ಶನಿವಾರ, ಸೆಪ್ಟೆಂಬರ್ 25, 2021
23 °C
ಹರಪನಹಳ್ಳಿ ತಾಲ್ಲೂಕಿನಲ್ಲಿ 527 ಶಿಕ್ಷಕರ ಕೊರತೆ

ಹರಪನಹಳ್ಳಿ: 15 ಶೂನ್ಯ ಶಿಕ್ಷಕ ಶಾಲೆ, 41 ಏಕೋಪಾಧ್ಯಾಯ ಶಾಲೆ

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಆದರೆ, ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ಕಾರಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

15 ಶೂನ್ಯ ಶಿಕ್ಷಕ ಶಾಲೆಗಳೆಂದು ಗುರುತಿಸಲಾಗಿದ್ದು, ಕಾರ್ಯ ಹೊಂದಾಣಿಕೆ ಮೇಲೆ ಬೇರೆ ಶಾಲೆಯ ಒಬ್ಬೊಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ. 41 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ವಿದ್ಯಾರ್ಥಿಗಳ ಸಂಖ್ಯೆ ಅನುಸಾರ ಶಿಕ್ಷಕರ ಕೊರತೆ ನೀಗಿಸಲು ಸಾಧ್ಯವಾಗದೇ ಶಿಕ್ಷಣ ಇಲಾಖೆ ಪೇಚಿಗೆ ಸಿಲುಕಿದೆ. ಒಟ್ಟು 54,196 ವಿದ್ಯಾರ್ಥಿಗಳಿದ್ದು, 527 ಶಿಕ್ಷಕರ ಕೊರತೆ ಇದೆ.

ತಾಲ್ಲೂಕಿನಲ್ಲಿ 268 ಪ್ರಾಥಮಿಕ ಶಾಲೆಗಳಿದ್ದು, 39,589 ವಿದ್ಯಾರ್ಥಿಗಳಿದ್ದಾರೆ. 1,318 ಶಿಕ್ಷಕ ಹುದ್ದೆಗಳು ಮುಂಜೂರಾಗಿದ್ದು, 858 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 460 ಹುದ್ದೆಗಳು ಖಾಲಿ ಇವೆ. 50 ಶಾಲೆಗಳಲ್ಲಿ ಬೋಧನಾ ಕೊಠಡಿಗಳ ಕೊರತೆ, 55 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 80 ಶಾಲೆಗಳಲ್ಲಿ ಶೌಚಾಲಯವಿಲ್ಲ. 95 ಶಾಲೆಗಳಿಗೆ ಕಾಂಪೌಂಡ್ ಇಲ್ಲ.

25 ಪ್ರೌಢಶಾಲೆಗಳಿದ್ದು, 14,607 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 276 ಶಿಕ್ಷಕ ಹುದ್ದೆಗಳು ಮುಂಜೂರಾಗಿದ್ದು, 209 ಶಿಕ್ಷಕರಿದ್ದಾರೆ. 67 ಹುದ್ದೆಗಳು ಖಾಲಿ ಇವೆ. 3 ಶಾಲೆಯಲ್ಲಿ ಕೊಠಡಿ, ಕುಡಿಯುವ ನೀರು, 6 ಕಡೆಗೆ ಶೌಚಾಲಯದ ಕೊರತೆಯಿದೆ. ಯಾವುದೇ ಶಾಲೆಯಲ್ಲೂ ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯವಿಲ್ಲ.

ಶೂನ್ಯ ಶಿಕ್ಷಕ ಶಾಲೆ: ಪುಣಬಘಟ್ಟ, ವಡ್ಡಿನ ದಾದಾಪುರ, ನಾಗರಕೊಂಡ, ಅರಸೀಕೆರೆ ಉರ್ದು ಶಾಲೆ, ಬಸವನಾಳು, ಪಾವನಪುರ, ಹನುಮಗೊಂಡನಹಳ್ಳಿ, ನಾಗಲಾಪುರ ತಾಂಡಾ, ಮಾದಿಹಳ್ಳಿ, ಉಚ್ಚಂಗಿದುರ್ಗ ಶಿಖರ, ಶ್ರೀಕಂಠಾಪುರ, ವಿ. ಕೊರಚರಹಟ್ಟಿ, ಅಣಿಮೇಗಳ ತಾಂಡಾ, ದಿದ್ಗಿ ತಾಂಡಾ, ಕೆಂಚಾಪುರದ ಶಾಲೆಗಳನ್ನು ಶೂನ್ಯ ಶಿಕ್ಷಕ ಶಾಲೆಗಳೆಂದು ಗುರುತಿಸಲಾಗಿದೆ.

ಏಕೋಪಾಧ್ಯಾಯ ಶಾಲೆ: ಕೊಂಗನಹೊಸೂರು, ಮಾಡ್ಲಗೇರೆ, ಮಾಚಿಹಳ್ಳಿ, ಮಾಡ್ಲಗೇರೆ ತಾಂಡಾ, ಗುಂಡಿನಕೇರಿ, ಹಗರಿಗುಡಿಹಳ್ಳಿ, ಕುಂಚೂರು ಕೆರೆ ತಾಂಡಾ, ಎಂ. ಕೊರಚರಹಟ್ಟಿ, ಉದ್ಗಟ್ಟಿ ಸಣ್ಣತಾಂಡಾ, ಕಾನಹಳ್ಳಿ, ಟಿ. ತುಂಬಿಗೇರಿ, ಹಲುವಾಗಲು ಆಶ್ರಯ ಕ್ಯಾಂಪ್, ಕರಡಿದುರ್ಗ, ಹೊನ್ನಾಪುರ, ಎ. ತಿಮ್ಲಾಪುರ, ನಾಗತಿಕಟ್ಟೆ ತಾಂಡಾ, ಕುರೆಮಾಗನಹಳ್ಳಿ, ಕೋಟೆ ಉಚ್ಚಂಗಿದುರ್ಗ, ಗಿಡ್ಡನಹಳ್ಳಿ, ಯರಬಳ್ಳಿ ತಾಂಡಾ, ರಾಮಘಟ್ಟ ತಾಂಡಾ, ನಾರಾಯಣಪುರ, ಅರಸಾಪುರ ಸೇರಿ 41 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ.

ಪುಸ್ತಕಗಳ ಕೊರತೆ: 1ನೇ ತರಗತಿಗೆ ಇಂಗ್ಲಿಷ್, ಪರಿಸರ ಅಧ್ಯಯನ, 4 ಮತ್ತು 5ನೇ ತರಗತಿಗೆ ಪರಿಸರ ಅಧ್ಯಯನ, 9ರಲ್ಲಿ ಇಂಗ್ಲಿಷ್, ವಿಜ್ಞಾನಭಾಗ-2, 10ನೇ ತರಗತಿಗೆ ಇಂಗ್ಲಿಷ್, ಸಮಾಜವಿಜ್ಞಾನ ಭಾಗ-1 ಮತ್ತು ಭಾಗ-2 ಪುಸ್ತಕಗಳ ಕೊರತೆ ಇದ್ದು, ಪೂರೈಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಒಟ್ಟು 15,620 ಪುಸ್ತಕಗಳು ಸರಬರಾಜಾಗಿದ್ದು, 13,881 ಪುಸ್ತಕಗಳು ಬಾಕಿ ಉಳಿದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ ತಿಳಿಸಿದರು.

*
ಹರಪನಹಳ್ಳಿ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆಯುಕ್ತರ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ.
-ಎಸ್.ಎಂ. ವೀರಭದ್ರಯ್ಯ, ಬಿಇಒ ಹರಪನಹಳ್ಳಿ

*
ಮಾಚಿಹಳ್ಳಿ, ಬೈರಾಪುರ, ಗುರಶಾಂತನಹಳ್ಳಿ, ಕೊರಚರಹಟ್ಟಿ, ತಾಳೇದಹಳ್ಳಿ, ಅನಂತನಹಳ್ಳಿಯ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದು, ನೂರಾರು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಏಕ ಶಿಕ್ಷಕರಿರುವ ಶಾಲೆಗಳಿಗೆ ಸರ್ಕಾರ ತಕ್ಷಣವೇ ಶಿಕ್ಷಕರನ್ನು ನೇಮಿಸಬೇಕು.
-ಹನುಮಂತಪ್ಪ, ಮಾಚಿಹಳ್ಳಿ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು