ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಸರದಿ ಮುಕ್ತಾಯ: ಕೊನೆಭಾಗ ತಲುಪದ ಭದ್ರಾ ನೀರು

Published 28 ಜನವರಿ 2024, 6:15 IST
Last Updated 28 ಜನವರಿ 2024, 6:15 IST
ಅಕ್ಷರ ಗಾತ್ರ

ಮಲೇಬೆನ್ನೂರು: ಭದ್ರಾ ಜಲಾಶಯದಿಂದ ನಾಲೆಗಳಿಗೆ ಮೊದಲ ಸರದಿಯಲ್ಲಿ ಬಿಡುಗಡೆ ಮಾಡಿದ್ದ ನೀರು ನಿಗದಿತ ಪ್ರಮಾಣದಲ್ಲಿ ಹರಿದು ಬರದ ಕಾರಣ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗ ತಲುಪಿಲ್ಲ ಎಂದು ತೋಟದ ಬೆಳೆಗಾರರು ಬೇಸರ ವ್ಯಕ್ತಪಡಿಸಿದರು.

ಜ.15ರಂದು ನೀರು ಬಿಡುಗಡೆ ಮಾಡಿದ್ದರೂ ಜ.19ಕ್ಕೆ ನೀರು ಮಲೇಬೆನ್ನೂರು ಭಾಗಕ್ಕೆ ತಲುಪಿತ್ತು. ಅದೂ ಕೇವಲ ಒಂದೂವರೆ ಅಡಿ ಪ್ರಮಾಣದಲ್ಲಿ ಇತ್ತು. ಜ.25ರ ತನಕ 2 ಅಡಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಲಿಲ್ಲ. ಯಾವುದೇ ಉಪನಾಲೆಯ ಮೊದಲೆರಡು ಪೈಪ್‌ ಔಟ್ಲೆಟ್‌ಗಿಂತ ಮುಂದೆ ನೀರು ಹರಿಯಲೇ ಇಲ್ಲ ಎಂದು ಹೊಳೆಸಿರಿಗೆರೆ ಫಾಲಾಕ್ಷಪ್ಪ ತಿಳಿಸಿದರು..

ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದ ಉಪನಾಲೆಗೆ ನೀರು ತಲುಪಲೇ ಇಲ್ಲ. ಕೊಳವೆ ಬಾವಿಗಳ ಇಳುವರಿ ಕುಸಿದಿದ್ದು, ತೋಟಗಳು ನೀರಿಲ್ಲದೆ ಒಣಗಿದವು ಎಂದು ರೈತ ಸಂಘದ ಹಾಳೂರು ನಾಗರಾಜ್‌ ಅಳಲು ತೋಡಿಕೊಂಡರು.

ಮುಂದಿನ ಸರದಿಗೆ ಫೆ. 10ರ ತನಕ ಕಾಯುವ ಅನಿವಾರ್ಯತೆ ಎದುರಾಗಿದೆ. ಮುಂದಿನ ಬಾರಿ ರೈತರ ನಡುವೆ ಸಂಘರ್ಷ ಖಚಿತ ಎಂದರು.

3ನೇ ಉಪವಿಭಾಗದ ತೋಟಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ರಚಿಸಿದ ಟಾಸ್ಕ್ ಫೋರ್ಸ್‌ ಆದೇಶ ಪತ್ರದಲ್ಲಿಯೇ ಉಳಿಯಿತು ಎಂದು ಕಿಡಿಕಾರಿದರು.

ಶನಿವಾರ ರಾತ್ರಿಯಿಂದ ಹಂತಹಂತವಾಗಿ ನೀರನ್ನು ನಿಲುಗಡೆ ಮಾಡಲಾಗಿದೆ. ಮೇಲ್ಭಾಗದ ರೈತರು ಪೈಪ್‌ಗೆ ಅಡ್ಡ ಹಾಕುವುದು ಸಾಮಾನ್ಯವಾಗಿದೆ. ಕೊನೆಯ ಭಾಗಕ್ಕೆ ಭದ್ರಾ ನೀರು ಮರೀಚಿಕೆಯಾಗಿದೆ ಎಂದರು.

20 ದಿನಗಳ ಆಂತರಿಕ ಸರದಿ ರೂಪಿಸಿದ್ದರೆ ಕೊನೆಯ ಭಾಗಕ್ಕೆ ನೀರು ತಲುಪುತ್ತಿತ್ತು. ಈಗ ಮೇಲ್ಭಾಗದ ತೋಟದ ಬೆಳೆಗಾರರ ದಾಹ ನೀಗಿದೆ. ಕೆಳಭಾಗದವರ ಸಂಕಷ್ಟ ಹೆಚ್ಚಾಗಿದೆ ಎಂದು ಭದ್ರಾ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ತಿಳಿಸಿದರು.

ಕೃಷಿಯ ಅನನುಭವಿ, ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಭದ್ರಾ ಐಸಿಸಿ ಎಂಜಿನಿಯರ್‌ಗಳು ಅವೈಜ್ಞಾನಿಕ ಸರದಿ ರೂಪಿಸಿ ಅಚ್ಚುಕಟ್ಟಿನ ಕೊನೆಯ ಭಾಗದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಕಡಾರನಾಯ್ಕನಹಳ್ಳಿ ಪ್ರಭುಗೌಡ ಆರೋಪಿಸಿದರು.

ಕರ್ನಾಟಕ ನೀರಾವರಿ ನಿಗಮದ ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಅಸಹಾಯಕತೆ ವ್ಯಕ್ತಪಡಿಸಿದರು.

2ನೇ ಸರದಿ ಇನ್ನೂ ಕಷ್ಟ. ಬೇಸಿಗೆ ಬಿಸಿಲು ಕಾಡಲಿದೆ. ಸಿಬ್ಬಂದಿ ಕೊರತೆ ಇದೆ. ನೀರಿನ ನಿರ್ವಹಣೆ ಕಷ್ಟವಾಗಿದೆ ಎಂದು ಎಇಇ ಧನಂಜಯ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT