ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಫುಟ್‌ಪಾತ್‌ ಶೀಘ್ರ ತೆರವು

ಫುಟ್‌ಪಾತ್‌ ವ್ಯಾಪಾರ ತಪ್ಪಿಸಲು ನಾಲ್ಕು ಫುಡ್‌ಕೋರ್ಟ್‌ ಮಾಡಲು ಯೋಜನೆ: ಮೇಯರ್‌
Last Updated 3 ಅಕ್ಟೋಬರ್ 2020, 12:09 IST
ಅಕ್ಷರ ಗಾತ್ರ

ದಾವಣಗೆರೆ: ರಾಮ್‌ ಆ್ಯಂಡ್ ಕೊ ಸರ್ಕಲ್‌ನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಫುಟ್‌ಪಾತ್‌ ನಿರ್ಮಾಣ ಮಾಡುವಾಗ ರಸ್ತೆಯಲ್ಲೇ ಮಾಡಿದ್ದಾರೆ. ಅವುಗಳನ್ನು ತೆರವುಗೊಳಿಸಿ ವೈಜ್ಞಾನಿಕವಾಗಿ ಮಾಡಲಾಗುವುದು ಎಂದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಹೇಳಿದರು.

ಅಧಿಕಾರಿಗಳ ಜತೆಗೆ ರಾಮ್‌ ಆ್ಯಂಡ್‌ ಕೊ ಸರ್ಕಲ್‌ಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಬಳಿಕ ಮಾಧ್ಯಮದವರ ಜತೆಗೆ ಅವರು ಮಾತನಾಡಿದರು.

ರಸ್ತೆ ಮೇಲೆಯೇ ಫುಟ್‌ಪಾತ್‌ ಯಾಕೆ ನಿರ್ಮಿಸಿದರು ಎಂಬುದು ಗೊತ್ತಿಲ್ಲ. ಅದನ್ನು ತೆರವುಗೊಳಿಸಿದರೆ ರಸ್ತೆ ಅಗಲವಾಗಿ ವಾಹನಗಳ ಓಡಾಟಕ್ಕೆ ಬೇಕಾದಷ್ಟು ಸ್ಥಳಾವಕಾಶ ಸಿಗುತ್ತದೆ. ಫುಟ್‌ಪಾತನ್ನು ರಸ್ತೆ ಬಿಟ್ಟು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

‘ಇಲ್ಲಿ ಉಂಟಾಗುತ್ತಿರುವ ಸಂಚಾರ ಸಮಸ್ಯೆಯ ಬಗ್ಗೆ ಹಲವು ಮಂದಿ ದೂರಿದ್ದರಿಂದ ಎಸ್‌ಪಿ ಅವರಿಗೆ ತಿಳಿಸಿ ಅಧಿಕಾರಿಗಳ ಜತೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ’ ಎಂದರು.

ಫುಟ್‌ಪಾತ್‌ಗಳಲ್ಲಿಯೇ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ನಗರದ ನಾಲ್ಕು ಕಡೆಗಳಲ್ಲಿ ಫುಡ್‌ಕೋರ್ಟ್‌ ಮಾಡುವ ಯೋಜನೆ ಇದೆ ಎಂದು ವಿವರಿಸಿದರು.

ಗುಂಡಿ ಸರ್ಕಲ್‌ನಲ್ಲಿ ಫುಟ್‌ಪಾತ್‌ನಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿ ಕ್ಯಾಸಲ್‌ ಶ್ರೇಷ್ಠಿ ಪಾರ್ಕ್‌ ಬಳಿ ಒಂದು ಫುಡ್‌ ಕೋರ್ಟ್‌ ಮಾಡಿ ಅಲ್ಲಿಗೆ ಸ್ಥಳಾಂತರಿಸಲಾಗುವುದು. ನಿಜಲಿಂಗಪ್ಪ ಬಡಾವಣೆಯ ಬಳಿ ಒಂದು ಫುಡ್ ಕೋರ್ಟ್‌ ಮಾಡಲಾಗುವುದು. ಅರುಣ ಚಿತ್ರಮಂದಿರ ಬಳಿ ಇರುವವರಿಗೆ ಮೀನು ಮಾರುಕಟ್ಟೆ ಬಳಿ ಪಾಲಿಕೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗುವುದು. ಹೀಗೆ ಎಲ್ಲೆಲ್ಲಿ ಸಾಧ್ಯ ನೋಡಿ ಫುಡ್‌ಕೋರ್ಟ್‌ ಮಾಡಲು ಚಿಂತನೆ ನಡೆಸಲಾಗಿದೆ. ಪಾಲಿಕೆಗೆ ಬರುವ ಯಾವುದಾದರೂ ಅನುದಾನವನ್ನು ಈ ಯೋಜನೆಗೆ ಆಯುಕ್ತರು ಮೀಸಲಿಡಬೇಕು ಎಂದು ತಿಳಿಸಿದರು.

’ಸಂಜೆ ಹೊತ್ತಿಗೆ ಒಂದು ಕಾರು ಹೋಗುವುದು ಕೂಡ ಈ ಸರ್ಕಲ್‌ನಲ್ಲಿ ಕಷ್ಟವಾಗುತ್ತದೆ. ಒಬ್ಬರು ಬೈಕ್‌ ನಿಲ್ಲಿಸುತ್ತಾರೆ. ಅದರ ಹಿಂದೆ ಮತ್ತೊಬ್ಬರು ಆಟೊ ನಿಲ್ಲಿಸುತ್ತಾರೆ. ಮತ್ತೊಂದು ಕಾರು ಬಂದಿ ನಿಲ್ಲುತ್ತದೆ. ಅಲ್ಲೇ ತಮಗೆ ಬೇಕಾದುದನ್ನು ತಗೊಂಡು ತಿನ್ನುತ್ತಾರೆ. ಇದರಿಂದ ಸಮಸ್ಯೆಯಾಗಿದೆ. ಫುಟ್‌ಪಾತ್‌ ಹಿಂದಕ್ಕೆ ಹೋದರೆ ಪಾರ್ಕಿಂಗ್‌ಗೆ ಸಮಸ್ಯೆಯಾಗುವುದಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್‌, ಸ್ಮಾರ್ಟ್‌ಸಿಟಿ ಅಧಿಕಾರಿಗಳು ಇದ್ದರು.

ಮರ ತೆರವು

ರಾಮ್‌ ಆ್ಯಂಡ್‌ ಕೋ ಸರ್ಕಲ್‌ನಲ್ಲಿ ಟ್ರಾಫಿಕ್‌ ತಪ್ಪಿಸಲು ರಸ್ತೆ ಅಗಲವಾಗಬೇಕು. ಅದಕ್ಕೆ ಅಲ್ಲಿರುವ ಮರಗಳನ್ನು ತೆರವುಗೊಳಿಸಲು ಪಾಲಿಕೆ ನಿರ್ಧರಿಸಿದೆ.

‘ದೇವಸ್ಥಾನದ ಮರಗಳು ಎಂಬ ಕಾರಣಕ್ಕೆ ಬಿಟ್ಟಿದ್ದೇವೆ. ಆದರೆ ತೊಂದರೆಯಾಗುತ್ತಿದೆ. ಎಲ್ಲ ಮರಗಳನ್ನು ತೆರವುಗೊಳಿಸುವುದಿಲ್ಲ. ತೊಂದರೆಯಾಗುವ ಒಂದೆರಡು ಮರಗಳನ್ನಷ್ಟೇ ತೆಗೆಯಬೇಕಾಗುತ್ತದೆ’ ಎಂದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ತಿಳಿಸಿದರು.

‘ಪಾಲಿಕೆಯಿಂದ ಒಂದು ಲಕ್ಷ ಗಿಡಗಳನ್ನು ನೆಡುವ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು. ಇಲ್ಲಿ ಒಂದು ಮರ ತೆರವು ಮಾಡಿದರೆ ಅದರ ಬದಲು ನಾಲ್ಕು ಗಿಡ ನೆಡಲಾಗುವುದು’ ಎಂದು ಸಮರ್ಥಿಸಿಕೊಂಡರು.

‘ಅರಣ್ಯ ಇಲಾಖೆಯವರ ಗಮನಕ್ಕೆ ತಂದು ತಜ್ಞರೊಂದಿಗೆ ಚರ್ಚಿಸಿ ಮರ ತೆರವು ಮಾಡಬೇಕಾಗುತ್ತದೆ. ಮರ ತೆಗೆದರೆ ಬಹಳ ಅನುಕೂಲವಾಗುತ್ತದೆ’ ಎಂದು ಎಸ್‌ಪಿ ಹನುಮಂತರಾಯ ಹೇಳಿದರು.

ಮಾಸ್ಕ್‌ ಧರಿಸದಿದ್ದರೆ ದಂಡ: ಎಸ್‌ಪಿ

‘ಮಾಸ್ಕ್‌ ಧರಿಸದೇ ಇದ್ದರೆ ನಗರ ಪ್ರದೇಶದಲ್ಲಿ ₹ 1, 000 ಮತ್ತು ಗ್ರಾಮೀಣ ಪ್ರದೇಶದಲ್ಲಿ ₹ 500 ದಂಡ ವಿಧಿಸಲು ಸರ್ಕಾರದ ಸೂಚನೆ ಇದೆ. ಅದನ್ನು ಇಂದಿನಿಂದಲೇ ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ’ ಎಂದು ಎಸ್‌ಪಿ ಹನುಮಂತರಾಯ ತಿಳಿಸಿದರು.

‘ಯಾರೂ ದಂಡಕಟ್ಟಬೇಕಿಲ್ಲ. ಎಲ್ಲರೂ ಮಾಸ್ಕ್‌ ಧರಿಸಿ ಹೊರ ಬಂದರೆ ಆಯಿತು. ಆಗ ಯಾರಿಗೂ ಹೊರೆ ಬೀಳುವುದಿಲ್ಲ’ ಎಂದು ದಂಡ ಹೆಚ್ಚು ಇರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಎಲ್ಲರೂ ಮಾಸ್ಕ್‌ ಧರಿಸಬೇಕು. ಕಾರ್ಪೊರೇಟರ್‌ಗಳು, ಅಧಿಕಾರಿಗಳು ಯಾರೇ ಮಾಸ್ಕ್‌ ಧರಿಸದೇ ಇದ್ದರೂ ದಂಡ ವಿಧಿಸಬೇಕು. ಆಗ ಕೊರೊನಾ ನಿಯಂತ್ರಿಸಲು ಸಾಧ್ಯ’ ಎಂದು ಮೇಯರ್‌ ಅಜಯ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT