ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕ್ವಿಲ್ಲಿಂಗ್‌ ಕಲೆ’ | ನೀತಾಗೆ ಕರಗತ: ಗಣಪನಿಗಿಲ್ಲಿ ವಿಭಿನ್ನ ರೂಪ

Published 6 ಸೆಪ್ಟೆಂಬರ್ 2024, 7:04 IST
Last Updated 6 ಸೆಪ್ಟೆಂಬರ್ 2024, 7:04 IST
ಅಕ್ಷರ ಗಾತ್ರ

ದಾವಣಗೆರೆ: ವಿಘ್ನ ವಿನಾಶಕ, ವಿಘ್ನ ನಿವಾರಕ ಗಣಪನೆಂದರೆ ಎಲ್ಲರಿಗೂ ಪ್ರೀತಿ. ಚಿಕ್ಕವರಿಂದ ಹಿಡಿದು ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಆರಾಧಿಸುವ ಗಣಪ ಕಲ್ಲು, ಮಣ್ಣು, ಬಟ್ಟೆ, ತರಕಾರಿ, ಧಾನ್ಯ, ರುದ್ರಾಕ್ಷಿ, ಮರಳು ಹೀಗೆ ಹಲವು ಮಾದರಿಗಳಲ್ಲಿ ಅರಳಿದ್ದಾನೆ. ಇಲ್ಲೊಬ್ಬರು ಕಲಾವಿದೆ ಕಾಗದದಲ್ಲಿ ಗಣಪನನ್ನು ಮೂಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ನಗರದ ಚೌಕಿಪೇಟೆಯ ಗೌಡರ ಜಯದೇವಪ್ಪ ಮಳಿಗೆಯ 1ನೇ ಮಹಡಿಯಲ್ಲಿ ಕಲಾವಿದೆ ನೀತಾ ಹರ್ಷ ಗೌಡರ್‌ ಅವರ ಕೈಚಳಕದಿಂದ ಒಡಮೂಡಿರುವ ಕಲಾಕೃತಿಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ‘ಕ್ವಿಲ್ಲಿಂಗ್‌ ಆರ್ಟ್‌’ನಲ್ಲಿ (ತೆಳುವಾದ ಕಾಗದದ ಪಟ್ಟಿಗಳಲ್ಲಿ ಸುಂದರ ವಿನ್ಯಾಸಗಳನ್ನು ರಚಿಸುವುದು) ಮೂಡಿರುವ ಗಣೇಶನ ವಿವಿಧ ಭಂಗಿಗಳು ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌, ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಶ್ರೇಯ ತಂದುಕೊಟ್ಟಿವೆ.

ಹತ್ತು ವರ್ಷಗಳಿಂದ ಕ್ವಿಲ್ಲಿಂಗ್‌ ಆರ್ಟ್‌ನಲ್ಲಿ ಕಲಾಕೃತಿ ಸಿದ್ಧಪಡಿಸುತ್ತಿರುವ ನೀತಾ, ನಿತ್ಯ ಅದಕ್ಕೆಂದು ಎರಡರಿಂದ ಮೂರು ಗಂಟೆ ಮೀಸಲಿಡುತ್ತಾರೆ. ಹವ್ಯಾಸಕ್ಕಾಗಿ ಆರಂಭಿಸಿದ ಕಲೆ ಇವರನ್ನು ಸಾಧನೆಯತ್ತ ಕೊಂಡೊಯ್ದಿದೆ. ಕ್ವಿಲ್ಲಿಂಗ್‌ ಪೇಪರ್‌, ಕ್ವಿಲ್ಲಿಂಗ್‌ ಸೂಜಿ, ಮೌಲ್ಡ್‌, ಸ್ಟೋನ್‌ಗಳನ್ನು ಬಳಸಿ ವೈವಿಧ್ಯಮಯ ಕಲಾಕೃತಿಗಳನ್ನ ಅವರು ರಚಿಸಿದ್ದಾರೆ.

ಕೇವಲ 2 ಸೆ.ಮೀ.ನಿಂದ 5 ಸೆಂ.ಮೀ.ಎತ್ತರದ ಚಿಕ್ಕಚಿಕ್ಕ ಗಣೇಶನ ಕಲಾಕೃತಿಗಳು ಭಕ್ತಿಯ ಭಾವ ಸ್ಫುರಿಸುತ್ತಿವೆ. 300ಕ್ಕೂ ಹೆಚ್ಚು ಮೂರ್ತಿಗಳು ಪ್ರದರ್ಶನದಲ್ಲಿವೆ. ಇವಲ್ಲದೇ ಬಸವಣ್ಣ, ಬುದ್ಧ, ಈಶ್ವರ, ಯಕ್ಷಗಾನ ಕಲೆ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನೂ ಕ್ವಿಲ್ಲಿಂಗ್‌ ಪೇಪರ್‌ನಲ್ಲಿ ಒಡಮೂಡಿಸಿದ್ದಾರೆ.

ವಿವಿಧ ಭಂಗಿಗಳಲ್ಲಿ ಗಣೇಶ: ಯೋಗದ ವಿವಿಧ ಭಂಗಿಗಳ ಗಣಪ, ಸಂಗೀತದ ವಿವಿಧ ವಾದ್ಯಗಳನ್ನು ನುಡಿಸುತ್ತಿರುವ ಗಣಪ, ಕ್ರಿಕೆಟ್‌ ಆಟಗಾರ ಗಣಪ, ಚಂದ್ರಯಾನದಲ್ಲಿ ತೊಡಗಿರುವ ಗಣಪ, ಶಿವನನ್ನು ಆಲಂಗಿಸಿಕೊಂಡಿರುವ ಗಣಪ, ಅಡುಗೆ ಮಾಡುವ, ತರಕಾರಿ ಮಾರುವ, ಶಿವಲಿಂಗ ಪೂಜಿಸುವ, ವ್ಯಾಯಾಮದಲ್ಲಿ ತೊಡಗಿರುವ, ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುವ ಗಣೇಶನ ಹಲವು ಭಂಗಿಗಳಲ್ಲಿ ಮೂಡಿರುವ ಕಲಾಕೃತಿಗಳು ಅಚ್ಚರಿ ಮೂಡಿಸುತ್ತವೆ. ಇವಲ್ಲದೇ ರಾಮಮಂದಿರದ ಕಲಾಕೃತಿ, ಹೂವಿನ ಬುಟ್ಟಿ, ಟೀ ಸೆಟ್‌, ಸ್ಟೋನ್‌ ವರ್ಕ್‌ನಲ್ಲಿ ಅರಳಿರುವ ಕಲಾಕೃತಿಗಳು ಗಮನ ಸೆಳೆಯುತ್ತವೆ.

ಎಂಬಿಎ ಪದವೀಧರೆಯಾಗಿರುವ ನೀತಾ, ಈ ಕಲೆಯನ್ನು ಇತರರಿಗೂ ಹೇಳಿಕೊಡುವ ಇರಾದೆ ಇಟ್ಟುಕೊಂಡಿದ್ದು, ಅದಕ್ಕಾಗಿ ಹಲವೆಡೆ ವರ್ಕ್‌ಶಾಪ್‌, ಶಾಲೆಗಳಲ್ಲಿ ತರಬೇತಿಗಳನ್ನು ಕೈಗೊಳ್ಳುತ್ತಿದ್ದಾರೆ.

ಕ್ವಿಲ್ಲಿಂಗ್‌ ಆರ್ಟ್‌ ಹೆಚ್ಚು ತಾಳ್ಮೆ, ಸಮಯ ಬೇಡುತ್ತದೆ. ಕಲಾಕೃತಿಗಳನ್ನು ತಯಾರಿಸುವುದು ನನ್ನ ಖುಷಿ. ಇದಕ್ಕೆ ಕುಟುಂಬದ ಸಹಕಾರ ಬಹಳಷ್ಟಿದೆ
ನೀತಾ ಹರ್ಷ ಗೌಡರ್, ಕ್ವಿಲ್ಲಿಂಗ್‌ ಆರ್ಟ್‌ ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT