ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ಪಂದನವನ್ನು ಹಗುರವಾಗಿ ಪರಿಗಣಿಸದಿರಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಅಧಿಕಾರಿಗಳಿಗೆ ಎಚ್ಚರಿಕೆ
Last Updated 6 ಜನವರಿ 2020, 14:28 IST
ಅಕ್ಷರ ಗಾತ್ರ

ದಾವಣಗೆರೆ: ಜನಸ್ಪಂದನವನ್ನು ಅಧಿಕಾರಿಗಳು ಹಗುರವಾಗಿ ಪರಿಗಣಿಸುತ್ತಿರುವುದು ಕಂಡುಬಂದಿದೆ. ಈ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಜನರ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ಆದರೆ ಏನು ಕ್ರಮ ಕೈಗೊಂಡಿದ್ದೀರಿ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತರಾಟೆಗೆ ತೆಗೆದುಕೊಂಡರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನಕ್ಕೆ ಅಧಿಕಾರಿಗಳು ತಡವಾಗಿ ಬರುತ್ತಿರುವುದನ್ನು, ಹಿಂದಿನ ಅಹವಾಲುಗಳ ಬಗ್ಗೆ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಬಿಸಿಮುಟ್ಟಿಸಿದರು.

‘ತೋರಿಕೆಗಾಗಿ ಜನಸ್ಪಂದನ ನಡೆಸುತ್ತಿಲ್ಲ. ನಿಮ್ಮ ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿದ್ದರೆ ಜನ ಯಾಕೆ ಇಲ್ಲಿ ಬಂದು ಅಹವಾಲು ಹೇಳಿಕೊಳ್ಳುತ್ತಿದ್ದರು? ನೀವು ಕೆಲಸ ಸರಿ ಮಾಡದ ಕಾರಣ ಅದನ್ನು ಸರಿಪಡಿಸಲು ನಾನು ಜನಸ್ಪಂದನ ನಡೆಸುತ್ತಿದ್ದೇನೆ. ಕಳೆದ ಆಗಸ್ಟ್‌ನಿಂದ ಇಲ್ಲಿಯವರೆಗೆ ಬಂದ ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಏನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಇನ್ನು ಒಂದು ವಾರದ ಒಳಗೆ ತಿಳಿಸಬೇಕು’ ಎಂದು ಸೂಚನೆ ನೀಡಿದರು.

ಹರಿಹರದ ಬಾತಿ ಗ್ರಾಮದಲ್ಲಿ ಹೈನುಗಾರಿಕೆ ಮತ್ತು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲು ಮಂಜೂರಾದ ಜಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆಯುರ್ವೇದಿಕ್ ನರ್ಸಿಂಗ್ ಕಾಲೇಜುನ್ನು ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಲ್ಲಿಯೂ ಮಾಹಿತಿ ಇಲ್ಲ. ಇಲ್ಲಿ ಭೂಮಿಯನ್ನು ವಂಚನೆಯಿಂದ ಪಡೆದುಕೊಂಡು ಕಾಲೇಜು ನಡೆಸುತ್ತಿದ್ದಾರೆ ಎಂದು ಕಳೆದ ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅನಾಥ ಶವಗಳ ಮಾರಾಟದ ಬಗ್ಗೆಯೂ ಕ್ರಮಗಳಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ದೂರಿದರು.

ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚನೆಗೊಂಡಿದೆ. ಪರಿಶೀಲನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಗಳೂರು ತಾಲ್ಲೂಕಿನ ಚಿಕ್ಕಬಂಟನಹಳ್ಳಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳವೆಬಾವಿ ಕೊರೆಸಬೇಕು. ಗ್ರಾಮಗಳಿಗೆ ಬಸ್ ಸೌಲಭ್ಯಗಳನ್ನು ಒದಗಿಸಬೇಕು. ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ಆರಂಭಿಸಬೇಕು ಮತ್ತು ಗ್ರಾಮಠಾಣಾ ಜಾಗವನ್ನು ಸರ್ವೇ ಮಾಡಿಸಿ ಗುರುತಿಸಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು.

ಪ್ರತಿ ವರ್ಷ ಬೆಳೆ ವಿಮೆ ಪಾವತಿಸಿದ್ದೇನೆ. ಈ ವರ್ಷದ ಅತಿ ವೃಷ್ಟಿಗೆ ಬೆಳೆ ಸಂಪೂರ್ಣ ಹಾಳಾಗಿದೆ. ವಿಮೆ ಕೇಳಲು ಹೋದರೆ ವಿಮೆ ಹಣ ನೀಡುತ್ತಿಲ್ಲ ಎಂದು ಹರಿಹರ ನಿವಾಸಿ ಎ.ಎಚ್. ರಾಜು ಅಳಲು ತೋಡಿಕೊಂಡರು.

ಹಿಂದಿನ ಜನಸ್ಪಂದನ ಸಭೆಯಲ್ಲಿ ಅರ್ಜಿ ನೀಡಿದ್ದರೂ ತಹಶೀಲ್ದಾರರ ಕಚೇರಿಯಲ್ಲಿ ಖಾತೆ ಮಾಡಿಕೊಡುತ್ತಿಲ್ಲ ಎಂದು ಆಲೂರು ಗ್ರಾಮಸ್ಥರೊಬ್ಬರು ದೂರಿದರು.

ಕಂದಗಲ್ಲು ಗ್ರಾಮದಲ್ಲಿರುವ ತಮ್ಮ ಸ್ವಂತ ಆಸ್ತಿ ಪಾಲುದಾರಿಕೆಗಾಗಿ ಬೇಕಾಗುವ ಫಾರಂ 9 ಮತ್ತು 11ರ ದಾಖಲಾತಿಗಾಗಿ 6 ವರ್ಷಗಳಿಂದ ಅಲೆದಾಡುತ್ತಿದ್ದೇನೆ. ಆದರೂ ನನಗೆ ದಾಖಲೆಗಳನ್ನು ನೀಡುತ್ತಿಲ್ಲ. ಇ-ಸ್ವತ್ತು ಮಾಡಿಸಿಕೊಡಬೇಕು ಎಂದು ನಿಟುವಳ್ಳಿಯ ಸುಶೀಲಮ್ಮ ಮನವಿ ಮಾಡಿದರು.

ಜಯನಗರದ ಮುಖ್ಯ ರಸ್ತೆ, ಹೈಟೆಕ್ ಆಸ್ಪತ್ರೆ ಹತ್ತಿರ ಪೊಲೀಸ್ ನಾಕಾಬಂಧಿ ಚೌಕವನ್ನು ನಿರ್ಮಿಸಲಾಗಿದೆ. ಅಲ್ಲಿ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ ಎಂದು ಎಸ್. ಜಿ ಸೋಮಶೇಖರ್ ತಿಳಿಸಿದರು.

ಸ್ವಂತ ಜಾಗದಲ್ಲಿ ರಾಜಾಕಾಲುವೆ ನಿರ್ಮಿಸಿದ್ದು, ತಮ್ಮ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರ ಸರ್ವೇ ಕಾರ್ಯ ಮಾಡಿಸಬೇಕು ಎಂದು ನಿಟುವಳ್ಳಿಯ ವ್ಯಕ್ತಿ ದೂರಿದರು.

ಹಲವು ಸಮಸ್ಯೆಗಳ ಬಗ್ಗೆ ಅಹವಾಲುಗಳು ಸಲ್ಲಿಕೆಯಾದವು. ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಜಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT