ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಗ್ಗಮ್ಮನ ಜಾತ್ರೆ: ಕುರಿ ಮೇವಿಗೆ ಭರ್ಜರಿ ಬೇಡಿಕೆ

ನಗರದ ಎಲ್ಲೆಡೆ ಮನೆಗಳ ಮುಂದೆ ಕುರಿಗಳ ಸಾಲು, ಬಾಡೂಟಕ್ಕೆ ಸಿದ್ಧತೆ
Last Updated 11 ಮಾರ್ಚ್ 2022, 6:58 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ನಗರ ದೇವತೆ ದುಗ್ಗಮ್ಮನ ಜಾತ್ರೆ ಸಂಭ್ರಮ. ದುರ್ಗಾಂಬಿಕಾ ದೇವಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವಕ್ಕೆ ಭರದಸಿದ್ಧತೆ ನಡೆಯುತ್ತಿದೆ.

ಜಾತ್ರೆ ಅಂಗವಾಗಿ ಮಾರ್ಚ್‌ 16ರಂದು ನಡೆಯುವ ಮಾಂಸದೂಟಕ್ಕೆ ಎಲ್ಲೆಡೆ ಭರ್ಜರಿ ತಯಾರಿ. ಹಳೆ ದಾವಣಗೆರೆ, ತಳವಾರ ಕೇರಿ, ಹೊಂಡದ ಸರ್ಕಲ್‌, ಗಾಂಧಿ ನಗರ, ಎಸ್‌ಕೆಪಿ ರಸ್ತೆ, ಶಿವಾಜಿನಗರ, ಬೂದಾಳ್‌ ರಸ್ತೆ, ಜಾಲಿನಗರ, ವಿನೋಬ ನಗರ, ದೇವರಾಜ್‌ ಅರಸ್‌ ಬಡಾವಣೆ, ನಿಟುವಳ್ಳಿ ಸೇರಿ ಎಲ್ಲೆಡೆ ಮನೆಗಳ ಮುಂದೆ ಕುರಿಗಳ ಸಾಲು ಕಂಡುಬರುತ್ತಿದ್ದು, ಕುರಿಗಳ ಮೇವಿಗೆ ಬೇಡಿಕೆ ಹೆಚ್ಚಿದೆ.

ಹೊಂಡದ ಸರ್ಕಲ್‌, ಹಳೆ ದಾವಣಗೆರೆ, ನಿಟುವಳ್ಳಿಯ ಡಾಂಗೆ ಪಾರ್ಕ್ ಸೇರಿ ಅಲ್ಲಲ್ಲಿ ಕುರಿ ಮೇವಿನ ವ್ಯಾಪಾರ ಜೋರಾಗಿದೆ.

ಕುರಿಗಳನ್ನು ಜಾತ್ರೆಗೆ 15, 20 ದಿನಗಳ ಹಿಂದೆಯೇ ಖರೀದಿಸಿ ತಂದ ಕಾರಣ ಜನರು ಅವುಗಳಿಗೆ ಮೇವಿಗಾಗಿ ಹುಲ್ಲು ಖರೀದಿಗೆ ಮುಗಿ ಬೀಳುತ್ತಿದ್ದಾರೆ.ಬಹುತೇಕ ಬಡಾವಣೆಗಳಲ್ಲಿ ಬೈಕ್‌ನಲ್ಲಿ, ಕೈಯಲ್ಲಿ ಹಸಿರು ಹುಲ್ಲು ಹಿಡಿದು ಹೋಗುವ ಜನರೇ ಕಾಣಸಿಗುತ್ತಿದ್ದಾರೆ. ಪಿಂಡಿಗೆ ₹ 10ರಂತೆ ಹುಲ್ಲಿನ ಮಾರಾಟವಾಗುತ್ತಿದೆ.

ಮಕ್ಕಳು, ಮಹಿಳೆಯರು ಮುಂಜಾನೆಯೇಸಮೀಪದ ತೋಟ, ಗದ್ದೆಗಳಿಗೆ ಹೋಗಿ ಬೆಳಿಗ್ಗೆ 10ರ ಹೊತ್ತಿಗೆ ಹುಲ್ಲನ್ನು ಕೊಯ್ದು ತಂದು ಮಾರಾಟ ಮಾಡುತ್ತಿದ್ದಾರೆ.

ಆವರಗೊಳ್ಳ, ಕಕ್ಕರಗೊಳ್ಳ, ಕುಂದವಾಡ, ಕೊಂಡಜ್ಜಿ, ಬೇತೂರು, ಕೆಂಚನಹಳ್ಳಿ ಸೇರಿ ಸುತ್ತಲಿನ ಹಳ್ಳಿಗಳ ಹೊಲಗಳಿಂದ ಹುಲ್ಲು ತರುತ್ತಿದ್ದಾರೆ.

‘5 ದಿನಗಳಿಂದ ಹುಲ್ಲಿನ ವ್ಯಾಪಾರ ಮಾಡುತ್ತಿದ್ದೇನೆ. ಬೆಳಿಗ್ಗೆಯಿಂದ ಸಂಜೆವರೆಗೆ ಇಲ್ಲಿ ಹುಲ್ಲಿನ ರಾಶಿ ಹಾಕುತ್ತಿದ್ದೇವೆ. ದಿನಕ್ಕೆ 30ರಿಂದ 50 ಪಿಂಡಿ ಹುಲ್ಲು ಮಾರಾಟ ಮಾಡುತ್ತೇವೆ. ₹ 500 ರಿಂದ ₹ 700 ವ್ಯಾಪಾರವಾಗುತ್ತಿದೆ’ ಎಂದರು ಆವರಗೊಳ್ಳದ ಮಹಾದೇವಪ್ಪ.

‘ಸದ್ಯ ಪರೀಕ್ಷೆಗಾಗಿ ತಯಾರಿ ಮಾಡುತ್ತಿರುವ ಕಾರಣ ಕಾಲೇಜಿಗೆ ಹೋಗುತ್ತಿಲ್ಲ. ಮಧ್ಯಾಹ್ನದವರೆಗೆ ಹುಲ್ಲಿನ ವ್ಯಾಪಾರ ಮಾಡುತ್ತಿದ್ದೇನೆ. ಪಿಂಡಿಗೆ ₹ 10 ರಂತೆ ಮಾರಾಟ ಮಾಡುತ್ತಿದ್ದೇವೆ. ದಿನಕ್ಕೆ ₹ 300 ಗೆ ಮೋಸವಿಲ್ಲ’ ಎಂದು ವಿದ್ಯಾರ್ಥಿ ಆಕಾಶ್ ಹೇಳಿದ.

‘ಜಾತ್ರೆಯ ಬಾಡೂಟದವರೆಗೆ ಕುರಿ ಹುಲ್ಲಿಗೆ ಬೇಡಿಕೆ ಇರುತ್ತದೆ. ನಾಲ್ಕು ದಿನಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಕುಂದವಾಡದಿಂದ ಹುಲ್ಲು ತರುತ್ತೇನೆ. ವ್ಯಾಪಾರ ಪರವಾಗಿಲ್ಲ’ ಎಂದರು ಮಲ್ಲಮ್ಮ.

ದಾವಣಗೆರೆಯ ಹೊಂಡದ ವೃತ್ತದಲ್ಲಿ ದುರ್ಗಾಂಬಿಕಾ ಜಾತ್ರೆಯ ಪ್ರಯುಕ್ತ ದುರ್ಗಮ್ಮ ದೇವಿ ಭಕ್ತರು ಸಾಕಿರುವ ಕುರಿಗಳಿಗಾಗಿ ಮೇವು ಮಾರಾಟ ಮಾಡುತ್ತಿರುವುದು ಕಂಡು ಬಂತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಹೊಂಡದ ವೃತ್ತದಲ್ಲಿ ದುರ್ಗಾಂಬಿಕಾ ಜಾತ್ರೆಯ ಪ್ರಯುಕ್ತ ದುರ್ಗಮ್ಮ ದೇವಿ ಭಕ್ತರು ಸಾಕಿರುವ ಕುರಿಗಳಿಗಾಗಿ ಮೇವು ಮಾರಾಟ ಮಾಡುತ್ತಿರುವುದು ಕಂಡು ಬಂತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ದೇವಾಲಯದಲ್ಲಿ ಸಿದ್ಧತೆ: ಜಾತ್ರೆ ಅಂಗವಾಗಿ ನಗರ ದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ಮಂಟಪ ಸೇರಿ ಹಲವು ಸಿದ್ಧತೆಗಳು ನಡೆಯುತ್ತಿವೆ. ಗುರುವಾರ ದೇವಾಲಯದ ಆವರಣದಲ್ಲಿ ಮಳಿಗೆಗಳನ್ನು ಹಾಕಲು ಗುರುತು ಮಾಡುತ್ತಿರುವುದು ಕಂಡುಬಂತು.

ಹುಲ್ಲನ್ನು ಕೊಯ್ದು ತೋಟಗಳಿಂದ ಆಟೊದಲ್ಲಿ ತರುತ್ತೇವೆ. ಆಟೊಗೆ ₹ 100 ರಿಂದ ₹ 150 ಕೇಳುತ್ತಾರೆ. ಟೀ, ತಿಂಡಿ ಎಲ್ಲ ಖರ್ಚು ಕಳೆದು ದಿನಕ್ಕೆ ₹ 500 ಆಗುತ್ತಿದೆ. ಜಾತ್ರೆಯವರೆಗೆ ಮಾತ್ರ ಹುಲ್ಲಿಗೆ ಬೇಡಿಕೆ ಇರುತ್ತದೆ.

–ಮಹಾದೇವಪ್ಪ, ಆವರಗೊಳ್ಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT