್ಮದು’ ಎಂದು ಉತ್ತರಿಸಿದರು.

ಯಡಿಯೂರಪ್ಪರನ್ನು ಬಿಟ್ಟು ಬಿಜೆಪಿ ಗೆಲ್ಲಲಿ ಎಂದು ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬವನ್ನು ಬಿಟ್ಟು, ದೇಶದಲ್ಲಿ ಗಾಂಧಿ ಕುಟುಂಬವನ್ನು ಬಿಟ್ಟು ಕಾಂಗ್ರೆಸ್‌ ಮೊದಲು ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಲಿ ಎಂದು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಟಿ. ವೀರೇಶ್‌ ಸವಾಲೆಸೆದರು.

‘ನಗರಸಭೆ ಕಾಲದಿಂದಲೂ ಕಾಂಗ್ರೆಸ್‌ ಮುಂದುವರಿಸಿರುವ ಭ್ರಷ್ಟಾಚಾರದ ಕೊಂಡಿಯನ್ನು ತಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಅದರ ಮೊದಲ ಪ್ರಯತ್ನವಾಗಿ ಜನರು ಆನ್‌ಲೈನ್‌ ಮೂಲಕವೇ ತೆರಿಗೆ ಕಟ್ಟುವ, ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ಇ– ಆಸ್ತಿ ಜಾರಿಗೆ ತರುತ್ತಿದ್ದೇವೆ’ ಎಂದು ತೆರಿಗೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಕೆ. ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು