ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಳೆಕೆರೆ: ಹೂಳು ತೆಗೆದು ಹೊಲಕ್ಕೆ ಸಾಗಿಸುತ್ತಿರುವ ರೈತರು

ತೋಟ, ಜಮೀನಿಗೆ ಫಲವತ್ತಾದ ಮಣ್ಣು ರವಾನೆ
Published 25 ಮಾರ್ಚ್ 2024, 7:15 IST
Last Updated 25 ಮಾರ್ಚ್ 2024, 7:15 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸೂಳೆಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿ ನೀರಿನ ಸಂಗ್ರಹ ಕುಸಿದಿದ್ದು, ಹಿನ್ನೀರಿನ ಭಾಗದ ರೈತರು ಫಲವತ್ತಾದ ಹೂಳನ್ನು ತೆಗೆದು ತಮ್ಮ ಜಮೀನುಗಳಿಗೆ ಸಾಗಿಸುವ ಮೂಲಕ ಪರೋಕ್ಷವಾಗಿಕೆರೆಯ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಕೆರೆಯಲ್ಲಿ ತುಂಬ ಇರುವ ಹೂಳು ತೆರವುಗೊಳಿಸುವ ಯೋಜನೆ ರೂಪಿಸುವಂತೆ ಖಡ್ಗ ಸಂಘ ಸೇರಿದಂತೆ ಹಲವು ರೈತ ಮುಖಂಡರು ಸರ್ಕಾರದ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ರೈತರೇ ಸ್ವಯಂ ಪ್ರೇರಣೆಯಿಂದ ಹೂಳನ್ನು ಅನುಕೂಲಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಕಾರ್ಯಗತರಾಗಿದ್ದಾರೆ.

ಅಂತೆಯೇ ಹಿನ್ನೀರಿನ ವ್ಯಾಪ್ತಿಯ 500 ಮೀಟರ್‌ ದೂರದಲ್ಲಿ ಕ್ರಮಿಸಿದರೆ ಹಿಟ್ಯಾಚಿ, ಜೆಸಿಬಿ ಯಂತ್ರಗಳು ಹೂಳು ತೆಗೆಯುತ್ತಿರುವುದು ಕಾಣಸಿಗುತ್ತಿದೆ. ಕೆರೆಬಿಳಚಿ, ಸೋಮಲಾಪುರ, ಜಕ್ಕಲಿ, ಚೆನ್ನಾಪುರ, ಕೊಂಡದಹಳ್ಳಿ ವ್ಯಾಪ್ತಿಯಲ್ಲಿ ಭರದಿಂದ ಮಣ್ಣು ಸಾಗಿಸಲಾಗುತ್ತಿದೆ. ನಿತ್ಯ 200ರಿಂದ 250 ಟ್ರ್ಯಾಕ್ಟರ್‌ಗಳು ಮಣ್ಣನ್ನು ತೋಟಗಳಿಗೆ ಸಾಗಿಸುತ್ತಿವೆ.

ಹಿಟ್ಯಾಚಿಗಳಿಗೆ ಪ್ರತಿ ಗಂಟೆಗೆ ₹ 2,200 ದರ ನಿಗದಿಗೊಳಿಸಲಾಗಿದೆ. ಟಿಪ್ಪರ್‌ಗಳಿಗೆ ದಿನಕ್ಕೆ ₹ 6,000 ಬಾಡಿಗೆ ನೀಡಿ, ಡೀಸೆಲ್‌ ಅನ್ನು ರೈತರೇ ತುಂಬಿಸುವ ಕರಾರಿನ ಮೂಲಕ ಜಮೀನುಗಳಿಗೆ ಮಣ್ಣು ಸಾಗಿಸಲಾಗುತ್ತಿದೆ.

ಜೆಸಿಬಿ ಯಂತ್ರಗಳ ಮಾಲೀಕರು ಪ್ರತಿ ಟ್ರ್ಯಾಕ್ಟರ್ ಲೋಡ್ ಮಣ್ಣು ತುಂಬಲು ₹ 100 ದರ ನಿಗದಿಗೊಳಿಸಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ದೂರಕ್ಕೆ ಅನುಗುಣವಾಗಿ ನೀಡಲಾಗುತ್ತಿದೆ ಎಂದು ಜಕ್ಕಲಿಯ ರೈತ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪುಡಿ ಹರಳಿನಿ ರೂಪದ ಕಪ್ಪು ಮಣ್ಣು ಪೋಷಕಾಂಶಗಳ ಗಣಿ. ತೋಟದ ಬೆಳೆಗಳಿಗೆ ಹೂಳು ಮಣ್ಣು ಹಾಕುವುದರಿಂದ ಇಳುವರಿ ವೃದ್ಧಿಸಲಿದೆ. 15 ದಿನಗಳಿಂದ 5ರಿಂದ 8 ಅಡಿ ಆಳದವರೆಗೆ ಅಗೆದು ಮಣ್ಣು ತುಂಬಿಸಲಾಗುತ್ತಿದೆ. ಹೂಳನ್ನು ವ್ಯವಸ್ಥಿತವಾಗಿ ತೆಗೆಯಲಾಗುತ್ತಿದೆ. ಇದರಿಂದ ಮಳೆ ಸುರಿದಾಗ ಕೆರೆಯಂಗಳದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಉದ್ದೇಶವೂ ಫಲಿಸಲಿದೆ ಎಂದು ರೈತ ಹಾಲೇಶ್ ವಿವರಿಸಿದರು.

‘ಪ್ರತಿ ಟ್ರ್ಯಾಕ್ಟರ್ ಲೋಡ್ ಮಣ್ಣು ತುಂಬಿಸಲು ₹ 100, ಸಾಗಣೆ ದರ ₹ 500ರಂತೆ 300 ಲೋಡ್ ತೋಟಕ್ಕೆ ಸಾಗಿಸಿದ್ದೇನೆ. ₹ 2 ಲಕ್ಷ ಖರ್ಚಾಗಿದೆ’ ಎನ್ನುತ್ತಾರೆ ಚೆನ್ನಾಪುರದ ರೈತ ಕರಿಯಪ್ಪ.

‘ಗ್ರಾಮ ಪಂಚಾಯಿತಿ ಮಾಡಬೇಕಾದ ಕೆಲಸವನ್ನು ರೈತರೇ ಮಾಡುತ್ತಿರುವುದು ಶ್ಲಾಘನೀಯ. ರೈತರು ಹೂಳನ್ನು ತೋಟಕ್ಕೆ ಹಾಕಲು ಅಡ್ಡಿಯಿಲ್ಲ. ಇದಕ್ಕೆ ಗ್ರಾಮ ಪಂಚಾಯಿತಿಯ ಒಪ್ಪಿಗೆ ಬೇಕಿಲ್ಲ’ ಎಂದು ಕೊಂಡದಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವಾಣಿ ಕರಿಯಪ್ಪ ಹೇಳಿದರು.

‘ಸೂಳೆಕೆರೆ ನೀರು ಸಂಗ್ರಹಣಾ ವ್ಯಾಪ್ತಿ 6,500 ಎಕರೆ ಇದೆ. ಒಮ್ಮೆಲೇ ಹೂಳು ತೆಗೆಸಲು ಅಪಾರ ಪ್ರಮಾಣದ ಹಣ ಬೇಕು. ಪ್ರತಿ ವರ್ಷ 100 ಎಕರೆ ಹೂಳು ತೆಗೆದರೂ ನೀರಿನ ಸಂಗ್ರಹ ಸಾಂರ್ಥ್ಯ ವೃದ್ಧಿಸಲಿದೆ’ ಎಂದು ಅವರು ಒತ್ತಾಯಿಸಿದರು.

‘ಸೂಳೆಕೆರೆ ಹೂಳು ತೆರವಿಗೆ ಸಹಕರಿಸುವಂತೆ ಇನ್ಫೋಸಿಸ್ ಹಾಗೂ ಎರಿಕ್‌ಸನ್ ಫೌಂಡೇಷನ್‌ಗಳಿಗೆ ಮನವಿ ಮಾಡಲಾಗಿದೆ. ಕೆರೆ ಸಮೀಕ್ಷೆ ಕಾರ್ಯ ನಡೆದು ಗಡಿ ಗುರುತಿಸಿದ ನಂತರ ಹೂಳು ತೆರವಿಗೆ ಚಿಂತನೆ ನಡೆಸಲಾಗುವುದು ಎಂಬ ಪ್ರತಿಕ್ರಿಯೆ ದೊರೆತಿದೆ. ಶೀಘ್ರ ಸಮೀಕ್ಷೆ ನಡೆಯಬೇಕಿದೆ’ ಎಂದು ಅವರು ಕೋರಿದರು.

ಸೂಳೆಕೆರೆ ಹಿನ್ನೀರು ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್‌ಗಳಿಗೆ ಹೂಳು ಮಣ್ಣು ತುಂಬಿಸುತ್ತಿರುವುದು
ಸೂಳೆಕೆರೆ ಹಿನ್ನೀರು ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್‌ಗಳಿಗೆ ಹೂಳು ಮಣ್ಣು ತುಂಬಿಸುತ್ತಿರುವುದು
ಸೂಳೆಕೆರೆಯಲ್ಲಿ ರೈತರು ಕ್ರಮಬದ್ಧವಾಗಿ ಹೂಳು ತೆಗೆದ ಪ್ರದೇಶ.
ಸೂಳೆಕೆರೆಯಲ್ಲಿ ರೈತರು ಕ್ರಮಬದ್ಧವಾಗಿ ಹೂಳು ತೆಗೆದ ಪ್ರದೇಶ.
ಕೆರೆ ಸಂಜೀವಿನಿ ಯೋಜನೆಯಲ್ಲಿ ಜಿಲ್ಲಾಧಿಕಾರಿ ಪ್ರತಿ ವರ್ಷ ಸಾಧ್ಯವಾದಷ್ಟು ಹೂಳು ತೆಗೆಸಲು ಚಿಂತಿಸಬೇಕು. ಇದರಿಂದ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ.
ರಘು ಹೊನ್ನೆಮರದಹಳ್ಳಿ ಖಡ್ಗ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT