ಗುರುವಾರ , ಸೆಪ್ಟೆಂಬರ್ 23, 2021
20 °C
ದಾವಣಗೆರೆ ಜಿಲ್ಲಾ ಗಂಗಾಮಸ್ಥರ (ಬೆಸ್ತರ) ಸಂಘ ಆಗ್ರಹ

ಎನ್.ರವಿಕುಮಾರ್‌ಗೆ ಸಚಿವ ಸ್ಥಾನ ನೀಡಿ: ಗಂಗಾಮತಸ್ಥರ ಸಂಘ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಗಂಗಾಮತ ಸಮಾಜದ ಮುಖಂಡ, ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಾವಣಗೆರೆ ಜಿಲ್ಲಾ ಗಂಗಾಮತಸ್ಥರ (ಬೆಸ್ತರ) ಸಂಘ ಒತ್ತಾಯಿಸಿದೆ.

‘ಬಿಜೆಪಿ ಸರ್ಕಾರದಲ್ಲಿ ವಿಧಾನಸಭಾ ಸದಸ್ಯರಿದ್ದರೂ ಸಚಿವ ಸಂಪುಟ ಸ್ಥಾನ ಸಿಕ್ಕಿಲ್ಲ. ಗಂಗಾಮತಸ್ಥ ಸಮಾಜ ಶೇ 70ರಷ್ಟು ಬಿಜೆಪಿಯನ್ನು ಬೆಂಬಲಿಸಿದೆ. ಜಗಳೂರು ತಾಲ್ಲೂಕಿನವರಾದ ರವಿಕುಮಾರ್ ಅವರು 3 ದಶಕಗಳಿಂದಲೂ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ. ಎಬಿವಿಪಿಯಲ್ಲಿ ತೊಡಗಿಸಿಕೊಂಡು ದಕ್ಷಿಣ ಭಾರತದ ಉಸ್ತುವಾರಿ ರಾಷ್ಟ್ರೀಯ ಕಾರ್ಯ ನಿರ್ವಹಿಸಿದ್ದ ಅನುಭವವಿದ್ದು, ಪಕ್ಷಕ್ಕೆ ನಿಷ್ಠರಾಗಿರುವ ಇವರನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು’ ಎಂದು ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲ್ಬುರ್ಗಿ ಕ್ಷೇತ್ರದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದು, ಮಲ್ಲಿಕಾರ್ಜುನ ಖರ್ಗೆಯಂತಹ ನಾಯಕನನ್ನು ಸೋಲಿಸಿ, ಉಮೇಶ್ ಜಾಧವ್ ಅವರ ಗೆಲುವಿಗೆ ಕಾರಣರಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಅನುಭವ ಮಂಟಪದಲ್ಲಿ ಅಂಬಿಗನಿಗೆ ಸಚಿವ ಸ್ಥಾನ ನೀಡಬೇಕು. ಅಂಬಿಗರ ಚೌಡಯ್ಯನಿಗೆ ಬಸವಣ್ಣ ನೀಡಿದ ಸ್ಥಾನವನ್ನು ನೀಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಗಂಗಾಮತಸ್ಥ ಸಮುದಾಯ 1.70 ಲಕ್ಷ ಜನಸಂಖ್ಯೆ ಹೊಂದಿದ್ದು, ಅಲ್ಲದೇ ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಗೂ ಸಂಪುಟದಲ್ಲಿ ಅವಕಾಶ ನೀಡಬೇಕು’ ಎಂದು ಮಂಜುನಾಥ್ ಆಗ್ರಹಿಸಿದರು. 

‘ಎನ್‌. ರವಿಕುಮಾರ್ ಪ್ರಾಮಾಣಿಕರಾಗಿದ್ದು, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರುವ ಇಂತಹ ಹಿಂದುಳಿದ ಜನಾಂಗದ ವ್ಯಕ್ತಿಗೆ ಸಚಿವ ಸ್ಥಾನ ನೀಡಬೇಕು. ಇದು ರಾಜ್ಯದ ಲಕ್ಷಾಂತರ ಗಂಗಾಮತಸ್ಥ ಸಮಾಜದ ಬೇಡಿಕೆ ಆಗಿದೆ’ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಟಿ.ಮಂಜುನಾಥ್, ಮುಖಂಡರಾದ ಕೆ.ಶಿವಮೂರ್ತಿ, ಬಸವರಾಜ್ ಬೇತೂರು, ಜೆ. ಉಮೇಶ್, ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.