ಸೋಮವಾರ, ಸೆಪ್ಟೆಂಬರ್ 27, 2021
22 °C

ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಎಚ್.ಕಡದಕಟ್ಟೆ ಗ್ರಾ.ಪಂ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಹ್ಯಾಂಡ್‌ಪೋಸ್ಟ್ ಬಡಾವಣೆಯ ನಿವಾಸಿಗಳು ಬುಧವಾರ ಖಾಲಿ ಕೊಡಗಳನ್ನು ಹಿಡಿದು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಹ್ಯಾಂಡ್‌ಪೋಸ್ಟ್ ಬಡಾವಣೆಯಲ್ಲಿ ನೂರಾರು ಮನೆಗಳಿವೆ. ಇಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂರು ತಿಂಗಳಿನಿಂದಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿ ಸಮೀಪ ಇರುವ ಗಡಿ ಚೌಡೇಶ್ವರಿ ದೇವಸ್ಥಾನದ ಬಳಿ ಇದ್ದ ಕೊಳವೆಬಾವಿಯಿಂದ ಈವರೆಗೆ ನೀರು ಪೂರೈಸಲಾಗುತ್ತಿತ್ತು. ಆದರೆ, ಅಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳಲಾರಂಭಿಸಿದ ಬಳಿಕ ಟ್ಯಾಂಕರ್ ಮೂಲಕ ನೀರು ಪೂರೈಸಲು ಆರಂಭಿಸಲಾಗಿದೆ. ಆದರೆ, ಬಹುತೇಕ ಕೂಲಿ ಕಾರ್ಮಿಕರೇ ಈ ಬಡಾವಣೆಯಲ್ಲಿ ಇರುವುದರಿಂದ ನೀರಿನ ಟ್ಯಾಂಕರ್ ಬರುವುದನ್ನೇ ಕಾದು ಕುಳಿತುಕೊಳ್ಳುವ ಸ್ಥಿತಿ ಇದೆ ಎಂದು ಪ್ರತಿಭಟನಕಾರರು ದೂರಿದರು.

ನೀರಿನ ಟ್ಯಾಂಕರ್ ಅನ್ನು ಕೆಲವೇ ವ್ಯಕ್ತಿಗಳ ಮನೆ ಎದುರು ನಿಲ್ಲಿಸಿ ನೀರು ಪೂರೈಸುತ್ತಿರುವುದರಿಂದ, ಕೆಲವರಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ನಮಗೆ ಟ್ಯಾಂಕರ್ ನೀರು ಬೇಡ. ಪೈಪ್‍ಲೈನ್ ಮೂಲಕವೇ ನೀರು ಒದಗಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದರು. 

ಕೊಳವೆಬಾವಿ ಕೊರೆಸಲು ಸ್ಥಳ ಗುರುತಿಸಲಾಗಿದೆ. ಪೈಪ್‍ಲೈನ್ ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ನಾಗಪ್ಪ ಅವರು ಅದಕ್ಕೆ ಸಹಿ ಹಾಕುತ್ತಿಲ್ಲ ಎಂದು ಸದಸ್ಯ ಬಿ.ಕೆ. ಮಾದಪ್ಪ ಆರೋಪಿಸಿದರು.

ಉದ್ಯೋಗ ಖಾತ್ರಿ ಯೋಜನೆ ಸೇರಿ ವಿವಿಧ ಯೋಜನೆಗಳಡಿ ನಿರ್ವಹಿಸಲಾದ ಕಾಮಗಾರಿಗಳ ಬಿಲ್‍ಗಳಿಗೂ ಅಧ್ಯಕ್ಷೆ ಸಹಿ ಹಾಕುತ್ತಿಲ್ಲ. ಅವರ ಧೋರಣೆಯಿಂದಾಗಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳೂ ಸ್ಥಗಿತಗೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸ್ಥಳಕ್ಕೆ ಆಗಮಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.

 ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಹಮ್ಮದ್ ರಫಿ ಸಾರ್ವಜನಿಕರ ಅಹವಾಲು ಆಲಿಸಿದರು. ಪಿಡಿಒ ರವಿಕುಮಾರ್ ಅವರಿಂದ ನೀರು ಪೂರೈಕೆ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆದರು.

ನೀರು ಅಲಭ್ಯತೆಯ ಸಂದರ್ಭದಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲು ಕ್ರಮ ಜರುಗಿಸಲಾಗುವುದು. ಯಾರೂ ಆತಂಕಪಡಬಾರದು. ಈ ಬಗ್ಗೆ  ಇಒ ಎಚ್.ವಿ. ರಾಘವೇಂದ್ರ ಮತ್ತು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ನಾಗಪ್ಪ ಅವರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಆದರೂ ಅಧ್ಯಕ್ಷೆ ಲಕ್ಷ್ಮಮ್ಮ ಬರುವವವರೆಗೂ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಪ್ಪ, ಸಂತೋಷ್, ಪಿಡಿಒ ರವಿಕುಮಾರ್ ‌ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು