ರಿಪ್ಪನ್‌ಪೇಟೆ: ಕೂಡು ಕುಟುಂಬ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಂದು ಅವಿಭಕ್ತ ಕುಟುಂಬ ಎಲ್ಲ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತದೆ. ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಂಕ ಗ್ರಾಮದ ಕಂಬತ್ತ ಮನೆತನದಲ್ಲಿ ಈಗ ಗೌರಿ ಹಬ್ಬದ ಸಂಭ್ರಮ.
ಈ ಮನೆತನದಲ್ಲಿ ವಾರ ಮೊದಲೇ ಹಬ್ಬದ ತಯಾರಿ ನಡೆಯುತ್ತದೆ. ಹಬ್ಬದ ಹಿಂದಿನ ದಿನವೇ ಒಗ್ಗೂಡುವ ಮನೆಯ ಎಲ್ಲ ಸದಸ್ಯರು ಗೌರಿ ಹಬ್ಬದಲ್ಲಿ ಮಾತೆಯರು ಮುಂಜಾನೆಯಿಂದ ಉಪವಾಸ ವಿದ್ದು, ದೇವರ ಪೂಜಾ ಸಾಮಗ್ರಿಗಳನ್ನು ಶುಚಿಗೊಳಿಸಿ ಪೂಜೆ ನೆರವೇರಿಸಿದರು.
ಕುಮುದ್ವತಿ ನದಿ ಬಳಿ ಮನೆಯಿಂದ ತಂದಿದ್ದ ಕಳಸಕ್ಕೆ ಮರಳು ಮಿಶ್ರಿತ ನೀರು ತುಂಬಿದ ಕಳಸ ಪ್ರತಿಷ್ಠಾಪಿಸುವ ಮೂಲಕ ಗೌರಿ ಹಬ್ಬಕ್ಕೆ ಚಾಲನೆ ನೀಡಿದರು.
ಮೂರು ದಿನಗಳ ಕಾಲ ದೇವಿ ಗೌರಮ್ಮನಿಗೆ ಹಚ್ಚಿದ ದೀಪ ಆರದಂತೆ ಕುಟುಂಬದವರು ಕಾಯುತ್ತಾರೆ.
ಮೂರನೇ ದಿನ ಬಾಳೆಕಂಬದ ತೇರನ್ನು ನಿರ್ಮಿಸಿ, ದೀಪಾಲಂಕಾರ ಮಾಡಿ, ರಾತ್ರಿ ವೈಭವದ ವಿಸರ್ಜನಾ ಪೂಜೆ ಸಲ್ಲಿಸಿ, ನದಿ ನೀರಿನಲ್ಲಿ ದೇವಿಯನ್ನು ತೇಲಿ ಬಿಟ್ಟು, ಪುನಃ ನದಿಯಿಂದ ಗಂಗೆಯನ್ನು ಮನೆಗೆ ತಂದು ವಿದ್ಯುಕ್ತವಾಗಿ ಪೂಜೆ ಸಲ್ಲಿಸಿ, ಮರುದಿನ ವಿಸರ್ಜನೆ ಮಾಡುವ ಮೂಲಕ ಗೌರಿ ಹಬ್ಬಕ್ಕೆ ತೆರೆ ನೀಡುತ್ತಾರೆ.
ಎಸ್.ಕೆ. ಸುಬ್ಬನಾಯ್ಕ್, ಸೀತಮ್ಮ ದಂಪತಿಗೆ ಏಳು ಜನ ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಎಲ್ಲರೂ ಒಟ್ಟಿಗೆ ಇದ್ದು, ಈ ಬೆಳದಿಂಗಳ ಮನೆಯ ಮನೆಯಲ್ಲಿ 42 ಸದಸ್ಯರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.