ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪ್ರಿಂಕ್ಲರ್‌ ಸೆಟ್‌ ದರ ದುಪ್ಪಟ್ಟು: ರೈತರು ಕಂಗಾಲು

ಬರ ಪರಿಸ್ಥಿತಿ ನಡುವೆ ಸಹಾಯಧನ ಸೌಲಭ್ಯದ ದರ ಏರಿಕೆ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ದಾವಣಗೆರೆ: ಬರದಿಂದಾಗಿ ರಾಜ್ಯದ ರೈತರು ಸಂಕಷ್ಟಕ್ಕೊಳಗಾಗಿರುವ ಹೊತ್ತಿನಲ್ಲೇ ಕೃಷಿ ಇಲಾಖೆಯು ನೀರಾವರಿ ಘಟಕ ಯೋಜನೆಯಡಿ ನೀಡಲಾಗುವ ಹನಿ ನೀರಾವರಿ ಪರಿಕರಗಳ ದರವನ್ನು ದುಪ್ಪಟ್ಟುಗೊಳಿಸಿದೆ. 

ಒಂದೆಡೆ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದುಕೊಳ್ಳಲು ರೈತರನ್ನು ಉತ್ತೇಜಿಸುತ್ತಿರುವ ಸರ್ಕಾರ, ಮತ್ತೊಂದೆಡೆ ಸಹಾಯಧನದಲ್ಲಿ ನೀಡಲಾಗುವ ಕೃಷಿ ಪರಿಕರಗಳ ಬೆಲೆಯನ್ನು ಹೆಚ್ಚಿಸಿದೆ.

ಈ ವರ್ಷ ಸಹಾಯಧನದ ಬಿತ್ತನೆ ಬೀಜದ ದರ ಹೆಚ್ಚಾಗಿತ್ತು. ಈಗ ಸ್ಪ್ರಿಂಕ್ಲರ್‌ ಸೆಟ್‌ಗಳ ಬೆಲೆಯನ್ನು ಏಕಾಏಕಿ ಏರಿಸಿದೆ. ಕಳೆದ ವರ್ಷ ಎರಡು ಇಂಚಿನ ಸ್ಪ್ರಿಂಕ್ಲರ್‌ ಸೆಟ್‌ಗೆ ₹1,746 ಮತ್ತು ಎರಡೂವರೆ ಇಂಚಿನ ಸ್ಪ್ರಿಂಕ್ಲರ್‌ ಸೆಟ್‌ಗೆ ₹1,876 ದರ ಇತ್ತು.‌ ಆದರೆ, ಈ ವರ್ಷ ಎರಡು ಇಂಚಿನ ಸೆಟ್‌ಗೆ ₹4,139 ಮತ್ತು ಎರಡೂವರೆ ಇಂಚಿನ ಸೆಟ್‌ಗೆ ₹4,667 ಬೆಲೆ ನಿಗದಿ ಮಾಡಲಾಗಿದೆ. ಇದರಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಲಾಖೆಯಿಂದ ನೀಡಲಾಗುವ ಒಂದು ಸೆಟ್‌ನಲ್ಲಿ 35 ಪೈಪುಗಳು ಹಾಗೂ 5 ಸ್ಪ್ರಿಂಕ್ಲರ್‌ ಜೆಟ್‌ಗಳು ಇರುತ್ತವೆ. 

ಹನಿ ನೀರಾವರಿ ಘಟಕ ಯೋಜನೆಯಡಿ ಸಹಾಯಧನ ನೀಡುವ ಸೌಲಭ್ಯವನ್ನು ಮೂರು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು.  

ಈ ಬಾರಿ ವಾಡಿಕೆಗಿಂತಲೂ ಕಡಿಮೆ ಮಳೆ ಬಿದ್ದಿರುವುದರಿಂದ ಬೆಳೆ ರಕ್ಷಿಸಲು ಕೆರೆ, ಬಾವಿ, ಹಳ್ಳ ಸೇರಿದಂತೆ ಇತರೆ ಜಲಮೂಲಗಳನ್ನು ರೈತರು ಅವಲಂಬಿಸಿದ್ದಾರೆ. ಸಿಗುವ ಅಲ್ಪಸ್ವಲ್ಪ ನೀರನ್ನು ಹನಿ ನೀರಾವರಿ ಪದ್ಧತಿಯಡಿ ಜಮೀನಿಗೆ ಹರಿಸಿ ಬೆಳೆ ಉಳಿಸಿಕೊಳ್ಳಬೇಕು ಎಂದುಕೊಂಡರೆ ದರ ದುಪ್ಪಟ್ಟಾಗಿದೆ. ಖಾಸಗಿಯಾಗಿ ಖರೀದಿಸಲು ಇನ್ನೂ ಹೆಚ್ಚಿನ ಹಣ ನೀಡಬೇಕು ಎಂದು ರೈತರು ದೂರುತ್ತಾರೆ. 

‘ಸಹಾಯಧನದ ಅಡಿಯಲ್ಲಿ ಸ್ಪ್ರಿಂಕ್ಲರ್‌ ಸೆಟ್‌ ನೀಡುತ್ತಿರುವುದರಿಂದ ಬಡ ರೈತರಿಗೆ ಅನುಕೂಲವಾಗಿತ್ತು. ಕಳೆದ 10 ವರ್ಷಗಳಿಂದ ದರ ₹2,000ರ ಆಸುಪಾಸಿನಲ್ಲಿತ್ತು. ಈಗ ಒಮ್ಮೆಲೇ ‌ಏರಿಕೆ ಮಾಡಲಾಗಿದೆ. ರೈತರ ಪಾಲಿಗೆ ಇದು ಹೊರೆಯಾಗಿ ಪರಿಣಮಿಸಿದೆ’ ಎಂದು ಮಾಯಕೊಂಡದ ರೈತ ರಾಘವೇಂದ್ರ ಅಳಲು ತೋಡಿಕೊಂಡರು.

‘ಒಂದೆಡೆ ಮಳೆ ಕೊರತೆ. ಮತ್ತೊಂದೆಡೆ ಬೆಲೆ ಏರಿಕೆ ಬಿಸಿ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಶ್ರಮಪಟ್ಟು ಬೆಳೆದ ಅಲ್ಪಸ್ವಲ್ಪ ಬೆಳೆಗೂ ಉತ್ತಮ ದರ ಸಿಗುತ್ತಿಲ್ಲ. ಈಗ ತರಕಾರಿ ಬೆಳೆಯಲು ಹನಿ ನೀರಾವರಿ ಅಳವಡಿಸೋಣ ಎಂದು ಇಲಾಖೆಯ ಮೊರೆ ಹೋದರೆ ದರ ದುಪ್ಪಟ್ಟಾಗಿದೆ’ ಎಂದು ರೈತ ಪ್ರತಾಪ್‌ ರಾಮಜೋಗಿ ಬೇಸರಿಸಿದರು.

‘ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಈ ವರ್ಷ ಬಿತ್ತನೆ ಬೀಜದ ದರವೂ ಹೆಚ್ಚಾಗಿದೆ. ಈಗಾಗಲೇ ಗಾಯಗೊಂಡಿರುವ ರೈತರ ಮೇಲೆ ಸರ್ಕಾರ ಪದೇ ಪದೇ ಬರೆ ಎಳೆಯುತ್ತಿದೆ. ಕೃಷಿಕರ ಪಾಡು ಹೇಳತೀರದಾಗಿದೆ’ ಎಂದು ರೈತ ಗೌಡ್ರು ಅಶೋಕ್‌ ನುಡಿದರು.

ದಾಖಲೆ ಹೊಂದಿಸಲು ಹರಸಾಹಸ

ಸಹಾಯಧನದ ಯೋಜನೆ ಅಡಿ ದೊರೆಯುವ ಸ್ಪ್ರಿಂಕ್ಲರ್‌ ಸೆಟ್‌ ಖರೀದಿಸಲು ಹಲವು ದಾಖಲೆ ನೀಡಬೇಕು. ಇವುಗಳನ್ನು ಹೊಂದಿಸಲು ರೈತರು ಹರಸಾಹಸ ಪಡಬೇಕಾಗುತ್ತದೆ.  ‘ಅರ್ಜಿಯೊಂದಿಗೆ ಫಲಾನುಭವಿಯ ಎರಡು ಭಾವಚಿತ್ರ ಪಹಣಿ ಜಲಮೂಲದ ಪ್ರಮಾಣಪತ್ರ ತೋಟಗಾರಿಕೆ ರೇಷ್ಮೆ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಮುಚ್ಚಳಿಕೆ ಪತ್ರ ಆಧಾರ್ ಕಾರ್ಡ್‌ ಬ್ಯಾಂಕ್ ಪಾಸ್ ಬುಕ್‌ ಪೈಪ್‌ ಪೂರೈಸುವ ಕಂಪನಿಗೆ ಹಣ ವರ್ಗಾಯಿಸಿದ ಆರ್‌ಟಿಜಿಎಸ್ ಪ್ರತಿ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಇದು ತಲೆನೋವಾಗಿ ಪರಿಣಮಿಸಿದೆ’ ಎಂದು ರೈತರು ದೂರುತ್ತಾರೆ.

ರಾಜ್ಯಮಟ್ಟದಲ್ಲಿ ಟೆಂಡರ್‌ ಕರೆದು ದರ ನಿಗದಿ ಮಾಡಲಾಗುತ್ತದೆ. ಈಗಿನ ದರ ರೈತರಿಗೆ ಅಷ್ಟೇನು ಹೊರೆಯಾಗುವುದಿಲ್ಲ. ಇದೇ ಸೆಟ್‌ ಅನ್ನು ಖಾಸಗಿಯಾಗಿ ಖರೀದಿಸಿದರೆ ₹ 23000 ನೀಡಬೇಕು.
-ಶ್ರೀನಿವಾಸ್ ಚಿಂತಾಲ್‌, ಜಂಟಿ ಕೃಷಿ ನಿರ್ದೇಶಕ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT