ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಈದ್‌ ಉಲ್‌ ಫಿತ್ರ್‌

ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ
Last Updated 4 ಮೇ 2022, 4:18 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಪಿ.ಬಿ. ರಸ್ತೆಯ ಹಳೇ ಈದ್ಗಾ, ಮಾಗನಹಳ್ಳಿ ರಸ್ತೆಯ ರಜಾವುಲ್‌ ಮುಸ್ತಫಾ ನಗರದ ಹೊಸ ಈದ್ಗಾ ಹಾಗೂ ಎಸ್‌ಒಜಿ ಕಾಲೊನಿಯ ಖಲಂದರಿಯಾ ಈದ್ಗಾ ಬಳಿ ಮಂಗಳವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದವರು ಈದ್‌ ಉಲ್‌ ಫಿತ್ರ್‌ ಸಂಭ್ರಮದಿಂದ ಆಚರಿಸಿದರು.

ಒಂದು ತಿಂಗಳ ಕಾಲ ಉಪವಾಸ ಮಾಡಿದ್ದ ಅವರು ತನ್ನ ಗಳಿಕೆಯಲ್ಲಿ ಬಡವರಿಗೆ ದಾನ ಮಾಡುವ ಸಂಪ್ರದಾಯವನ್ನು ಪಾಲಿಸಿದರು. ಜಕಾತ್‌, ಫಿತ್ರ್‌ ದಾನ ಮಾಡಿದರು.

ಬಿಳಿವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್‌ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಮರು ಮೊದಲು ಸಿಹಿ ಹಂಚಿ, ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು.

ಪಿ.ಬಿ. ರಸ್ತೆಯ ಹಳೇ ಈದ್ಗಾ ಮೈದಾನ ತುಂಬಿದ್ದರಿಂದ ಪಿ.ಬಿ. ರಸ್ತೆಯ ಎರಡು ಬದಿಗಳಲ್ಲೂ ಚಾಪೆ, ಚಾದರ ಹಾಸಿ, ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಈದ್ಗಾ ಮೈದಾನ ಸಮೀಪ ಸುಮಾರು ಅರ್ಧ ಕಿ.ಮೀ ಉದ್ದಕ್ಕೂ ಪಿ.ಬಿ. ರಸ್ತೆ ಶ್ವೇತ ವಸ್ತ್ರಧಾರಿಗಳಿಂದ ಕಂಗೊಳಿಸುತ್ತಿತ್ತು.

ಮುಸ್ಲಿಮರ ಪ್ರಾರ್ಥನೆಗೆ ಅನುವು ಮಾಡಿಕೊಡುವುದಕ್ಕಾಗಿ ಪಿ.ಬಿ. ರಸ್ತೆಯನ್ನು ಈ ಪ್ರದೇಶದಲ್ಲಿ ವಾಹನಗಳ ಓಡಾಟವನ್ನು ಪೊಲೀಸರು ನಿರ್ಬಂಧಿಸಿದರು. ಪರ್ಯಾಯ ರಸ್ತೆಗಳಲ್ಲಿ ವಾಹನ ಸಾಗಾಟಕ್ಕೆ ವ್ಯವಸ್ಥೆ ಮಾಡಿದರು. ಯಾವುದೇ ತೊಡಕುಂಟಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಮತ್ತು ಅವರ ತಂಡ ಬಿಗಿ ಬಂದೋಬಸ್ತು ಮಾಡಿದರು.

ಸಾಮೂಹಿಕ ಪ್ರಾರ್ಥನೆಯ ಬಳಿಕ ಕೆಲವರು ಖಬರ್‌ಸ್ಥಾನದಲ್ಲಿ ಇರುವ ತಮ್ಮ ಹಿರಿಯರ ಸಮಾಧಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದರು.

ವಿಶೇಷ ಭೋಜನ: ತಿಂಗಳಿಡೀ ಉಪವಾಸ ಆಚರಿಸಿದ್ದ ಮುಸ್ಲಿಮರು, ಈದ್‌ ಉಲ್‌ ಫಿತ್ರ್‌ ದಿನ ವಿಶೇಷ ಊಟ ಸೇವಿಸಿದರು. ಶ್ಯಾವಿಗೆ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಸಕ್ಕರೆ, ಹಾಲು, ಗಸಗಸೆ, ಪಿಸ್ತಾ ಬಳಸಿ ತಯಾರಿಸುವ ವಿಶೇಷ ಸಿಹಿ ತಿಂಡಿಗಳು ಹಾಗೂ ಬಗೆಬಗೆಯ ಮಾಂಸಾಹಾರಗಳನ್ನು ಮನೆಯಲ್ಲೇ ಸಿದ್ಧಪಡಿಸಲಾಗಿತ್ತು.

ಈದ್‌ ಉಲ್‌ ಫಿತ್ರ್‌ ಅಂಗವಾಗಿ ನಗರದ ಎಲ್ಲ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸ್ನೇಹಿತರ, ಸಂಬಂಧಿಕರ ಮನೆಗೆ ತೆರಳಿ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT