ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸಹಾಯ ಗುಂಪುಗಳಿಗೆ ಡ್ರೋಣ್‌: ಸಿದ್ದೇಶ್ವರ

Published 10 ಡಿಸೆಂಬರ್ 2023, 5:03 IST
Last Updated 10 ಡಿಸೆಂಬರ್ 2023, 5:03 IST
ಅಕ್ಷರ ಗಾತ್ರ

ದಾವಣಗೆರೆ: ‘ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೃಷಿಗೆ ನೆರವಾಗುವ ನಿಟ್ಟಿನಲ್ಲಿ ₹1,261 ಕೋಟಿ ವೆಚ್ಚದಲ್ಲಿ ಡ್ರೋನ್‍ಗಳನ್ನು ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಹರಿಹರ ತಾಲ್ಲೂಕಿನ ಎಳೆಹೊಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ವಿಕಸಿತ ಭಾರತ ನಮ್ಮ ಸಂಕಲ್ಪ ಯಾತ್ರೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾನೋ ರಸಗೊಬ್ಬರ, ಕೀಟನಾಶಕಗಳ ಸಿಂಪಡಣೆ ಸೇರಿ ಕೃಷಿಯ ವಿವಿಧ ಉದ್ದೇಶಗಳಿಗಾಗಿ ರೈತರಿಗೆ ಬಾಡಿಗೆ ಒದಗಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್ ಒದಗಿಸಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣ ಮತ್ತು ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಬಳಕೆಯೇ ಈ ಯೋಜನೆಯ ಉದ್ದೇಶವಾಗಿದೆ. ಡ್ರೋನ್ ಖರೀದಿಗೆ ಶೇ 80ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದರು.

2022-23ರ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ವರದಿಯ ಪ್ರಕಾರ ದೇಶದಲ್ಲಿ ಸುಮಾರು 1.20 ಕೋಟಿಗೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿದ್ದು, ಈ ಸ್ವಸಹಾಯ ಸಂಘಗಳನ್ನು ಸಬಲೀಕರಣ ಮಾಡುವುದರೊಂದಿಗೆ ಕೃಷಿ ವಲಯಕ್ಕೂ ತಂತ್ರಜ್ಞಾನ ಪ್ರಯೋಜನ ಒದಗಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದೆ’ ಎಂದು ಹೇಳಿದರು.

‘ದೇಶದಾದ್ಯಂತ ಸುಮಾರು 2000 ಪ್ರಚಾರದ ವಾಹನಗಳು, ಸುಮಾರು 1000 ಕೃಷಿ ವಿಜ್ಞಾನ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು, ನಬಾರ್ಡ್ ಹಾಗೂ ಬ್ಯಾಂಕ್‍ಗಳು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ.
ನವೆಂಬರ್ 15ರಿಂದ ಪ್ರಾರಂಭವಾಗಿರುವ ಈ ಕಾರ್ಯಕ್ರಮ ಜನವರಿ 22ರವರೆಗೆ ದೇಶಾದ್ಯಂತ ನಡೆಯಲಿದೆ’ ಎಂದು ಹೇಳಿದರು.

‘ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಇದರಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕು’ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಳೆಸಿರಿಗೆರೆ ಹಾಲೇಶಪ್ಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷ ಹಿಂಡಸಘಟ್ಟೆ ಲಿಂಗರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT