ಸೋಮವಾರ, ಜುಲೈ 4, 2022
25 °C
ಮಾರ್ಚ್‌ 13ರಿಂದ 16ರವರೆಗೆ ನಡೆಯಲಿದೆ ದುಗ್ಗಮ್ಮನ ಜಾತ್ರೆ

ದುರ್ಗಾಂಬಿಕಾ ದೇವಿ ಜಾತ್ರೆಯ ಹಂದರ ಕಂಬ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇದೇ ಮಾರ್ಚ್ 13ರಿಂದ 16ರವರೆಗೆ ನಡೆಯಲಿರುವ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿ ಜಾತ್ರೆಯ ಹಂದರ ಕಂಬ ಪೂಜೆಯನ್ನು ಮಂಗಳವಾರ ದೇವಸ್ಥಾನದ ಟ್ರಸ್ಟಿನ ಗೌರವಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕ ನಾಗರಾಜ ಜೋಯಿಸ್ ನೆರವೇರಿಸಿದರು.

ದೇವಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆ ನೆರವೇರಿಸಲಾಯಿತು. ಊರಿನ ಮನೆಗಳಿಗೆ ತೆರಳುವ ಎರಡು ಡಬ್ಬಿ ಗಡಿಗೆಗಳಿಗೆ ಪೂಜೆ ಮಾಡಲಾಯಿತು. ಹಂದರ ಪೂಜೆಯ ನಂತರ ಕಂಬ ನಿಲ್ಲಿಸುವ ಗುಣಿಯಲ್ಲಿ ಹಾಲು-ತುಪ್ಪ, ಮುತ್ತು-ಹವಳ, ಪಂಚಲೋಹ ಮತ್ತು ದಕ್ಷಿಣೆ ಹಾಕಿದ ಬಳಿಕ ಹಂದರ ಕಂಬವನ್ನು
ನಿಲ್ಲಿಸಲಾಯಿತು.

ಮಾರ್ಗಸೂಚಿ ಪಾಲನೆ: ಈಗ ಕೊರೊನಾ ಸೋಂಕು ತಗ್ಗುತ್ತಿದೆ. ಆದರೂ ಸರ್ಕಾರದ ಮಾರ್ಗಸೂಚಿಯಂತೆ ಅಂತರ ಕಾಯ್ದುಕೊಂಡು ದೇವಿಯ ಜಾತ್ರಾ ಮಹೋತ್ಸವ ನೆರವೇರಿಸಲಾಗುವುದು. ಜಾತ್ರೆಯ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವ ಯೋಚನೆ ಸದ್ಯಕ್ಕಿಲ್ಲ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಗೋಪುರಗಳಿಗೆ ಪಂಚಲೋಹ ಲೇಪನ
ನಗರ ದೇವತೆ ದುರ್ಗಾಂಬಿಕಾ ದೇವಿ ದೇವಾಲಯದ ಮೇಲಿನ ಗೋಪುರಗಳಿಗೆ ಪಂಚಲೋಹ ಲೇಪನ ಮಾಡಲಾಗುವುದು. ಶೇ 90ರಷ್ಟು ಹಿತ್ತಾಳೆ ಇರಲಿದೆ. ಶೇ 10ರಷ್ಟು ಉಳಿದ ಲೋಹಗಳು ಇರಲಿವೆ. ಎಲ್ಲ ತಯಾರಿಗಳಾಗಿದ್ದು, ಇನ್ನು 15 ದಿನಗಳಲ್ಲಿ ಗೋಪುರ ಲೇಪನ ಕಾರ್ಯ ಮುಗಿಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾಹಿತಿ ನೀಡಿದರು.

ದೇವಾಲಯದ ಮುಂಭಾಗದಲ್ಲಿ ದೇವಿಯ ಪಾದಗಟ್ಟಿ (ಪಾದುಕೆ) ಇದ್ದು, ಭಕ್ತರೊಬ್ಬರು ಬೆಳ್ಳಿಯ ಪಾದುಕೆ ಮಾಡಿದ್ದಾರೆ.  ಈಗಾಗಲೇ ಈ ಬೆಳ್ಳಿ ಪಾದುಕೆ ಅಲ್ಲಿ ಹಾಕಲಾಗಿದೆ ಎಂದು ಅವರು ತಿಳಿಸಿದರು.

‘ಕೊರೊನಾ ಸೋಂಕಿನಿಂದಾಗಿ ಸರಳವಾಗಿ ಜಾತ್ರೆ ಆಚರಿಸುವ ಕಾರಣ ದೇವಸ್ಥಾನದ ಎದುರು ಜಾತ್ರೆಗೆ ಪ್ರತಿ ಬಾರಿ ನಿರ್ಮಿಸುತ್ತಿದ್ದ ಮಹಾಮಂಟಪವನ್ನು ಈ ಬಾರಿ ನಿರ್ಮಿಸುವುದಿಲ್ಲ. ಸಾಧಾರಣ
ಪೆಂಡಾಲ್ ಹಾಕಿ ಜಾತ್ರೆ ನಡೆಸಲಾಗುವುದು. ಜಾತ್ರೆಯ ಪ್ರಯುಕ್ತ ಇಡೀ ಊರು ಸಂಚರಿಸುವ ಡಬ್ಬಿಗಡಿಗೆಗೂ ಚಾಲನೆ ನೀಡಲಾಗಿದೆ. ನಾನೇ ಮೊದಲು ಕಾಣಿಕೆ ಹಾಕಿದ್ದೇನೆ. ಭಕ್ತರು ತನು, ಮನ, ಧನ ಅರ್ಪಿಸಿ ದುರ್ಗಾಂಬಿಕೆ ಜಾತ್ರೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಿಸಬೇಕು’ ಎಂದು ಕಿವಿಮಾತು
ಹೇಳಿದರು.

ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ‘ಕೋವಿಡ್‍ಗೆ ಸಂಬಂಧಿಸಿದಂತೆ ಫೆ.15 ಮತ್ತು 28ರಂದು ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ. ಅವುಗಳನ್ನು ನೋಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮ, ಕುರಿ ಕಾಳಗ, ಕುಸ್ತಿ ಪಂದ್ಯಾವಳಿ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜಾತ್ರೆಯ ವೇಳೆ ದೇವಿಯ ದರ್ಶನ ಪಡೆಯಲು ಅಂತರ ಕಾಯ್ದುಕೊಂಡು ಸರದಿ ಸಾಲಿನ ವ್ಯವಸ್ಥೆ ಮಾಡಲಾಗುವುದು. ಉರುಳು ಸೇವೆ ನಡೆಸುವ ಭಕ್ತರಿಗಾಗಿ ದೇವಸ್ಥಾನದ ಆವರಣದಲ್ಲಿ ಮರಳು ಮತ್ತು ನೀರಿನ ವ್ಯವಸ್ಥೆ ಮಾಡಲಾಗುವುದು. ಸೇವೆ ನೀಡುವವರು ಒಂದು ತಂಡದಲ್ಲಿ ಐದು ಜನರಿಗಿಂತ ಹೆಚ್ಚು ಇರಬಾರದು’ ಎಂದು ತಿಳಿಸಿದರು.

ಉದ್ಯಮಿ ಎಸ್.ಎಸ್.ಗಣೇಶ್, ರೇಖಾ ಗಣೇಶ್, ಪ್ರಭಾ ಮಲ್ಲಿಕಾರ್ಜುನ, ಮಾಲತೇಶ ಜಾಧವ್, ಎಲ್.ಎಂ. ಹನುಮಂತಪ್ಪ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಜೆ.ಕೆ. ಕೊಟ್ರಬಸಪ್ಪ, ಬಿ.ಎಚ್‌. ವೀರಭದ್ರಪ್ಪ, ಟ್ರಸ್ಟಿಗಳು, ಸಾರ್ವಜನಿಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು