ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಬೆಳೆ ವಿಮೆ ಹಣ ಬಿಡುಗಡೆಗೆ ರೈತರ ಆಗ್ರಹ

Published 13 ಮೇ 2024, 15:54 IST
Last Updated 13 ಮೇ 2024, 15:54 IST
ಅಕ್ಷರ ಗಾತ್ರ

ದಾವಣಗೆರೆ: ಕಳೆದ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರದ ಹಣ ಬಂದಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಗಳೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ನೂರಾರು ರೈತರು ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ಜಗಳೂರು ತಾಲ್ಲೂಕಿನ ಅಸಗೋಡು, ದಿದ್ದಿಗೆ, ಗುರುಸಿದ್ದಾಪುರ, ಸೊಕ್ಕೆ, ಗುತ್ತಿದುರ್ಗ, ದೇವಿಕೆರೆ, ಬಿಳಿಚೋಡು, ತೋರಣಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಹಣ ಬಂದಿಲ್ಲ’ ಎಂದು ರೈತರು ಆರೋಪಿಸಿದರು.

‘ನೀರಾವರಿ ಆಶ್ರಿತ ಜಮೀನುಗಳ ರೈತರಿಗೆ ಪರಿಹಾರ ನೀಡಲಾಗಿದೆ. ಆದರೆ ನಮಗೆ ಏಕೆ ಕೊಟ್ಟಿಲ್ಲ. ಅವರು ಬೇರೆ, ನಾವು ಬೇರೆಯಾ ಎಂದು ಮಳೆಯಾಶ್ರಿತ ಪ್ರದೇಶಗಳ ಕೃಷಿಕರು ಪ್ರಶ್ನಿಸಿದರು. ಕೂಲಿ ಮಾಡಿ ವಿಮಾ ಕಂತು ಕಟ್ಟಿದ್ದೇವೆ, ನಮಗೆ ಹಣ ಕೊಡಿಸಿ ಎಂದು ಪಟ್ಟು ಹಿಡಿದರು. ಬೇಕೇ ಬೇಕು, ವಿಮೆ ಹಣ ಬೇಕು ಎಂದು ಘೋಷಣೆ ಕೂಗಿದರು.

ಈ ವೇಳೆಗಾಗಲೇ ನಮಗೆ ಹಣ ಬರಬೇಕಿತ್ತು. ಆದರೆ ಇದುವರೆಗೂ ಹಣ ಏಕೆ ಬಂದಿಲ್ಲ, ಇದರಲ್ಲಿ ಯಾರ ತಪ್ಪಿದೆ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು.

‘ತಾಂತ್ರಿಕ ಸಮಸ್ಯೆಯಿಂದ ಸಮಸ್ಯೆಯಾಗಿದ್ದು, ನಾಳೆ ಸಭೆ ನಡೆಸಿ ನಡಾವಳಿಯನ್ನು ಮೇಲಧಿಕಾರಿಗಳಿಗೆ ಕಳಿಸಿಕೊಡುತ್ತೇವೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ನೀಡಿದ ಉತ್ತರದಿಂದ ರೈತರಿಗೆ ಸಮಾಧಾನವಾಗಲಿಲ್ಲ.

‘ನಾವು ವಿವಿಧ ಗ್ರಾಮಗಳಿಂದ ಬಂದಿದ್ದೇವೆ. ನಮಗೆ ಯಾವಾಗ ಹಣ ಕೊಡಿಸುತ್ತೀರೆಂದು ತಿಳಿಸಿ. ನಿಮ್ಮಿಂದ ಆಗದಿದ್ದರೆ ಹಾಗೆಂದು ಬರೆದುಕೊಡಿ’ ಎಂದು ಕೇಳಿದರು.

‘ಸತಿ ಸಣ್ಣ, ಸಣ್ಣ, ದೊಡ್ಡ ರೈತರ ಬೆಳೆಗಳು ನಷ್ಟವಾಗಿದ್ದು, ಸಚಿವರು, ಶಾಸಕರು, ಜಿಲ್ಲಾಧಿಕಾರಿ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಅಸಗೋಡು ಗ್ರಾಮದ ರೈತ ಕೆ.ಬಿ. ರವಿ ಹೇಳಿದರು.

‘ನಾನು ₹ 1.50 ಲಕ್ಷ ಖರ್ಚು ಮಾಡಿ 6 ಎಕರೆ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆದಿದ್ದೆ. ಮಳೆ ಇಲ್ಲದೆ ಬೆಳೆ ಹಾನಿಯಾಯಿತು. ವಿಮಾ ಪರಿಹಾರ ಬಂದರೆ ನಮಗೂ ಒಂದಿಷ್ಟು ಸಹಾಯವಾಗುತ್ತದೆ’ ಎಂದು ಆಸಗೋಡಿನ ರೈತ ಬಿ.ಎಸ್.ದೇವರಾಜ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾಡಳಿತ ಭವನದಲ್ಲಿ ನಾಳೆ ಈ ಕುರಿತು ಸಭೆ ನಡೆಸಲಾಗುವುದು ಎಂದು ತಿಳಿಸಿದ ನಂತರ ರೈತರು ವಾಪಸ್ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT