ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಬರನ್ನು ನೋಡಿ ಸಾಕಾಗಿದೆ, ಹೊಸಬರು ಬರಲಿ: ಜಿ.ಬಿ.ವಿನಯ್‌ಕುಮಾರ್ ಬಿರುಸಿನ ಪ್ರಚಾರ

ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್‌ಕುಮಾರ್ ಬಿರುಸಿನ ಪ್ರಚಾರ
Published 3 ಮೇ 2024, 5:27 IST
Last Updated 3 ಮೇ 2024, 5:27 IST
ಅಕ್ಷರ ಗಾತ್ರ

ದಾವಣಗೆರೆ: ‘ಹಳೇ ಮುಖಗಳನ್ನು ನೋಡಿ ಸಾಕಾಗಿದೆ. ರಾಜಕಾರಣದಲ್ಲಿ ಹೊಸ ಮುಖಗಳು ಬರಬೇಕು’

–ಇದು ದೊಡ್ಡಬಾತಿಯಲ್ಲಿ ಅಂಗಡಿ ಇಟ್ಟುಕೊಂಡಿರುವ ದುರ್ಗಮ್ಮ ಅವರ ಅಭಿಪ್ರಾಯ.

ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಅವರು ಗುರುವಾರ ಪ್ರಚಾರಕ್ಕೆ ತೆರಳಿದ ವೇಳೆ ಜನರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದರು.

‘ರಾಜಕಾರಣದಲ್ಲಿ ಹೊಸಬರು ಸ್ಪರ್ಧಿಸಿ ಪ್ರಯತ್ನ ಮಾಡಬೇಕು. ಹಳಬರನ್ನು ನೋಡಿ ತಲೆಕೆಟ್ಟು ಹೋಗಿದೆ. ಹೊಸಬರನ್ನು ತರಬೇಕು ಎಂಬುದು ಜನರ ಅಪೇಕ್ಷೆಯಾಗಿದೆ. ವಿನಯ್‌ಕುಮಾರ್ ಅವರ ಪ್ರಯತ್ನ ಒಳ್ಳೆಯದು. ದೇವರು ಅವರನ್ನು ಕಾಪಾಡಲಿ’ ಎಂದು ಹರಸಿದರು.

ಜಿ.ಬಿ. ವಿನಯ್ ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗುರುವಾರ ಮತಯಾಚನೆ ನಡೆಸಿದರು. ಮುಂಜಾನೆಯೇ ಅಪಾರ ಬೆಂಬಲಿಗರು ಮನೆಯ ಮುಂದೆ ಜಮಾಯಿಸಿದರು. ಕಾರ್ಯಕರ್ತರು ತಿಂಡಿ ತಿಂದು ಪ್ರಚಾರಕ್ಕೆ ಅಣಿಯಾಗುತ್ತಿದ್ದರು. ಮನೆಗೆ ಬಂದಿದ್ದ ಮಹಿಳೆಯೊಬ್ಬರು ನಮ್ಮ ಸಂಘದಿಂದ ನಿಮಗೆ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದರು. ಆಗ ಧನ್ಯವಾದ ತಿಳಿಸಿದರು.

ಸಿಲಿಂಡರ್ ಹೊತ್ತ ವಾಹನದಲ್ಲಿ ಅವರ ಬೆಂಬಲಿಗರು ಕಾರ್ಯಕರ್ತರು ಪ್ರಚಾರಕ್ಕೆ ತೆರಳುತ್ತಿದ್ದಂತೆ ಜಿ.ಬಿ. ವಿನಯ್‌ಕುಮಾರ್ ಅವರನ್ನು ಹಿಂಬಾಲಿಸಿದರು.

ರಸ್ತೆಯಲ್ಲಿ ಹೋಗುತ್ತಿರುವಾಗಲೇ ಅಭಿಮಾನಿಗಳು, ಕಾರ್ಯಕರ್ತರು ನಮಸ್ಕರಿಸಿದರು. ಪ್ರತಿಯಾಗಿ ವಿನಯ್‌ಕುಮಾರ್ ಅವರು ವಿನಯದಿಂದಲೇ ಎಲ್ಲರಿಗೂ ನಮಸ್ಕಾರ ಮಾಡಿದರು.

ಪ್ರಚಾರಕ್ಕೂ ತೆರಳುವ ಮುನ್ನ ಇಲ್ಲಿನ ಕಲ್ಯಾಣ ಮಂಟಪವೊಂದರಲ್ಲಿ ದಂಪತಿಗೆ ಶುಭ ಹಾರೈಸಿ ಕಾರು ಹತ್ತಿದರು. ದೊಡ್ಡಬಾತಿಯ ರೇವಣ ಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ದೊಡ್ಡಬಾತಿಗೆ ತೆರಳುತ್ತಿದ್ದಂತೆ ಕಾರ್ಯಕರ್ತರು ಅಭಿಮಾನಿಗಳು ಹೂವಿನ ಹಾರ, ಶಾಲು ಹಾಕಿ ಸನ್ಮಾನಿಸಿದರು. ಜೊತೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರು. 

ಮತಯಾಚನೆ ವೇಳೆ ವಿನಯ್‌ಕುಮಾರ್ ಅವರು ಕಾರು ನಿಲ್ಲಿಸಿ ‘ನಾನು ಯಾರು ಎಂದು ಗೊತ್ತಾಯಿತಾ’ ಎಂದು ವ್ಯಕ್ತಿಯೊಬ್ಬರನ್ನು ಕೇಳಿದರು. ‘ಗೊತ್ತಾಯಿತು, ನಾವು ಬೇಸತ್ತಿದ್ದೇವೆ. ಖಂಡಿತ ನಿಮ್ಮನ್ನು ಬೆಂಬಲಿಸುತ್ತೇವೆ’ ಎಂದು ಆವ್ಯಕ್ತಿ ಭರವಸೆ ನೀಡಿದರು.

‘ಒಂದು ಕುಟುಂಬದವರಿಗೆ ಮತ ಹಾಕಿ ಬೇಸತ್ತಿದ್ದೇವೆ. ನಮಗೆ ಅಭಿವೃದ್ಧಿ ಮಾಡುವ ಹೊಸ ಅಭ್ಯರ್ಥಿಗಳು ಬೇಕು’ ಎಂದು ಗ್ರಾಮದ ಸಿದ್ದೇಶ್ವರ ಹೇಳಿದರು. 

‘ವಿನಯ್‌ಕುಮಾರ್ ಅವರು ಗೆದ್ದರೆ, ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡುತ್ತಾರೆ. ವಿದ್ಯಾವಂತ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡುತ್ತಾರೆ’ ಎಂದು ಹೇಳಿದರು.

ಜನರೇ ನನ್ನ ಹೈಕಮಾಂಡ್

ದೊಡ್ಡಬಾತಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿ, ‘ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವಿನ ಜಗಳದಲ್ಲಿ ಪಕ್ಷೇತರ ಅಭ್ಯರ್ಥಿ ಲಾಭ ಪಡೆಯುತ್ತಾರೆ ಎಂಬುದು ಜನರ ಭಾವನೆಯಾಗಿದೆ. ಆದರೆ, ನಾನು ನನ್ನದೇ ತತ್ವ, ಸಿದ್ಧಾಂತ, ವ್ಯಕ್ತಿತ್ವ ಹೊಂದಿದ್ದೇನೆ. ನಾನು ಇಬ್ಬರ ಜಗಳದಲ್ಲಿ ಮೂರನೆಯವನಾಗಿ ಲಾಭ ಪಡೆಯಲು ಬಂದಿಲ್ಲ. ದಾವಣಗೆರೆ ಜಿಲ್ಲೆಯು ಅಭಿವೃದ್ಧಿಯತ್ತ ದಾಪುಗಾಲು ಇಡಬೇಕು. ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ರಾಜಕೀಯದಲ್ಲಿ ಹೊಸ ಚಳವಳಿ ಆರಂಭಿಸಬೇಕು ಎಂದು ಆಸೆ ಇಟ್ಟುಕೊಂಡಿರುವ ನನಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಜನರೇ ನನ್ನ ಹೈಕಮಾಂಡ್. ಸಾಮಾನ್ಯ ಜನರಿಗೂ ಅಧಿಕಾರ ಸಿಗುವಂತಾಗಬೇಕು ಎಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಸ್ಪರ್ಧಿಸಬೇಕು ಎಂದು ತಿಳಿಸಿದ ಅವರು, ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ಸಿಗಬೇಕಿತ್ತು. ಆದರೆ ಅದನ್ನು ಯಾರು ತಪ್ಪಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. 30 ವರ್ಷಗಳ ಹಿಂದೆ ಚನ್ನಯ್ಯ ಒಡೆಯರ್ ಯಾವ ರೀತಿ ಅನ್ಯಾಯವಾಗಿತ್ತೋ ಅದೇ ರೀತಿ ಅನ್ಯಾಯ ಮಾಡಲಾಗಿದೆ. ಇಲ್ಲಿ ಕಾಂಗ್ರೆಸ್–ಬಿಜೆಪಿ ಬರುವುದಿಲ್ಲ. ಶಾಮನೂರು ಹಾಗೂ ಜಿ.ಎಂ. ಸಿದ್ದೇಶ್ವರ ಪಕ್ಷ ಎಂದು ಬರುತ್ತದೆ. ಯಾಕೆ ಇವರಿಗೆ ಅಧಿಕಾರ ಕೊಡಬೇಕು ಎಂದು ಸ್ವಾಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ’ ಎಂದು ತಿಳಿಸಿದರು. 

‘ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರ ಸ್ಟಾರ್ ಪ್ರಚಾರಕರು ಬಂದರೂ ಸ್ವಾಭಿಮಾನಿಗಳಾದ ದಾವಣಗೆರೆ ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ. ನನಗೆ ಜನರೇ ಸ್ಟಾರ್ ಪ್ರಚಾರಕರು. ಸೆಲೆಬ್ರಿಟಿಗಳು, ರಾಜಕಾರಣಿಗಳು ಬಂದು ಭಾಷಣ ಮಾಡಿದರೆ ಮತಗಳು ಅವರಿಗೆ ಹೋಗುವುದಿಲ್ಲ. ಜಿಲ್ಲೆಯ ಜನತೆ ಬದಲಾವಣೆ ಬಯಸಿದ್ದು, ಈ ಚುನಾವಣೆಯಲ್ಲಿ ಸಾಧ್ಯವಾಗುತ್ತದೆ’ ಎಂದರು.

ತಾಲೂಕಿನ ದೊಗ್ಗಳ್ಳಿ, ದೊಡ್ಡ ಬೂದಿಹಾಳ್, ಅರಸಾಪುರ, ಕೋಡಿಹಳ್ಳಿ, ಚಿಕ್ಕಬೂದಿಹಾಳು ಸೇರಿದಂತೆ ಹಲವು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಕೋಡಿಹಳ್ಳಿ ಗ್ರಾಮದಲ್ಲಿ ವಿನಯ್ ಕುಮಾರ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. 

ಕೋಡಿಹಳ್ಳಿ ಗ್ರಾಮದ ಆನಂದ, ಕುಮಾರ, ದುರುಗೇಶ, ಹರೀಶ, ಮಧು, ಪ್ರದೀಪ, ಚಿಕ್ಕಬೂದಿಹಾಳು ಗ್ರಾಮದ ಹನುಮಂತಪ್ಪ, ರುದ್ರಪ್ಪ, ಪ್ರಕಾಶ್, ಸಣ್ಣ ರುದ್ರಪ್ಪ, ಪ್ರಕಾಶ, ಅನಂತ, ಮಹೇಶ, ಗಿರೀಶ, ಬಸವರಾಜ್, ಅಣ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.

‘ಹಲವು ಕನಸುಗಳು ಇವೆ’

‘ದಾವಣಗೆರೆಗೆ ಐಟಿ-ಬಿಟಿ ಫುಡ್ ಪ್ರೊಸೆಸಿಂಗ್ ಘಟಕಗಳು ಆಗ್ರೋ ಇಂಡಸ್ಟ್ರೀಸ್  ಅಡಿಕೆ ಮೆಕ್ಕೆಜೋಳ ಭತ್ತ ಸೇರಿದಂತೆ ಇತರೆ ಬೆಳೆಗಳ ಸಂಶೋಧನಾ ಕೇಂದ್ರಗಳು ಚಾಕೊಲೇಟ್ ಪೇಟಿಂಗ್ ಸೇರಿ ಅಡಿಕೆ ಸಂಬಂಧಿತ ಕೈಗಾರಿಕೆಗಳು ಅಡಿಕೆ ಬೈ ಪ್ರೊಡಕ್ಟ್ಸ್ ದ್ರಾವಿಡ್ ಪ್ರಕಾಶ್ ಪಡುಕೋಣೆಅಕಾಡೆಮಿ ಮಾದರಿಯಲ್ಲಿ ಅಕಾಡೆಮಿ ಸ್ಥಾಪನೆ ಮಾಡುವ ಗುರಿ ಹೊಂದಿದ್ದೇನೆ’ ಎಂದು ವಿನಯ್‌ಕುಮಾರ್  ತಿಳಿಸಿದರು. ‘ಕೋಲ್ಡ್ ಸ್ಟೋರೇಜ್ ಪ್ರತಿ ತಾಲ್ಲೂಕಿನಲ್ಲಿ ಸಾಯಿಲ್ ರಿಸರ್ಚ್ ಸೆಂಟರ್ ಕೋಚಿಂಗ್ ಸೆಂಟರ್ ನವೋದಯ ಮಾದರಿಯಲ್ಲಿ ಹಳ್ಳಿ ಶಾಲೆಗಳು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಹೈಟೆಕ್ ಶಾಲೆಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುವುದು’ ಎಂದು ವಿನಯ್ ಕುಮಾರ್ ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT