ಶುಕ್ರವಾರ, ಫೆಬ್ರವರಿ 21, 2020
24 °C

ದಾವಣಗೆರೆ: ಮರಿಯಾನೆ ತಿವಿದು ದಂಪತಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ಗುರುವಾರ ವಾಯುವಿಹಾರಕ್ಕೆ ತೆರಳಿದ್ದ ದಂಪತಿ ಆನೆ ದಾಳಿ ನಡೆಸಿದ ಪರಿಣಾಮ ಗಾಯಗೊಂಡಿದ್ದಾರೆ.

ಹಿರೇಕೋಗಲೂರು ಗ್ರಾಮದ ಶೈಲೇಂದ್ರ ಹಾಗೂ ಆಶಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿರುವುದರಿಂದ ಶೈಲೇಂದ್ರ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಗುಂಪಿನಿಂದ ತಪ್ಪಿಸಿಕೊಂಡಿರುವ ಮರಿಯಾನೆ ಬುಧವಾರ ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿ ಬಳಿ ತುಂಗಭದ್ರಾ ನದಿ ತೀರದಲ್ಲಿ ಕಾಣಿಸಿಕೊಂಡಿತ್ತು. ಶಿಕಾರಿಪುರ ಮಾರ್ಗವಾಗಿ ಬಂದಿರುವ ಐದಾರು ವರ್ಷದ ಈ ಆನೆ, ಜೀನಹಳ್ಳಿ, ಕೆಂಚಿಕೊಪ್ಪ ಸುತ್ತಲಿನ ಭಾಗಗಳ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿತ್ತು. ದಾಂಡೇಲಿಯ ವನ್ಯಜೀವಿ ಧಾಮದಿಂದ ಈ ಆನೆ ತಪ್ಪಿಸಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಆನೆಯನ್ನು ಬಂದ ದಾರಿಯಲ್ಲೇ ವಾಪಸ್‌ ಕಳುಹಿಸಲು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅರಣ್ಯ ಇಲಾಖೆಯ ತಿಪ್ಪೇಸ್ವಾಮಿ ಎಂಬುವವರಿಗೆ ಆನೆ ತಿವಿದಿತ್ತು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಸಂಜೆ ವೇಳೆಗೆ ಆನೆಯು ಹೊಸಹಳ್ಳಿಯಿಂದ ಹೊಮ್ಮನಹಳ್ಳಿ ಮೂಲಕ ಹನುಮನಹಳ್ಳಿ ಕಡೆಗೆ ತೆರಳಿತ್ತು.

ಮುಂಜಾನೆ ಆಘಾತ: ಗುರುವಾರ ಬೆಳಿಗ್ಗೆ 5.30ಕ್ಕೆ ಶೈಲೇಂದ್ರ ಹಾಗೂ ಆಶಾ ದಂಪತಿ ಹಿರೇಕೋಗಲೂರಿನಲ್ಲಿ ವಾಯುವವಿಹಾರಕ್ಕೆ ತೆರಳಿದ್ದರು. ‘ಬೆಳಿಗ್ಗೆ 5.45ರ ಸುಮಾರಿಗೆ ವಾಪಸ್‌ ಬರುತ್ತಿದ್ದಾಗ ತೋಟದಲ್ಲಿ ಶಬ್ದ ಕೇಳಿಸಿಕೊಂಡಿತು. ಸಮೀಪಕ್ಕೆ ಹೋಗಿ ನೋಡಿದಾಗ ಏಕಾಏಕಿ ಆನೆ ಎದುರಿಗೆ ಬಂತು. ಗಾಬರಿಯಿಂದ ನಾವು ಓಡಿ ಹೋಗುತ್ತಿದ್ದೆವು. ಈ ವೇಳೆ ಆಶಾ ಜಾರಿ ಬಿದ್ದಳು. ನಮ್ಮನ್ನು ಹಿಂಬಾಲಿಸಿಕೊಂಡು ಬಂದ ಆನೆ ಇಬ್ಬರಿಗೂ ತಿವಿದು ಗಿರಿಯಾಪುರ ಕಡೆಗೆ ಹೋಯಿತು’ ಎಂದು ಶೈಲೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ಗುಂಪಿನಿಂದ ತಪ್ಪಿಸಿಕೊಂಡು ಬಂದಿರುವ ಆನೆ ದಾಂಧಲೆ ನಡೆಸುತ್ತಿದ್ದು, ಗುರುವಾರ ಮಧ್ಯಾಹ್ನ ಬೀಮನೆರೆ ಗ್ರಾಮದ ಹೊಲದಲ್ಲಿ ಕಾಣಿಸಿಕೊಂಡಿದೆ. ಇದರಿಂದಾಗಿ ಸುತ್ತಮುತ್ತಲ ಗ್ರಾಮಸ್ಥರು ಭಯಗೊಂಡಿದ್ದಾರೆ. ಆನೆಯನ್ನು ಹಿಡಿದು ಸಾಗಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು