ದಾವಣಗೆರೆ: ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿಯಿಂದ ನಗರದ ವಿವಿಧೆಡೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಭೂಮಿಪೂಜೆ ನೆರವೇರಿಸಿದರು.
ಎಸ್‌ಎಸ್‌ಎಂ ನಗರದಲ್ಲಿ 6 ಎಕರೆ ಪ್ರದೇಶದಲ್ಲಿ ₹ 8 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ, ಕ್ರೀಡಾಂಗಣ ಬಳಿಯಿಂದ ಮಾಗಾನಹಳ್ಳಿ ರಸ್ತೆವರೆಗೆ ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿ, ₹ 5 ಕೋಟಿ ವೆಚ್ಚದಲ್ಲಿ ದೇವರಾಜ ಅರಸ್ ಬಡವಾಣೆಯ ಈಜುಕೊಳ ನವೀಕರಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಯರಗುಂಟೆ, ಚಾಮರಾಜಪೇಟೆ ಮೇನ್, ಬಸಾಪುರ ಪ್ರಾಥಮಿಕ ಶಾಲೆ, ಬಸಾಪುರ ಪ್ರೌಢಶಾಲೆ, ಕರೂರು, ಗಡಿಯಾರ ಕಂಬ, ಭಾರತ್ ಕಾಲೊನಿ ಶಾಲೆ ಸೇರಿ ₹ 2 ಕೋಟಿ ವೆಚ್ಚದಲ್ಲಿ 7 ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಯಿತು.
₹ 1.35 ಕೋಟಿ ವೆಚ್ಚದಲ್ಲಿ ಬಾಷಾ ನಗರದಲ್ಲಿ ನಿರ್ಮಿಸಲಾಗಿರುವ ಪ್ರಸೂತಿ ಕೇಂದ್ರ ಕಟ್ಟಡ ಹಾಗೂ ₹ 3.28 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ದುರ್ಗಾಂಬಿಕಾ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಲಾಯಿತು.
ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಾನು ಸಚಿವನಾಗಿದ್ದ ವೇಳೆ ದಾವಣಗೆರೆ ನಗರವು ಸ್ಮಾರ್ಟ್‍ಸಿಟಿಗೆ ಮೊದಲ ಹಂತದಲ್ಲೇ ಆಯ್ಕೆ ಆಯಿತು. ಇದಕ್ಕೆ ಅಂದಿನ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಅಂದಿನ ಮಹಾನಗರ ಪಾಲಿಕೆ ಆಡಳಿತ ಕಾರಣವಾಗಿತ್ತು’ ಎಂದು ಸ್ಮರಿಸಿಕೊಂಡರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ್, ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಆಯುಕ್ತ ವಿಶ್ವನಾಥ ಮುದಜ್ಜಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಎ.ಬಿ. ರಹೀಂ ಸಾಬ್, ಕೆ. ಚಮನ್‍ಸಾಬ್, ವಿನಾಯಕ ಪೈಲ್ವಾನ್, ಕಬೀರ್, ಜಾಕೀರ್ ಅಲಿ, ಉರುಬಾನು, ಉದಯ್‍ಕುಮಾರ್, ಮುಖಂಡರಾದ ಅಯೂಬ್ ಪೈಲ್ವಾನ್, ಕೊಡಪಾನ ದಾದಾಪೀರ್ ಅವರೂ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.