ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಚರಂಡಿಯಲ್ಲಿ ತುಂಬಿ ತುಳುಕುತ್ತಿರುವ ಕಸ, ಹಂದಿಗಳಿಗೆ ಅಲ್ಲೇ ವಾಸ

Last Updated 26 ಜನವರಿ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಕಸದ ರಾಶಿ, ಕೊಳಚೆ ಹೆಚ್ಚಾದಷ್ಟು ಹಂದಿಗಳಿಗೆ ಹಬ್ಬ. ದಾವಣಗೆರೆಯಲ್ಲಿ ಇಂತಹ ವಾತಾವರಣ ಇರುವುದಕ್ಕೆ ಹಂದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂತಹ ವಾತಾವರಣವನ್ನು ನಗರದಲ್ಲಿನ ಒಳಚರಂಡಿ ವ್ಯವಸ್ಥೆ ಸೃಷ್ಟಿಸಿದೆ. ಒಳಚರಂಡಿಗಳಲ್ಲಿ ಕಸ ಕಡ್ಡಿಗಳು ಬಿದ್ದು ಕಟ್ಟಿಕೊಂಡರೆ ಸಾಕು. ಅಲ್ಲಿ ಹಂದಿಗಳು ಬಿಡಾರ ಹೂಡುತ್ತವೆ.

ಹಳೆ ದಾವಣಗೆರೆಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಚರಂಡಿಯೇ ಇಲ್ಲ ಇನ್ನೂ ಒಳಚರಂಡಿ ಎಲ್ಲಿಂದ ಬರಬೇಕು ಎಂಬಂತಿದೆ ಅಲ್ಲಿನ ಪರಿಸ್ಥಿತಿ. ಕುಡಿಯುವ ನೀರಿನ ಸಂಪರ್ಕದ ಪೈಪ್‍ಗಳಲ್ಲಿ ಕೊಳಚೆ ನೀರು ಹಾದು ಬರುತ್ತಿವೆ. ಹಾಗಾಗಿ ಕುಡಿಯುವ ನೀರಿನಲ್ಲಿ ಕೊಳಚೆ ನೀರು ಮಿಶ್ರಣವಾಗಿ ಬರುತ್ತದೆ. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ. ಒಳಚರಂಡಿ, ಯುಜಿಡಿ ಪೈಪ್‍ಲೈನ್ ಹಾಗೂ ರಾಜ ಕಾಲುವೆಗಳು ಹಂದಿಗಳ ತಾಣಗಳಾಗಿವೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಅವುಗಳ ನೆಪದಲ್ಲಿ ಒಳಚರಂಡಿಗಳನ್ನು ಅಗೆಯಲಾಗಿದೆ. ಕೊಳಚೆ ನೀರು ಹರಿಯಲು ಜಾಗವಿಲ್ಲದೇ ಮನೆಯ ಮುಂದೆಯೇ ನಿಲ್ಲುತ್ತದೆ. ಖಾಲಿ ನಿವೇಶನಗಳಲ್ಲಿ ಕಸ ಬಿಸಾಡುವುದರಿಂದ ಎದುರಿನ ಚರಂಡಿ ಕಸದಿಂದ ತುಂಬಿಕೊಳ್ಳುತ್ತದೆ. ಇದರಿಂದ ಕೊಳಚೆ ನೀರು ಹೋಗಲು ಜಾಗವಿಲ್ಲದೇ ದುರ್ವಾಸನೆ ಬೀರುತ್ತಿವೆ. ಇನ್ನೂ ಹೊಸ ಬಡಾವಣೆಗಳ ಪರಿಸ್ಥಿತಿ ಹೇಳ ತೀರದು, ಅಲ್ಲಿ ಕೆಲವು ಬಡಾವಣೆಗಳಲ್ಲಿ ಚರಂಡಿಯೇ ಇಲ್ಲ. ಮತ್ತೆ ಕೆಲವು ಕಡೆ ನಿರ್ಮಾಣ ಹಂತದಲ್ಲಿವೆ.

ಇಲ್ಲಿನ ಎಚ್.ಕೆ.ಆರ್. ನಗರದಲ್ಲಿ ರಾಜಕಾಲುವೆ ಸೃಷ್ಟಿಸಿರುವ ಸಮಸ್ಯೆ ಅಷ್ಟಿಷ್ಟಲ್ಲ. ರಾಜಕಾಲುವೆಯು ರಸ್ತೆಯ ಪಕ್ಕದಲ್ಲೇ ಇರುವುದರಿಂದ ಅಲ್ಲಿನ ಕೊಳಚೆ ನೀರು ರಸ್ತೆಯ ಮಣ್ಣನ್ನು ನುಂಗಿ ಹಾಕುತ್ತಿದೆ. ಇದರಿಂದಾಗಿ ರಸ್ತೆಯ ಮಣ್ಣು ಸ್ವಲ್ಪ ಸ್ವಲ್ಪವಾಗಿ ಕಾಲುವೆಯೊಳಗೆ ಸೇರುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ರಸ್ತೆಯೇ ರಾಜಕಾಲುವೆಯೊಳಗೆ ಮುಳುಗಿ ಹೋಗುತ್ತದೆ. ರಾಜಕಾಲುವೆಯ ದುರ್ವಾಸನೆಯನ್ನು ಕುಡಿದು ಬದುಕಬೇಕಾದ ಪರಿಸ್ಥಿತಿ ಅಕ್ಕಪಕ್ಕದ ನಿವಾಸಿಗಳದ್ದು.

3ನೇ ವಾರ್ಡ್‍ನ ಬೀಡಿ ಲೇಔಟ್‍ನಲ್ಲಿ ಕುಡಿಯುವ ನೀರಿನ ಪೈಪ್‍ನಲ್ಲಿ ಕೊಳಚೆ ನೀರು ಹರಿದು ಬರುತ್ತಿದೆ. ಅಲ್ಲಿನ ಮಹಿಳೆಯೊಬ್ಬರು ಸೆರಗಿನಲ್ಲಿ ಮೂಗನ್ನು ಮುಚ್ಚಿಕೊಂಡು ಕೊಡದಲ್ಲಿ ನೀರನ್ನು ಹಿಡಿಯುತ್ತಿದ್ದರು. ಅಲ್ಲಿಯೇ ಮನೆಯೊಂದು ನಿರ್ಮಾಣ ಹಂತದಲ್ಲಿದ್ದು, ಕಬ್ಬಿಣ, ಮರಳು, ಜಲ್ಲಿಯನ್ನು ಚರಂಡಿಯೊಳಗೆ ಹಾಕಿರುವುದರಿಂದ ಕೊಳಚೆ ನೀರು ಹೋಗಲು ಜಾಗವಿಲ್ಲದಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು, ಅದರ ಮೇಲೆ ನಳದಲ್ಲಿ ಕುಡಿಯುವ ನೀರು ಹರಿಯುತ್ತಿದ್ದು, ಒಂದಕ್ಕೊಂದು ಮಿಶ್ರಣವಾಗಿವೆ. ಮಿರ್ಜಾ ಇಸ್ಮಾಯಿಲ್ ನಗರದಲ್ಲಿ ಮಳೆ ಬಂದರೆ ಮನೆಗೆ ನೀರು ನುಗ್ಗುತ್ತದೆ ಎಂದು ಅಲ್ಲಿನ ಮಹಿಳೆ ಶಹನಾಜ್ ಅಳಲು ತೋಡಿಕೊಳ್ಳುತ್ತಾರೆ.

‘ದಾವಣಗೆರೆ ಹಳೇ ಭಾಗದಲ್ಲಿ ಚಿಕ್ಕ ಪೈಪ್‌ಗಳನ್ನು ಅಳವಡಿಸಿರುವುದರಿಂದ ಕಟ್ಟಿಕೊಳ್ಳುತ್ತವೆ. ಹೊಸ ಲೈನ್‌ಗಳನ್ನು ಅಳವಡಿಸಬೇಕು. ಸ್ಮಾರ್ಟ್‌ ಸಿಟಿ ಕೆಲಸಗಳು ಕುಂಟುತ್ತಾ ಸಾಗುತ್ತಿವೆ. ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ನಡುವೆ ಸಮನ್ವಯ ಇಲ್ಲ. ಜನರು ಕಸವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ’ ಎನ್ನುತ್ತಾರೆ ದೇವರಮನಿ ಶಿವಕುಮಾರ್.

‘ಶನೇಶ್ವರ ರೈಸ್‌ಮಿಲ್ ಬಳಿ 23 ಕುಟುಂಬ ವಾಸ ಮಾಡುತ್ತಿದ್ದು, ಒಳಚರಂಡಿಯನ್ನೇ ನಿರ್ಮಾಣ ಮಾಡಿಲ್ಲ. ಹುಲ್ಲು ಕೋಯ್ದು ಜೀವನ ಮಾಡುತ್ತಿದ್ದಾರೆ. ಮಳೆ ಬಂದರೆ ಮನೆಗೆ ನೀರು ನುಗ್ಗುತ್ತದೆ. ಸಿಮೆಂಟ್ ರಸ್ತೆ ಎತ್ತರದಲ್ಲಿ ಕಟ್ಟುವುದರಿಂದ ಮಳೆ ನೀರು ಬಂದರೆ ಮನೆಗೆ ನುಗ್ಗುತ್ತದೆ’ ಎನ್ನುತ್ತಾರೆ ಆವರಗೆರೆ ವಾಸು.

ಬಾಡಾ ಕ್ರಾಸ್ ಮೋತಿನಗರದಲ್ಲಿ ಸಮಸ್ಯೆ, ಎಸ್.ಎಂ.ಕೃಷ್ಣ ನಗರ, ಎಸ್‍ಜಿಎಂ ನಗರ, ಯಲ್ಲಮ್ಮನಗರಗಳಲ್ಲೂ ಚರಂಡಿಗಳನ್ನು ಮುಚ್ಚಿಲ್ಲ. ಇದರಿಂದಾಗಿ ಸೊಳ್ಳೆ ಕಾಟ ಜಾಸ್ತಿಯಾಗಿದೆ.

‘ನಿಟುವಳ್ಳಿ ಹೊಸ ಬಡಾವಣೆಯ 5ನೇ ಕ್ರಾಸ್, 2ನೇ ಮೇನ್‌ನಲ್ಲಿ ಹಳೆಯ ಚರಂಡಿಯನ್ನು ಮಹಾನಗರ ಪಾಲಿಕೆಯಿಂದ ಒಡೆದು ಹಾಕಿದ್ದು, ಅನಗತ್ಯವಾಗಿದ್ದು, ಹಣ ಪೋಲು ಮಾಡಲಾಗಿದೆ. ಈ ಚರಂಡಿಯ ಮರು ನಿರ್ಮಾಣ ಅನೇಕ ಬಾರಿ ಆಗಿದೆ. ಆ ವೇಳೆ ನಮ್ಮ ಪೈಪ್‌ಗಳನ್ನು ಒಡೆದು ಹಾಕಿ ಸಾಲ ತೀರುವ ಮುನ್ನ ಪುನಃ ಒಡೆದು ಹಾಕಿದ್ದಾರೆ’ ಎಂದು ಅಲ್ಲಿನ ನಿವಾಸಿ ವೈದ್ಯ ಶ್ರೀಧರ ಉಡುಪ ಆರೋಪಿಸುತ್ತಾರೆ.

‘2015ರಿಂದ 2018ರವರೆಗೆ ಪೂರ್ಣವಾಗಿದೆ. ನಗರಪಾಲಿಕೆ ಸಭೆಯಲ್ಲಿ ಯುಜಿಡಿ ಸಮಸ್ಯೆಗಳ ಪಟ್ಟಿ ಮಾಡಿಕೊಟ್ಟಿದ್ದು ಕೋರ್ಟ್ ಮುಂಭಾಗದ ರಸ್ತೆ, ಎಸ್.ಎಂ.ಕೃಷ್ಣ ನಗರ, ಪಿ.ಬಿ. ರಸ್ತೆಯ ಅಗ್ನಿಶಾಮಕ ದಳದ ಮುಂಭಾಗ, ರಾಮ್‌ ಅಂಡ್ ಕೊ ಸರ್ಕಲ್ ಬಳಿ, ಬೂದಾಳ್‌ ರಸ್ತೆ, ಲಾಲ್ ಬಹದ್ದೂರು ಶಾಸ್ತ್ರಿ ನಗರ, ಭರತ್‌ ಕಾಲೊನಿ ಸೇರಿ ಹಲವು ಕಡೆ 10 ಕಿ.ಮೀ. ದೂರದಷ್ಟು ಒಳಚರಂಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಸ್‌.ಎಂ. ಕೃಷ್ಣ ನಗರದ ಬಳಿ ಕಾಮಗಾರಿ ಆರಂಭವಾಗಿದೆ. ಅಗ್ನಿಶಾಮಕ ಠಾಣೆ, ಯರಗುಂಟೆ ಮುಖ್ಯ ರಸ್ತೆಗಳಲ್ಲಿ ನಡೆಯುತ್ತಿರುವ ಕಾಮಗಾರಿ ನಡೆಯುತ್ತಿದೆ’ ಎನ್ನುತ್ತಾರೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ ಎಇಇ ಶಿವಶಂಕರ್.

‘ಒಳಚರಂಡಿ ನಿರ್ಮಾಣಕ್ಕೆ ಹೊಸ ಕ್ರಿಯಾ ಯೋಜನೆ ಇಲ್ಲ. ಹಳೆಯ ಕ್ರಿಯಾ ಯೋಜನೆಯಲ್ಲಿ ದುರಸ್ತಿ ಮಾಡುತ್ತಿದ್ದೇವೆ. ಸ್ಮಾರ್ಟ್‌ ಸಿಟಿಯವರು ಕಾಮಗಾರಿಗಳ ನೆಪದಲ್ಲಿ ರಸ್ತೆ ಅಗೆದರೆ ಪುನಃ ನಿರ್ಮಾಣ ಮಾಡಬೇಕು. ಚರಂಡಿ, ಒಳಚರಂಡಿ ದುರಸ್ತಿಗೆ ಯಾವುದಾದರೂ ಯೋಜನೆಗೆ ಸೇರಿಸಿಕೊಂಡು ದುರಸ್ತಿ ಮಾಡುತ್ತೇವೆ. ಸಮಸ್ಯೆಗಳು ಇದ್ದರೆ ನಗರಪಾಲಿಕೆ ಸದಸ್ಯರು ಹೇಳುತ್ತಾರೆ. ಯಾವುದಾದರೂ ಕ್ರಿಯಾ ಯೋಜನೆಯಡಿ ಕೆಲಸ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಪ್ರಭಾರ ಸೂಪರಿಂಟೆಂಡ್ ಎಂಜಿನಿಯರ್ ಮಂಜುನಾಥ ಕಪ್ಪಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT