ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸೂಳೆಕೆರೆಯಲ್ಲಿಲ್ಲ ಕಪ್ಪೆಗಳು ಏಕೆ! ‘ಮೆಕೆಂಝಿ ಸಂಪುಟ’ದಲ್ಲಿದೆ ಕತೆ

ನೂರಾರು ವರ್ಷಗಳಿಂದ ಸ್ಥಳೀಯರಿಗೂ ಗೋಚರಿಸದ ಮಂಡೂಕಗಳು
Last Updated 6 ಅಕ್ಟೋಬರ್ 2022, 6:33 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಇಲ್ಲಿನ ಐತಿಹಾಸಿಕ ಸೂಳೆಕೆರೆಯಲ್ಲಿ ಮಂಡೂಕಗಳು ಇ‌ಲ್ಲ.ನೂರಾರು ವರ್ಷಗಳಿಂದ ಸ್ಥಳೀಯರೂ, ಹತ್ತಾರು ವರ್ಷ ಕೆರೆ ಪರಿಚಿತವಿದ್ದವರೂ ಕಪ್ಪೆಗಳನ್ನು ಕಂಡಿಲ್ಲ. ಅವರು ಹೆಚ್ಚು ಪರಿಶೀಲಿಸದ ಕಾರಣ ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಹಲವು ಕುತೂಹಲದ ಅಂಶಗಳನ್ನು ತನ್ನೊಳಗೆ ಇಟ್ಟುಕೊಂಡಿದೆ ಎಂಬುದು ಹಲವರ ಗಮನಕ್ಕೆ ಬಂದಿಲ್ಲ.

ಕೆರೆ ಬಳಿ ಸುಳಿದಾಡಿದಾಗ ಕಪ್ಪೆಗಳ ಗಟರು, ನೆಗೆತ ಕೇಳಿದ, ನೋಡಿದ ಸ್ಮೃತಿ ಇಲ್ಲ.ವಾಸ್ತವ ಏನೇ ಇರಲಿ. ಕಪ್ಪೆಗಳ ವಾಸ ಇಲ್ಲ ಎನ್ನುವುದಕ್ಕೆ ಹಲವರ ಅಭಿಪ್ರಾಯಗಳು ವಿಭಿನ್ನ. ವೈಜ್ಞಾನಿಕ ತಳಹದಿಯಲ್ಲಿಯೂ ಸಕಾರಣಗಳು ಇರಬಹುದು. ಒಂದಿಷ್ಟು ಸೂಳೆಕೆರೆ ಬಗ್ಗೆ ದಾಖಲಿತ ಇತಿಹಾಸ ಪುಟಗಳನ್ನು ತಿರುವಿ ಹಾಕಿದಾಗ ಒಂದು ಐತಿಹ್ಯ ಕಪ್ಪೆಗಳಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡಿತು ಎನ್ನುತ್ತಾರೆ ಇತಿಹಾಸ ತಜ್ಞ ಸುಮತೀಂದ್ರ ನಾಡಿಗ್‌.

ಬ್ರಿಟಿಷ್ ಇತಿಹಾಸ ತಜ್ಞ ಮೆಕೆಂಝಿ ತನ್ನ ಕರ್ನಾಟಕ ರಾಜ್ಯದ ಇತಿಹಾಸ ತಿಳಿಸುವ ‘ಮೆಕೆಂಝಿ ಸಂಪುಟ’ ಎನ್ನುವ ಪುಸ್ತಕದಲ್ಲಿ ಸೂಳೆಕೆರೆಯಲ್ಲಿ ಕಪ್ಪೆಗಳಿಲ್ಲ ಎಂಬುದಕ್ಕೆ ಒಂದು ಜನಪದ ಕಥೆಯನ್ನು ತೆರೆದಿಟ್ಟಿದ್ದಾನೆ.ಆ ಸಂಪುಟದ 357ನೇ ಭಾಗದ ‘ಮಲ್ಲೂರು ಸಾಸಿವೇಹಳ್ಳಿ ಶೀಮೆ ಕೈಫಿಯತ್ತು’ ಎನ್ನುವ ಅಧ್ಯಾಯದಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಅಂದಿನ ಸ್ವರ್ಗಾವತಿ ಪಟ್ಟಣ (ಇಂದಿನ ಸೂಳೆಕೆರೆ)ವನ್ನು ಆಳುತ್ತಿದ್ದ‌ವಿಕ್ರಮ ರಾಜನ ತಮ್ಮ ವೀರ ಪ್ರತಾಪರಾಯನು ಪಶ್ವಿಮದ ತುಂಗಭದ್ರಾ ತೀರದ ಕೇಸನಕೆರೆ ಎಂಬ ಭಾಗದಲ್ಲಿ ಕ್ರಿ.ಶ. 1128ರಿಂದ 1130ರ ಅವಧಿಯಲ್ಲಿ ಒಂದು ಕೆರೆಯನ್ನು ಕಟ್ಟಿಸು
ತ್ತಾನೆ. ಆ ಕೆರೆಯನ್ನು ಗಂಗಾ ಪೂಜೆ ಮಾಡಿಸಿ ಕೆರೆ ತೆಗೆಸಿದ್ದರಿಂದ ಅದಕ್ಕೆ ‘ಗಂಗ ಸಮುದ್ರ’ ಎಂದು ಹೆಸರಿಟ್ಟ.

ಸೂಳೆಕೆರೆಯಲ್ಲಿದ್ದ ಕಪ್ಪೆಗಳಿಗೆ ಹೊಸ ಕೆರೆ ಗಂಗ ಸಮುದ್ರ ನೋಡಲು ಆಸೆಯಾಯಿತು. ಎಲ್ಲವೂ ಸೇರಿ ಆಲೋಚನೆ ಮಾಡಿ. ಅಲ್ಲಿಗೆ ಹೊರಟವು. ಗುಂಪಿನಲ್ಲಿ ಬಂದು ಗಂಗ ಸಮುದ್ರದಲ್ಲಿ ಕೆಲ ದಿನ ನೆಲೆಸಿದವು. ಕೆಲ ದಿನಗಳ ಬಳಕ ಸೂಳೆಕೆರೆಗೆ ಹಿಂತಿರುಗಲು ಮುಂದಾದವು. ಸೂಳೆಕೆರೆಗೆ ಸಾಗುವ ಮಾರ್ಗ ಮಧ್ಯದ ಗುಡ್ಡದಲ್ಲಿ ಭಾರಿ ಬಿಸಿಲು ಇದ್ದುದರಿಂದ ಮುಂದೆ ಸಾಗಲಾರದೆ ಚೈತನ್ಯ ಕಳೆದುಕೊಂಡವು. ಮುಂದೆ ಹೋಗಲು ಆಗದೇ ಕಪ್ಪೆಗಳು ಅಲ್ಲೇ ನೆಲೆನಿಂತವು ಎಂಬ ಕತೆಯನ್ನುಮೆಕೆಂಝಿ ಉಲ್ಲೇಖಿಸಿದ್ದಾರೆ.ಮಧ್ಯದ ಗುಡ್ಡದಲ್ಲಿಯೇ ಕಪ್ಪೆಗಳು ನಿಂತಿದ್ದರಿಂದ ಈಗಲೂ ಆ ಗುಡ್ಡಕ್ಕೆ ‘ಕಪ್ಪಿಕಲ್ಲು’ ಎಂದು ಕರೆಯಲಾಗುತ್ತದೆ ಎಂದುಇತಿಹಾಸ ತಜ್ಞ ಸುಮತೀಂದ್ರ ನಾಡಿಗ್‌ ವಿವರಿಸಿದರು.

ಕಪ್ಪೆಗಳು ಅಲ್ಲೇ ನೆಲೆ ನಿಂತಿದ್ದರಿಂದಅಂದಿನಿಂದ ಸೂಳೆಕೆರೆಯಲ್ಲಿ ಒಂದು ಕಪ್ಪೆಯೂ ಇಲ್ಲ ಎಂದು ಹಲವರು ಹೇಳಿತ್ತಾರೆ ಎಂದರು ಅವರು.

‘ಸೂಳೆಕೆರೆಯಲ್ಲಿ ದೊಡ್ಡ ಗಾತ್ರದ ಮೀನುಗಳಿವೆ. ಕಪ್ಪೆಗಳ ಮೊಟ್ಟೆ ಹಾಗೂ ಮರಿಗಳನ್ನು ಕಬಳಿಸುವುದರಿಂದ ಕಪ್ಪೆಗಳು ಇಲ್ಲದಿರಬಹುದು. ದಡದಲ್ಲಿ ಕಪ್ಪೆಗಳ ಗೋಚರ ಬಲು ಅಪರೂಪ. ಉಭಯವಾಸಿಗಳಾದ ಇವು ಆಳ ನೀರಿನಲ್ಲಿ ಇರಲಾರವು’ ಎನ್ನುತ್ತಾರೆ ಸೂಳೆಕೆರೆಯ ಸಿದ್ದೇಶ್ವರ ದೇಗುಲದ ಅರ್ಚಕ ಬಸವರಾಜಪ್ಪ.

‘ಸೂಳೆಕೆರೆ ಹಿನ್ನೀರಿನ ಗುಂಡಿಗಳಲ್ಲಿ ಕಪ್ಪೆ ವಾಸಿಸುತ್ತವೆ. ಮೀನುಗಾರರೂ ಕಪ್ಪೆಗಳು ಇರುವುದನ್ನು ಕಂಡಿಲ್ಲ. ಮೀನು, ಏಡಿ, ಆಮೆ, ನೀರು ಹಾವು, ನೀರು ನಾಯಿಯಂತಹ ಜಲಚರಗಳ ನೈಸರ್ಗಿಕ ನಿವಾಸ ಸೂಳೆಕೆರೆ. ಕಪ್ಪೆಗಳು ಕಾಣಸಿಗುವುದು ಅಪರೂಪ. ಅದಕ್ಕೆ ನಿರ್ದಿಷ್ಟ ಕಾರಣ ತಿಳಿದಿಲ್ಲ’ ಎನ್ನುತ್ತಾರೆ ಕೆರೆಬಿಳಚಿಯ ಅಸ್ಲಂ.

ದೋಣಿವಿಹಾರಕ್ಕಾಗಿ ಪ್ರವಾಸಿಗರನ್ನು ರೋವಿಂಗ್ ದೋಣಿಯಲ್ಲಿ ಕರೆದೊಯ್ಯುತ್ತೇವೆ. ನಿತ್ಯ ಹತ್ತಾರು ಬಾರಿ ಸುತ್ತುತ್ತೇವೆ. ದೋಣಿ ವಿಹಾರ ಕೇಂದ್ರ ಸುತ್ತಮುತ್ತ ಕಪ್ಪೆಗಳನ್ನು ನೋಡಿಲ್ಲ.

- ಶಶಿಕುಮಾರ್‌, ದೋಣಿವಿಹಾರ ಕೇಂದ್ರದ ನಿರ್ವಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT