ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸಮಾನತೆ ನಿರ್ಮೂಲನೆ ಸಾಮಾಜಿಕ ನ್ಯಾಯದ ಗುರಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ
Published 28 ಮೇ 2024, 6:16 IST
Last Updated 28 ಮೇ 2024, 6:16 IST
ಅಕ್ಷರ ಗಾತ್ರ

ದಾವಣಗೆರೆ: ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯಲ್ಲಿ ಹಲವು ಕಾನೂನುಗಳನ್ನು ಜಾರಿ ಮಾಡಲಾಗಿದ್ದು, ಅಸಮಾನತೆ ಹೋಗಲಾಡಿಸುವುದೇ ಸಾಮಾಜಿಕ ನ್ಯಾಯದ ಗುರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಹೇಳಿದರು.

ನಗರದ ವನಿತಾ ಸಮಾಜದಲ್ಲಿ ಆ್ಯಕ್ಷನ್ ಇನ್‌ಶಿಯೇಟಿವ್ ಫಾರ್ ಡೆವಲಪ್‍ಮೆಂಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದವತಿಯಿಂದ ಟರ್ರೆ ಡೆಸ್ ಹೋಮ್ಸ್ ಸಹಕಾರದೊಂದಿಗೆ ಯುವಕ –ಯುವತಿಯರಿಗೆ ಸಾಮಾಜಿಕ ನ್ಯಾಯ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಒಬ್ಬರನ್ನು ಮತ್ತೊಬ್ಬರು ಶೋಷಣೆ ಮಾಡುವುದು, ಅಸಹ್ಯ ಪಡುವುದು, ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದ ಅಂದಿನ ಕಾಲದಲ್ಲಿ ಇವುಗಳ ವಿರುದ್ಧ ಜನರು ಸ್ವಾತಂತ್ರ್ಯ ಸಂಗ್ರಾಮ ಆರಂಭಿಸಿದರು. ಸ್ವಾತಂತ್ರ್ಯ ಲಭಿಸಿದ ಬಳಿಕ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ದೃಷ್ಟಿಯಿಂದ ಸಂವಿಧಾನ ಅಳವಡಿಸಿಕೊಳ್ಳಲಾಯಿತು. ಆ ಬಳಿಕವೇ ದೇಶದಲ್ಲಿ ಸಾಮಾಜಿಕ ನ್ಯಾಯ ಮುನ್ನೆಲೆಗೆ ಬಂದಿತು’ ಎಂದು ಹೇಳಿದರು.

‘ಮೂಲಭೂತ ಹಕ್ಕುಗಳು, ಕರ್ತವ್ಯಗಳೇ ಸಾಮಾಜಿಕ ನ್ಯಾಯದ ಮೂಲ ತತ್ವ ಹಾಗೂ ಮೂಲ ಆಧಾರಗಳು. ಒಬ್ಬ ವ್ಯಕ್ತಿಗೆ ಸಿಗಬೇಕಾದ ಗೌರವ ಸಿಗಬೇಕು, ಜಾತಿ, ಲಿಂಗ ತಾರತಮ್ಯ ಆಗಬಾರದು. ಇವುಗಳ ವಿರುದ್ಧ ಹೋರಾಟ ಮಾಡಿದಾಗ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಈ ದೇಶದ ಸಂಪತ್ತು, ಭೂಮಿ, ಅವಕಾಶಗಳು, ಸವಲತ್ತುಗಳು ಸಮಾನವಾಗಿ ಹಂಚಿಕೆ ಆಗದಿರುವುದು ದುರಂತದ ಸಂಗತಿ. ಸಂವಿಧಾನದ ಆಶಯಗಳು ಈಡೇರಬೇಕಾದರೆ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಮಾನತೆ ಸಾಧಿಸಬೇಕು. ಜನರು ಇಂದಿಗೂ ಜಾತಿ, ವರ್ಗ, ಧರ್ಮ, ಲಿಂಗದ ಆಧಾರದ ಮೇಲೆ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಇದಕ್ಕಾಗಿ ಅನೇಕ ಹೋರಾಟ, ಚಳವಳಿ ನಡೆದಿರುವುದನ್ನು ಯುವಜನತೆ ಅರ್ಥೈಸಿಕೊಳ್ಳಬೇಕು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಹೇಳಿದರು.

ಎಐಡಿ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಬಾಬಣ್ಣ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ನಾಗರಾಜ್, ದಸಂಸ ಮುಖಂಡ ಎಚ್.ಮಲ್ಲೇಶ್, ಸಾಮಾಜಿಕ ಕಾರ್ಯಕರ್ತೆ ನಸ್ರೀನ್ ಮಿಠಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT