ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ ಮಿಲಾದ್: ಶಾಂತಿಯುತ, ಸಂಭ್ರಮದ ಮೆರವಣಿಗೆ

ಮೆಕ್ಕಾ, ಮದೀನ ಗುಂಬಜ್‌ಗಳ ಮೆರವಣಿಗೆ, ಎಲ್ಲೆಲ್ಲೂ ಹಾರಾಡಿದ ಹಸಿರು ಧ್ವಜ
Published 29 ಸೆಪ್ಟೆಂಬರ್ 2023, 2:55 IST
Last Updated 29 ಸೆಪ್ಟೆಂಬರ್ 2023, 2:55 IST
ಅಕ್ಷರ ಗಾತ್ರ

ದಾವಣಗೆರೆ: ಪ್ರವಾದಿ ಮಹಮ್ಮದ್‌ ಪೈಗಂಬರ್‌ ಜನ್ಮದಿನದ ಪ್ರಯುಕ್ತ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯಲ್ಲಿ ಮುಸ್ಲಿಮರು ಗುರುವಾರ ಸಂಭ್ರಮದಿಂದ ಆಚರಿಸಿದರು.

ನಗರದ ವಿವಿಧೆಡೆ ಹಸಿರು ಧ್ವಜಗಳು, ಬಾವುಟಗಳು ಹಾರಾಡಿದವು. ಮುಸ್ಲಿಮರು ಮೆರವಣಿಗೆಯಲ್ಲಿ ಪೈಗಂಬರರ ಕುರಿತ ಗುಣಗಾನ ಮಾಡಿದರು. ಮಕ್ಕಳು ಬಣ್ಣ, ಬಣ್ಣದ ಉಡುಪು ಧರಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಮೆಕ್ಕಾ, ಮದೀನಾ ಗುಂಬಜ್ ಹಾಗೂ ಟಿಪ್ಪುಸುಲ್ತಾನನ ಪ್ರತಿಕೃತಿಗಳು ಗಮನ ಸೆಳೆದವು.

ಕಣ್ಣು ಹರಿದಷ್ಟು ದೂರ ಕಾಣುತ್ತಿದ್ದ ಬೃಹತ್‌ ಮೆರವಣಿಗೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಸಂಭ್ರಮ, ಸಡಗರಗಳಿಂದ ಭಾಗವಹಿಸಿದ್ದರು. ಹೆಣ್ಣುಮಕ್ಕಳು ರಸ್ತೆಯ ಎರಡೂ ಕಡೆ ನಿಂತು ಮೆರವಣಿಗೆಯ ಉತ್ಸಾಹವನ್ನು ಕಣ್ತುಂಬಿಸಿಕೊಂಡರು. ಮೆರವಣಿಗೆ ಮಧ್ಯ ಟಿ‍‍ಪ್ಪು ಸುಲ್ತಾನ್ ವೇಷ ತೊಟ್ಟ ಬಾಲಕನೊಬ್ಬ ಎಲ್ಲರ ಗಮನ ಸೆಳೆದ.

ಮಧ್ಯಾಹ್ನ 2 ಗಂಟೆಯ ವೇಳೆಗೆ ಆಜಾದ್‌ನಗರದ ಮುಖ್ಯ ರಸ್ತೆಯ ಮದೀನಾ ಮಸೀದಿಯ ಬಳಿ ಫಾತೇಹಾಖ್ವಾನಿ ಓದುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯುದ್ದಕ್ಕೂ ಹಲವು ಸಂಘಸಂಸ್ಥೆಗಳು ಪಾನಕ, ಸಿಹಿ ಹಾಗೂ ಹಣ್ಣುಗಳನ್ನು ವಿತರಣೆ ಮಾಡಿದವು.

ಮೂರು ಕಡೆಗಳಿಂದ ಮೆರವಣಿಗೆ:

ಆಜಾದ್‌ ನಗರ, ಕೆಟಿಜೆ ನಗರ ಹಾಗೂ ವಿನೋಬ ನಗರಗಳಿಂದ ಮೆರವಣಿಗೆ ಹೊರಟಿದ್ದು, ಅಜಾದ್ ನಗರದ ಮದೀನ ಸರ್ಕಲ್‌ನಿಂದ ಪ್ರಾರಂಭಗೊಂಡ ಮೆರವಣಿಗೆಯು, ಚಾಮರಾಜ ಪೇಟೆ, ಮಂಡಿಪೇಟೆ ರಸ್ತೆ ಮುಖಾಂತರ ಲಕ್ಷ್ಮೀ ಸರ್ಕಲ್, ತಾಲ್ಲೂಕು ಕಚೇರಿ ಮುಂಭಾಗದ ರಸ್ತೆಯಿಂದ, ವಸಂತ ರಸ್ತೆ, ಹೊಂಡದ ರಸ್ತೆ, ರಾಣಿಚನ್ನಮ್ಮ ವೃತ್ತ (ಅರುಣಾ ಸರ್ಕಲ್), ಹಳೇ ಪಿ.ಬಿ ರಸ್ತೆ ಮುಖಾಂತರ, ಗಾಂಧಿ ಸರ್ಕಲ್‌ನಲ್ಲಿ ಸೇರಿಕೊಂಡಿತು.

ಕೆಟಿಜೆ ನಗರದಿಂದ ಹೊರಟ ಮೆರವಣಿಗೆ ವಿದ್ಯಾರ್ಥಿ ಭವನ, ಆಶೋಕ ರಸ್ತೆ ಮೂಲಕ ಪಿ.ಬಿ. ರಸ್ತೆಯ ಗಾಂಧಿ ವೃತ್ತಕ್ಕೆ ಬಂದಿತು. ವಿನೋಬ ನಗರದಿಂದ ಹೊರಟ ಮೆರವಣಿಗೆಯೂ ಪಿ.ಬಿ. ರಸ್ತೆಯಲ್ಲಿ ದೊಡ್ಡ ಮೆರವಣಿಗೆಯ ಜತೆ ಹೆಜ್ಜೆ ಹಾಕಿತು.

ಈ ಮೂರೂ ಮೆರವಣಿಗೆಗಳು ಅಶೋಕ ರಸ್ತೆಯ ಮೂಲಕ ಕೆ.ಆರ್‌. ರಸ್ತೆ, ಮಾಗಾನಹಳ್ಳಿ ರಸ್ತೆಯಲ್ಲಿರುವ ಮಿಲಾದ್ ಮೈದಾನದಲ್ಲಿ ಸಮಾಪನೆಗೊಂಡವು. ಅಲ್ಲಿ ಮೌಲ್ವಿಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಅಶೋಕ ಟಾಕೀಸ್ ರೈಲ್ವೆಗೇಟ್ ಅನ್ನು ಬಂದ್ ಮಾಡಿದ್ದರಿಂದ ಈ ಬಾರಿ ಗುಂಬಜ್ ಮೆರವಣಿಗೆ ಮಂಡಿಪೇಟೆಯ ಮೂಲಕ ತಿರುವು ಪಡೆದು ಮಾಗಾನಹಳ್ಳಿ ರಸ್ತೆಯ ಮೂಲಕ ಕರೆದೊಯ್ಯಲಾಯಿತು.   

ಹಬ್ಬದ ಹಿನ್ನೆಲೆಯಲ್ಲಿ ಹಸಿರು ಬಣ್ಣಗಳಿಂದ ಕಂಗೊಳಿಸುತ್ತಿದ್ದ ಬಾವುಟಗಳು, ಬ್ಯಾನರ್‌ಗಳು ಈದ್ ಶುಭಾಶಗಳನ್ನು ಕೋರಿದವು. ನಗರದ ಪಿಬಿ ರಸ್ತೆಯ ಉದ್ದಕ್ಕೂ ಹಸಿರು ಬಾವುಟಗಳು ಮತ್ತು ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಬಸ್‌, ಇನ್ನಿತರ ವಾಹನಗಳು ಒಳ ರಸ್ತೆಗಳಲ್ಲಿ ಸಂಚರಿಸಬೇಕಾಯಿತು.

ಈದ್‌ ಮಿಲಾದ್ ಕಮಿಟಿ ಅಧ್ಯಕ್ಷ ಎ.ಬಿ. ಹಬೀಬುಲ್ಲಾ, ಉಪಾಧ್ಯಕ್ಷ ಯಾಸೀನ್‌ ಪೀರ್‌ ರಜ್ವಿ, ತಂಜಿಮುಲ್ ಮುಸ್ಲೀಮಿನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ದಾದುಸೇಟ್, ಸಮಾಜದ ಮುಖಂಡರಾದ ಅತಾವುಲ್ಲಾ ಹಖಾನಿ, ನಜೀರ್ ಅಹಮದ್ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನಗರದ ಗಾಂಧಿ ವೃತ್ತದ ಬಳಿ ಪಾಲ್ಗೊಂಡು ಶುಭಾಶಯ ಕೋರಿದರು. ಕಾಂಗ್ರೆಸ್ ಮುಖಂಡ ಡಿ.ಬಸವರಾಜ್ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಮುಸ್ಲಿಮರಿಗೆ ಈದ್ ಮಿಲಾದ್ ಶುಭಾಶಯ ಕೋರಿದರು.

‘ಈ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಮಳೆ, ಬೆಳೆ ಆಗಿ ಹಸಿರೀಕರಣ ಆಗಲಿ. ಸುಖ, ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಯಾವುದೇ ಡಿ.ಜೆ. ಅಬ್ಬರವಿಲ್ಲದೇ ಶಾಂತಿಯುತ ಮೆರವಣಿಗೆ ನಡೆಸಲಾಯಿತು’ ಎಂದು ಸಮಾಜದ ಮುಖಂಡ ಅಮಾನುಲ್ಲಾ ಖಾನ್ ತಿಳಿಸಿದರು.

ಹಬ್ಬದ ಪ್ರಯುಕ್ತ ಮುಸ್ಲಿಮರು, ಶಾವಿಗೆ, ಹೋಳಿಗೆ ಸಿಹಿ ತಿಂಡಿ ಹಾಗೂ ಬಿರಿಯಾನಿ ಸೇರಿದಂತೆ ಮಾಂಸಾಹಾರದ ಅಡುಗೆ ಊಟ ಮಾಡಿ ಸಂಭ್ರಮಿಸಿದರು.

‘ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಈದ್ ಮಿಲಾದ್  ಅಂಗವಾಗಿ ದಾವಣಗೆರೆಯ ಚಾಮರಾಜಪೇಟೆ ವೃತ್ತದ ಬಳಿ ನಡೆದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಹೆಜ್ಜೆ ಹಾಕಿದ  ಮುಸ್ಲಿಂಮರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಈದ್ ಮಿಲಾದ್  ಅಂಗವಾಗಿ ದಾವಣಗೆರೆಯ ಚಾಮರಾಜಪೇಟೆ ವೃತ್ತದ ಬಳಿ ನಡೆದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಹೆಜ್ಜೆ ಹಾಕಿದ  ಮುಸ್ಲಿಂಮರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಈದ್ ಮಿಲಾದ್  ಅಂಗವಾಗಿ ದಾವಣಗೆರೆಯ ಚಾಮರಾಜಪೇಟೆ ವೃತ್ತದ ಬಳಿ ಗುಂಬಜ್‌ಗಳ ಪ್ರತಿಕೃತಿಗಳ ನೋಟ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಈದ್ ಮಿಲಾದ್  ಅಂಗವಾಗಿ ದಾವಣಗೆರೆಯ ಚಾಮರಾಜಪೇಟೆ ವೃತ್ತದ ಬಳಿ ಗುಂಬಜ್‌ಗಳ ಪ್ರತಿಕೃತಿಗಳ ನೋಟ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಈದ್ ಮಿಲಾದ್ ಅಂಗವಾಗಿ ದಾವಣಗೆರೆಯ ಚಾಮರಾಜಪೇಟೆ ವೃತ್ತದ ಬಳಿ ಸಾವಿರಾರು ಮುಸ್ಲಿಮರು ಧ್ವಜಗಳನ್ನು ಹಿಡಿದು ಹೆಜ್ಜೆ ಹಾಕಿದರು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಈದ್ ಮಿಲಾದ್ ಅಂಗವಾಗಿ ದಾವಣಗೆರೆಯ ಚಾಮರಾಜಪೇಟೆ ವೃತ್ತದ ಬಳಿ ಸಾವಿರಾರು ಮುಸ್ಲಿಮರು ಧ್ವಜಗಳನ್ನು ಹಿಡಿದು ಹೆಜ್ಜೆ ಹಾಕಿದರು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT