ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ.ಗಳಿಗೆ ಹೊರೆಯಾದ ವಿದ್ಯುತ್ ಬಿಲ್

ದಾವಣಗೆರೆ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ: ಇಒ ದಾರುಕೇಶ್ ಹೇಳಿಕೆ
Last Updated 16 ಫೆಬ್ರುವರಿ 2021, 2:00 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್ ಬಿಲ್ ಹೊರೆಯಾಗುತ್ತಿದ್ದು, ಬೀದಿ ದೀಪಗಳಿಗೆ ಹೆಚ್ಚಿನ ಬಿಲ್ ಬರುತ್ತಿದೆ ಎಂದು ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ದಾರುಕೇಶ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ 42 ಗ್ರಾಮ ಪಂಚಾಯಿತಿಗಳು ಇದ್ದು, ಒಂದು ಪಂಚಾಯಿತಿಗೆ ಬೀದಿದೀಪಗಳು, ನೀರಿನ ಮೋಟರ್‌ಗಳಿಗೆ ವರ್ಷಕ್ಕೆ ₹ 5 ಲಕ್ಷದಿಂದ ₹ 10 ಲಕ್ಷದಷ್ಟು ಬಿಲ್ ಬರುತ್ತಿದೆ. ಇದರಿಂದಾಗಿ ₹ 1.5 ಕೋಟಿ ಹೊರೆಯಾಗುತ್ತಿದೆ. ಶೇ 5ರಷ್ಟು ವಿದ್ಯುತ್ ಅಪವ್ಯಯವಾಗುತ್ತಿದೆ. ಇದನ್ನು ತಪ್ಪಿಸಲು ಸಲಹೆ ನೀಡಿ’ ಎಂದು ಹೇಳಿದರು.

ಆನಗೋಡು ಬೆಸ್ಕಾಂ ವಲಯದ ಎಇಇ ತೀರ್ಥೇಶ್, ‘ಬೀದಿ ದೀಪಗಳು ಹಗಲಲ್ಲಿ ಉರಿಯುತ್ತಿವೆ. ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. 2-3 ಕಡೆಗಳಲ್ಲಿ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಬೇಕು. ಈ ಸಂಬಂಧ ವಿಭಾಗ ಅಧಿಕಾರಿಗಳು ಪಂಚಾಯಿತಿವಾರು ಸಭೆ ನಡೆಸಿ
ಅರಿವು ಮೂಡಿಸಲಿದ್ದಾರೆ’ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ‘ತಾಲ್ಲೂಕಿನಲ್ಲಿ ಫೆ.3ರವರೆಗೆ ನಡೆದ ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಶೇ 100.9ರಷ್ಟು ಸಾಧನೆಯಾಗಿದೆ. ಫೆಬ್ರುವರಿ 22ರಿಂದ 3ನೇ ಹಂತದ ‘ಇಂದ್ರಧನುಷ್’ ಲಸಿಕೆಯನ್ನು ಆಶಾ ಕಾರ್ಯಕರ್ತೆಯರು ನೀಡಲಿದ್ದಾರೆ’ ಎಂದರು.

ಕಡಿಮೆಯಾಗುತ್ತಿರುವ ಭತ್ತದ ಕ್ಷೇತ್ರ: ‘ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ 1500ರಿಂದ 2 ಸಾವಿರ ಹೆಕ್ಟೇರ್‌ನಷ್ಟು ಭತ್ತ ಬೆಳೆಯುವ ಕ್ಷೇತ್ರ ಕಡಿಮೆಯಾಗಿದ್ದು, ಹೆಚ್ಚಾಗಿ ನೀರು ಬರುತ್ತಿರುವುದರಿಂದ ಈ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಜೊತೆಗೆ ಅಡಿಕೆಗೆ ದರವೂ ಸ್ಥಿರವಾಗಿರು ವುದರಿಂದ ಎಲ್ಲರೂ ಈ ಬೆಳೆಗೆ ಮಾರುಹೋಗಿದ್ದಾರೆ. ವೈಜ್ಞಾನಿಕವಾಗಿ ನಿರ್ವಹಣೆ ಮಾಡದಿದ್ದರೆ ರೈತರು ನಷ್ಟ ಅನುಭವಿಸಲಿದ್ದಾರೆ’ ಎಂದು ಸಹಾಯಕ ಕೃಷಿ ಅಧಿಕಾರಿ ರೇವಣಸಿದ್ದನಗೌಡ ತಿಳಿಸಿದರು.

ರಾಗಿ ಲಾಭದಾಯಕ: ‘ಮೆಕ್ಕೆಜೋಳ ಲಾಭದಾಯಕವಾಗಿಲ್ಲದೇ ಇರುವು ದರಿಂದ ರೈತರಿಗೆ ರಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತದೆ. ಅಲ್ಲದೇ ಪಡಿತರದಲ್ಲಿ ಅಕ್ಕಿಯ ಜೊತೆ ಜೋಳ ಹಾಗೂ ರಾಗಿಯನ್ನು ನೀಡುವುದಾಗಿ ಸಚಿವ ಉಮೇಶ ಕತ್ತಿ ತಿಳಿಸಿದ್ದು, ರಾಗಿ ಬೆಳೆದರೆ ಆರ್ಥಿಕವಾಗಿ ಸಬಲರಾಗಬಹುದು’ ಎಂದರು.

‘ರಾಗಿ ನಾಟಿ ಮಾಡಿದರೆ ಎಕರೆಗೆ ಕನಿಷ್ಠ 8ರಿಂದ 10 ಕ್ವಿಂಟಲ್ ಇಳುವರಿ ಬರುತ್ತದೆ. ಅರ್ಧ ಚೀಲ ಡಿಎಪಿ ಗೊಬ್ಬರ ಹಾಕಿದರೆ ಸಾಕು. ರಾಗಿಯನ್ನು ಒಕ್ಕಣೆ ಮಾಡಲು ಯಂತ್ರಗಳು ಬಂದಿದ್ದು, ಹುಲ್ಲನ್ನು ದನ, ಕುರಿ, ಮೇಕೆಗಳಿಗೆ ಮೇವಾಗಿ ನೀಡಬಹುದು. ಈ ನಿಟ್ಟಿನಲ್ಲಿ ಅಂತರ ಬೆಳೆಯಾಗಿ ರಾಗಿ ಹಾಗೂ ತೊಗರಿ ಬೆಳೆಯಲು ಸಲಹೆ ನೀಡುತ್ತಿದ್ದೇವೆ’ ಎಂದು ಹೇಳಿದರು.

‘ಮುಂಗಾರಿನಲ್ಲಿ ಬೆಳೆದ ರಾಗಿಗೆ ಖರೀದಿ ಕೇಂದ್ರ ಆರಂಭವಾಗಿದ್ದು, 151 ರೈತರು 5,295 ಕ್ವಿಂಟಲ್ ನೋಂದಣಿ ಮಾಡಿಸಿದ್ದಾರೆ. ಕ್ವಿಂಟಲ್‌ಗೆ ₹ 3,295 ದರವಿದೆ. ಭತ್ತಕ್ಕೆ 290 ರೈತರು 14,690 ಕ್ವಿಂಟಲ್‌ಗೆ‌ ನೋಂದಾಯಿಸಿದ್ದಾರೆ’ ಎಂದು ಹೇಳಿದರು.

‘ಕೋವಿಡ್ ಕಾರಣದಿಂದ ಪೋಷಕರಿಂದ ಅನುಮತಿ ಪತ್ರ ತರುವಂತೆ ಸೂಚನೆ ನೀಡಿದ ಕಾರಣ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಹಾಜರಾತಿ ಪ್ರಮಾಣ ಕಡಿಮೆಯಾಗಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಬಿಸಿಎಂ ಅಧಿಕಾರಿಗಳು ಮಾಹಿತಿ ನೀಡಿದರು.

‘ಈಗಾಗಲೇ 9– 10ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು, ಶೇ 82ರಷ್ಟು ಹಾಜರಾತಿ ಇದೆ. ಅಕ್ಷರ ದಾಸೋಹ ಚಟುವಟಿಕೆ ಆರಂಭವಾಗಿಲ್ಲ’ ಎಂದು ದಕ್ಷಿಣ ವಲಯದ ಬಿಇಒ ನಿರಂಜನ್ ಹೇಳಿದರು.

ಮೀನುಗಾರಿಕೆ, ರೇಷ್ಮೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾ ಟಿ. ಶ್ರೀನಿವಾಸ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ ಇದ್ದರು.

ಹದಿಹರೆಯದವರ ಸ್ನೇಹ ಆರೋಗ್ಯ ಕೇಂದ್ರ
‘10ರಿಂದ 19 ವರ್ಷದೊಳಗಿನವರಿಗೆ ಸಮಸ್ಯೆಗಳನ್ನು ತಂದೆ, ತಾಯಂದಿರ ಬಳಿ ಹೇಳಿಕೊಳ್ಳಲು ಆಗುವುದಿಲ್ಲ. ಇಂತಹ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆರೋಗ್ಯ ಕೇಂದ್ರಗಳಲ್ಲಿ ‘ಹದಿಹರೆಯದ ಸ್ನೇಹ ಕೇಂದ್ರಗಳನ್ನು’ ಆರಂಭಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮಾಹಿತಿ ನೀಡಿದರು.

‘ಈ ಕೇಂದ್ರಗಳಲ್ಲಿ ಪ್ರತಿ ಗುರುವಾರ ಹಾಗೂ ಶನಿವಾರ ವೈದ್ಯರು,ಸ್ಟ್ಯಾಫ್‌ ನರ್ಸ್‌ಗಳುಮಧ್ಯಾಹ್ನ 3ರಿಂದ ಸಂಜೆ 5ಗಂಟೆವರೆಗೆ ಲಭ್ಯವಿದ್ದು, ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದ್ದಾರೆ. ವಿದ್ಯಾರ್ಥಿಗಳು ಗುಟ್ಕಾ, ತಂಬಾಕುಗಳ ಚಟಕ್ಕೆ ಒಳಗಾಗಿದ್ದರೆ ಅವುಗಳಿಂದ ಮುಕ್ತರಾಗುವ ಬಗ್ಗೆಯೂ ವೈದ್ಯರು ಸಲಹೆ ನೀಡುತ್ತಾರೆ’ ಎಂದು ತಿಳಿಸಿದರು.

ಅಪೌಷ್ಟಿಕ ಮಕ್ಕಳಿಗೆ ದಾವಣಗೆರೆ ಮಿಕ್ಸ್
‘ತಾಲ್ಲೂಕಿನಲ್ಲಿ ಅಪೌಷ್ಟಿಕತೆ ಇರುವ 33 ಮಕ್ಕಳನ್ನು ಗುರುತಿಸಿದ್ದು, ಆ ಮಕ್ಕಳಿಗೆ ದಾವಣಗೆರೆ ಮಿಕ್ಸ್ (ಶೇಂಗಾ, ಬೆಲ್ಲವನ್ನೊಳಗೊಂಡ ಕಡಲೆ ಉಂಡೆ) ನೀಡಲಾಗುತ್ತಿದೆ. ತೀವ್ರ ತೊಂದರೆ ಇರುವ ಮಕ್ಕಳನ್ನು ಎನ್‌ಆರ್‌ಸಿಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಮಕ್ಕಳ ಜೊತೆಗೆ ಅವರ ತಾಯಂದಿರಿಗೂ ಕೂಲಿಯ ಜೊತೆಗೆ ಊಟ ನೀಡಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT