ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನೋತ್ಸಾಹ, ಕಠಿಣ ಪರಿಶ್ರಮ ಯಶಸ್ಸಿನ ಮಂತ್ರ

ಬಾಪೂಜಿ ಬಿ–ಸ್ಕೂಲ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ. ಗುರುರಾಜ ಕರ್ಜಗಿ ಪ್ರತಿಪಾದನೆ
Last Updated 18 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ದಾವಣಗೆರೆ: ‘ಜೀವನದಲ್ಲಿ ಅತಿ ಎತ್ತರದ ಗುರಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವರೆಗೂ ಬೇರೆ ಕಡೆಗೆ ದೃಷ್ಟಿ ಹೊರಳಿಸಬಾರದು. ಜೀವನೋತ್ಸಾಹ, ಕಠಿಣ ಪರಿಶ್ರಮದ ಹಾಗೂ ಸಾಮಾಜಿಕ ಬದ್ಧತೆ ಎಂಬ ಈ ಮೂರು ಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಲಭಿಸುತ್ತದೆ’ ಎಂದು ಬೆಂಗಳೂರಿನ ಸೃಜನಶೀಲ ಅಧ್ಯಾಪನಾ ಕೇಂದ್ರದ ನಿರ್ದೇಶಕ ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.

ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಮತ್ತು ಬಾಪೂಜಿ ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ರೀಸರ್ಚ್‌ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಪೂಜಿ ಬಿ–ಸ್ಕೂಲ್‌ನ 23ನೇ ಸಂಸ್ಥಾಪನಾ ದಿನ ‘ಅನಾವರಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ವಿದ್ಯಾರ್ಥಿಗಳು ಪ್ರತಿ ವಿಚಾರದಲ್ಲೂ ‘ಬೋರ್‌’ ಬರುತ್ತಿದೆ ಎನ್ನುತ್ತಾರೆ. 12 ಗಂಟೆ ಕಾಲ ಬಾಳುವ ಮಲ್ಲಿಗೆ ಇರುವಷ್ಟು ಹೊತ್ತು ಪರಿಮಳವನ್ನು ಸೂಸುತ್ತದೆ. ಮಲ್ಲಿಗೆಗೆ ಇರುವ ಜೀವನೋತ್ಸಾಹ ನಮಲ್ಲಿ ಏಕೆ ಇರುವುದಿಲ್ಲ’ ಎಂದು ಪ್ರಶ್ನಿಸಿದ ಕರಜಗಿ, ‘ಜೀವನೋತ್ಸಾಹವನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಬೇಕು. ಇದನ್ನು ಹೊರಗಿನಿಂದ ತುಂಬಲು ಸಾಧ್ಯವಿಲ್ಲ. ಜೀವನೋತ್ಸಾಹದ ಬೆಂಕಿಯನ್ನು ನಿಮ್ಮೊಳಗೆ ಹೊತ್ತಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಲಾಟರಿ ಹೊಡೆದು ಸಿಕ್ಕ ಯಶಸ್ಸು ಬಹಳ ದಿನ ಉಳಿಯುವುದಿಲ್ಲ. ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಗಳಿಸಿದ ಯಶಸ್ಸು ಶಾಶ್ವತ. ಯಶಸ್ಸಿನ ತುತ್ತ ತುದಿಯನ್ನು ತಲುಪಿದವರು ನಮ್ಮ ಮಣ್ಣಿನ ವಾಸನೆಯನ್ನು ಮರೆಯುವುದಿಲ್ಲ’ ಎಂದ ಅವರು, ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ, ಸಚಿನ್‌ ತೆಂಡೂಲ್ಕರ್‌ ಅವರ ಬದುಕಿನ ಕಥೆಯನ್ನು ಉದಾಹರಣೆಯನ್ನಾಗಿ ನೀಡಿದರು.

‘ಹಣ ಗಳಿಸುವುದೇ ಯಶಸ್ಸಲ್ಲ. ಬಂಗಲೆಯನ್ನು ಇಟ್ಟಿಗೆಗಳಿಂದ ನಿರ್ಮಿಸಿದರೆ ಮನೆಯನ್ನು ಹೃದಯದಿಂದ ಕಟ್ಟುತ್ತಾರೆ. ಹಣ ಬಂಗಲೆಯನ್ನು ಕೊಡಬಹುದೇ ಹೊರತು, ಮನೆಯನ್ನಲ್ಲ. ಅದು ಹಾಸಿಗೆಯನ್ನು ಕೊಡಬಹುದು; ಆದರೆ, ನಿದ್ರೆಯನ್ನಲ್ಲ’ ಎಂದು ಎಚ್ಚರಿಸಿದರು.

‘ಸಾಮಾಜಿಕ ಕೆಲಸ ಮಾಡುವುದರಿಂದ ಜನ ನಿಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಹಣವನ್ನೇ ಕೊಡಬೇಕಾಗಿಲ್ಲ. ಸಮಯ ಕೊಡಿ; ನಾಲ್ಕು ಮೆಚ್ಚುಗೆಯ ಮಾತುಗಳನ್ನಾಡಿ. ಯಾರು ಸ್ವಂತಕ್ಕಾಗಿ ಬದುಕುತ್ತಾರೋ ಜಗತ್ತು ಅವರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ; ಯಾರು ಬೇರೆಯವರಿಗೋಸ್ಕರ ಬದುಕುತ್ತಾರೋ ಜಗತ್ತು ಅವರನ್ನು ಎಂದಿಗೂ ಮರೆಯುವುದಿಲ್ಲ. ನೈತಿಕವಾಗಿ ಹಣವನ್ನು ಚೆನ್ನಾಗಿ ಗಳಿಸಿ. ಪ್ರಾಮಾಣಿಕವಾಗಿ ಬದುಕಿ. ಜೊತೆಗೆ ಪಕ್ಕದಲ್ಲಿದ್ದವರ ಕಣ್ಣೀರನ್ನೂ ಒರೆಸುವಷ್ಟು ಮನುಷ್ಯತ್ವ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ತಿಂಡಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡ, ನೋಟ್ಸ್‌ ಬೇರೆಯವರಿಗೆ ಕೊಡಬೇಡ’ ಎಂದು ಪೋಷಕರು ಮಕ್ಕಳಿಗೆ ಹೇಳಿಕೊಡುವ ಮೂಲಕ ಅವರ ಜೀವನವನ್ನು ಸಣ್ಣದಾಗಿ ಮಾಡುತ್ತಿದ್ದಾರೆ. ಜೀವನವನ್ನು ದೊಡ್ಡದು ಮಾಡಿಕೊಳ್ಳಬೇಕು. ಬರಿ ನನ್ನದು, ನನ್ನದು ಎನ್ನಬೇಡಿ. ಹಂಚಿಕೊಂಡಷ್ಟು ನಾವೂ ದೊಡ್ಡವರಾಗುತ್ತೇವೆ. ಜ್ಞಾನ, ಪ್ರೀತಿ, ವಿಶ್ವಾಸ ಹಂಚಿಕೊಂಡಷ್ಟು ಹೆಚ್ಚಾಗುತ್ತದೆ’ ಎಂದು ಕರಜಗಿ ತಿಳಿಸಿದರು.

‘ಮಕ್ಕಳಿಗೆ ಹಾಗೆ ಮಾಡಿ, ಹೀಗೆ ಮಾಡಿ ಎಂದು ಹೇಳುವ ಮೊದಲು ನಾವು ಅದನ್ನು ಪಾಲಿಸಬೇಕು. ಪೋಷಕರು, ಶಿಕ್ಷಕರು ಸ್ವತಃ ತಾವೇ ಮಕ್ಕಳಿಗೆ ರೋಲ್‌ ಮಾಡೆಲ್‌ಗಳಾಗಬೇಕು’ ಎಂದು ಹೇಳಿದರು.

ಬಾಪೂಜಿ ಬಿ–ಸ್ಕೂಲ್‌ನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಎಚ್‌.ವಿ., ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಮ್ಯಾನೇಜ್‌ಮೆಂಟ್‌ ಶಿಕ್ಷಣ ನೀಡುವ ಉದ್ದೇಶದಿಂದ ಕಾಲೇಜನ್ನು ಸ್ಥಾಪಿಸಲಾಗಿದೆ. 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೊರಬಿದ್ದಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಂತ ಉದ್ಯಮ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಬಾಪೂಜಿ ವಿದ್ಯಾ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ, ‘ಅನಾವರಣ’ ಕಾರ್ಯಕ್ರಮದ ಸಂಚಾಲಕಿ ಪ್ರೊ. ಸರೋಜಾ ಎಸ್‌. ಹಾಜರಿದ್ದರು. ಪ್ರೊ. ಶ್ರುತಿ ಎಂ. ನಿರೂಪಿಸಿದರು. ಇಂಚರಾ ಮೂರ್ತಿ ಪ್ರಾರ್ಥಿಸಿದರು.

‘ಜೇನು ಹುಳುವಿನಂತೆ ಬದುಕಿ’

‘ಬದುಕಿದರೆ ಜೇನು ಹುಳುವಿನಂತೆ ಬದುಕಬೇಕು. ಮೈಲುಗಟ್ಟಲೆ ಹಾರಿಕೊಂಡು ಹೋಗಿ ಹೂವನ್ನೇ ಹುಡುಕಿಕೊಂಡು ಹೋಗುತ್ತದೆಯೇ ಹೊರತು ಹೊಲಸನ್ನಲ್ಲ. ಅದು ಹೂವಿನ ರೂಪ ಕೆಡಿಸುವುದಿಲ್ಲ. ನಿಧಾನಕ್ಕೆ ಒಳಗೆ ಇಳಿದು ಹನಿ ರಸವನ್ನು ತೆಗೆದುಕೊಂಡು, ಮತ್ತೊಬ್ಬರಿಗೂ ಕೊಡುತ್ತದೆ’ ಎಂದು ಗುರುರಾಜ ಕರಜಗಿ ಹೇಳಿದರು.

‘ಸ್ವಂತ ಮನೆಯೊಳಗೆ ಕಸವನ್ನು ತಂದು ಹಾಕಿಕೊಳ್ಳುತ್ತೇವೆಯೇ? ಕಸ ಹೊರಗೆ ಹಾಕುತ್ತೇವೆ, ಒಳ್ಳೆಯದನ್ನು ಒಳಗೆ ತಂದುಕೊಳ್ಳುತ್ತೇವೆ. ಅದೇ ರೀತಿ ನಮ್ಮ ಸ್ವಂತ ಬದುಕಿನಲ್ಲೂ ಒಳ್ಳೆಯ ವಿಚಾರಳನ್ನಷ್ಟೇ ಒಳಗೆ ಇಟ್ಟುಕೊಳ್ಳಬೇಕು. ಒಳ್ಳೆಯ ಸ್ನೇಹಿತರನ್ನು ಹೊಂದಬೇಕು. ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಊರಿನಲ್ಲಿ ಕಸದ ಗುಡಿಯೂ ಇರುತ್ತದೆ; ಗುಲಾಬಿ ತೋಟವೂ ಇರುತ್ತದೆ. ಕಸದಗುಂಡಿಯ ಪಕ್ಕದಲ್ಲಿ ನಿಂತು ಕೊಳಕು ವಾಸನೆ ಎಂದು ಏಕೆ ಹೇಳಬೇಕು? ಅದರ ಬದಲು ಗುಲಾಬಿ ತೋಟದ ಕಡೆಗೆ ಹೋಗಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT