ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಪೌಂಡ್‌ ಕಾಮಗಾರಿ ನಡೆಸದೇ ಸುಳ್ಳು ವರದಿ

ನಿರ್ಮಿತಿ ಕೇಂದ್ರದ ವಿರುದ್ಧ ₹ 17 ಲಕ್ಷ ದುರ್ಬಳಕೆ: ಆರೋಪ
Last Updated 5 ಜನವರಿ 2023, 5:51 IST
ಅಕ್ಷರ ಗಾತ್ರ

ಜಗಳೂರು: ಸರ್ಕಾರಿ ಶಾಲೆಯ ಕಾಂಪೌಂಡ್ ಕಾಮಗಾರಿ ನಡೆಸದೇ ಕಾಮಗಾರಿಗೆ ಬಿಡುಗಡೆಯಾಗಿದ್ದ ₹ 17 ಲಕ್ಷ ಹಣವನ್ನುನಿರ್ಮಿತಿ ಕೇಂದ್ರದ ಅಧಿಕಾರಿಗಳು 10 ತಿಂಗಳ ಹಿಂದೆಯೇ ಬಳಸಿಕೊಂಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಕಾಮಗಾರಿ ಪೂರ್ಣಗೊಂಡಿರುವ ವರದಿಯೂ ಸಲ್ಲಿಕೆಯಾಗಿದೆ.

2021-22ನೇ ಸಾಲಿನ ತಾಲ್ಲೂಕು ಪಂಚಾಯಿತಿ ಇಲಾಖೆಯ ಅನಿರ್ಬಂಧಿತ ಯೋಜನೆಯ ಅನುದಾನದಲ್ಲಿ ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ ₹ 17 ಲಕ್ಷ ನಿರ್ಮಿತಿ ಕೇಂದ್ರಕ್ಕೆ ಮಂಜೂರಾಗಿತ್ತು.

ಕಾಂಪೌಂಡ್ ಕಾಮಗಾರಿ ಕೈಗೊಳ್ಳದೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಕಚೇರಿಗೆ ಸುಳ್ಳು ವರದಿ ಸಲ್ಲಿಸಿರುವ ಬಗ್ಗೆ ‘ಪ್ರಜಾವಾಣಿ’ಗೆ ದಾಖಲೆಗಳು ಲಭ್ಯವಾಗಿವೆ.

2022ರ ಮಾರ್ಚ್ 17ರಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ಲಕ್ಷ್ಮೀಪತಿ ಅವರು ನಿರ್ಮಿತಿ ಕೇಂದ್ರಕ್ಕೆ ಅನುದಾನ ಜಮಾ ಮಾಡಿದ್ದಾರೆ. ಹಣ ಬಿಡುಗಡೆಯಾಗಿ ಹಲವು ತಿಂಗಳು ಕಳೆದಿದ್ದರೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಅನುದಾನ ಮಂಜೂರು ಮಾಡಿದ ತಾಲ್ಲೂಕು ಪಂಚಾಯಿತಿಗೆ ಕಾಮಗಾರಿ ಪುರ್ಣವಾಗಿರುವ ಬಗ್ಗೆ ವರದಿ ಮತ್ತು ಹಣ ಬಳಕೆ ಪ್ರಮಾಣಪತ್ರ ನೀಡಿಲ್ಲ. ಈ ಬಗ್ಗೆ 2022ರ ಮಾರ್ಚ್ ತಿಂಗಳ 30ರಿಂದ ಇಲ್ಲಿಯವರೆಗೆ ನಿರ್ಮಿತಿ ಕೇಂದ್ರದ ದಾವಣಗೆರೆಯ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿರುವ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಹಣಬಳಕೆ ಪ್ರಮಾಣಪತ್ರದೊಂದಿಗೆ ಕಾಮಗಾರಿಯ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಇದುವರೆಗೂ ನಿರ್ಮಿತಿ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

‘ಅನಿರ್ಬಂಧಿತ ಅನುದಾನದಡಿಯಲ್ಲಿ ಹನುಮಂತಾಪುರ ಗೊಲ್ಲರಹಟ್ಟಿ ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಿಸಲು ಮಂಜೂರು ಮಾಡಿದ್ದ ₹ 17 ಲಕ್ಷ ನಿರ್ಮಿತಿ ಕೇಂದ್ರದ ಖಾತೆಗೆ ಜಮಾ ಆಗಿದೆ. ಯುಸಿ ಕೊಡುವಂತೆ ಕೇಳಿ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೂ ಇದವರೆಗೆ ಕೊಟ್ಟಿಲ್ಲ. ಮತ್ತೊಮ್ಮೆ ಪತ್ರ ಬರೆಯಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಾಮಗಾರಿ ಕೈಗೊಳ್ಳದ ಬಗ್ಗೆ ಗ್ರಾಮಸ್ಥರಿಗೆ ಅನುಮಾನ ಬಂದು ಈ ಬಗ್ಗೆ ತಾಲ್ಲೂಕು ತಾಲ್ಲೂಕು ಪಂಚಾಯಿತಿ ಇಒ ಕಚೇರಿಗೆ ತೆರಳಿ ಹಣ ದುರ್ಬಳಕೆ ಆಗಿರುವ ಬಗ್ಗೆ ಮೌಖಿಕವಾಗಿ ದೂರು ಸಲ್ಲಿಸಿದ್ದಾರೆ.

‘ಹಿಂದುಳಿದ ಬುಡಕಟ್ಟು ಸಮುದಾಯದವರು ವಾಸಿಸುವ ಕುಗ್ರಾಮದ ಶಾಲೆಗೆ ಬಿಡುಗಡೆಯಾದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕನಿಷ್ಠ ಗ್ರಾಮಕ್ಕೂ ಅಧಿಕಾರಿಗಳು ಭೇಟಿ ನೀಡಿಲ್ಲ. ಕಾಂಪೌಂಡ್ ನಿರ್ಮಿಸದೆ ಹಣವನ್ನು ಕಬಳಿಸುವ ಉದ್ದೇಶವಿದೆ. 150 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಕಾಂಪೌಂಡ್ ಇಲ್ಲದೆ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮದ ಮುಖಂಡ ಚಿತ್ತಪ್ಪ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ರಂಗಪ್ಪ ಎಚ್ಚರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಹಾಗೂ ತಾಲ್ಲೂಕಿನ ಎಂಜಿನಿಯರ್ ಚಂದ್ರಶೇಖರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT