ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಚುಗಾರನಹಳ್ಳಿ: ಕುಸಿಯುವ ಹಂತದಲ್ಲಿ ಸರ್ಕಾರಿ ಶಾಲೆ ಕಟ್ಟಡ

ಭೀತಿಯಲ್ಲೇ ಪಾಠ ಆಲಿಸುತ್ತಿರುವ ವಿದ್ಯಾರ್ಥಿಗಳು
Published 9 ಜನವರಿ 2024, 7:20 IST
Last Updated 9 ಜನವರಿ 2024, 7:20 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಕಂಚುಗಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಪ್ರಾಣ ಭೀತಿಯಲ್ಲಿ ಶಾಲೆಗೆ ಬರುತ್ತಿದ್ದಾರೆ.

ಕಟ್ಟಡ ಕುಸಿದಲ್ಲಿ ಭಾರೀ ಅನಾಹುತ ಸಂಭವಿಸಬಹುದೆಂಬ ದುಗುಡ ಗ್ರಾಮಸ್ಥರದ್ದಾಗಿದೆ.

ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಸಿದು ಬೀಳು ಸ್ಥಿತಿಯಲ್ಲಿರುವ ಆರ್.ಸಿ.ಸಿ.ಛಾವಣಿ
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಸಿದು ಬೀಳು ಸ್ಥಿತಿಯಲ್ಲಿರುವ ಆರ್.ಸಿ.ಸಿ.ಛಾವಣಿ

‘ಶಾಲೆಯಲ್ಲಿ ಏಳು ತರಗತಿಗಳು ನಡೆಯುತ್ತಿದ್ದು, 185 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಂದು ಆರ್‌.ಸಿ.ಸಿ. ಕಟ್ಟಡ ಸೇರಿದಂತೆ 6 ಕೊಠಡಿಗಳಿದ್ದು, ಯಾವುದೇ ಹಂತದಲ್ಲಿ ನೆಲಕಚ್ಚುವ ಸ್ಥಿತಿಯಲ್ಲಿವೆ. ಶಿಕ್ಷಣ ಇಲಾಖೆ ಉಪನಿರ್ದೇಶಕರು ಈ ಕಟ್ಟಡ ಶೈಕ್ಷಣಿಕ ಚಟುವಟಿಕೆಗೆ ಯೋಗ್ಯವಾಗಿಲ್ಲ. ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಿಬೇಕು ಎಂಬ ಆದೇಶ ನೀಡಿದ್ದಾರೆ. ಕಟ್ಟಡ ಕೆಡವಿದರೆ ಪಾಠ ಮಾಡಲು ಸ್ಥಳವಿಲ್ಲದೇ ಇದೇ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದೇವೆ‌’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಕೆ. ರವಿ ತಿಳಿಸಿದ್ದಾರೆ.

ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿರುವ ಕೊಠಡಿಗಳು
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿರುವ ಕೊಠಡಿಗಳು

‘ಇತ್ತೀಚೆಗಷ್ಟೇ ನಿರ್ಮಿಸಿದ ಆರ್‌ಸಿಸಿ ಕಟ್ಟಡವೂ ಕಳಪೆ ಕಾಮಗಾರಿಯಿಂದ ಕೂಡಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಈ ಬಗ್ಗೆ ಮಾಯಕೊಂಡ ಶಾಸಕರಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಶಾಲೆಯ ಈ ದುಃಸ್ಥಿತಿ ಕಂಡು ಅನೇಕ ಪಾಲಕರು ಮಕ್ಕಳನ್ನು ಸೇರಿಸದೇ ಇತರ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಶಾಲೆಯ ಪಕ್ಕದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯವಿದೆ. ಅಲ್ಲಿ ಪ್ರಾಥಮಿಕ ಶಾಲೆಯ 15 ವಿದ್ಯಾರ್ಥಿಗಳು ಇದ್ದಾರೆ. ಒಂದುವೇಳೆ ನಮ್ಮ ಶಾಲೆಯ ಕಟ್ಟಡ ಉತ್ತಮವಾಗಿದ್ದರೆ ಬೇರೆ ಗ್ರಾಮಗಳ ಬಡ ವಿದ್ಯಾರ್ಥಿಗಳೂ ಬಂದು ಕಲಿಯುತ್ತಿದ್ದರು ಎಂದು ಸಮಿತಿಯ ಉಪಾಧ್ಯಕ್ಷ ಸೈದೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆಗಳು ಬಿರುಕು ಬಿಟ್ಟಿರುವುದು
ಬಸವಾಪಟ್ಟಣ ಸಮೀಪದ ಕಂಚುಗಾರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆಗಳು ಬಿರುಕು ಬಿಟ್ಟಿರುವುದು

‘ಗ್ರಾಮದ ಹಿಂದುಳಿದ, ಪರಿಶಿಷ್ಠ ವರ್ಗ ಮತ್ತು ಪಂಗಡದ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪಾಲಕರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಮಕ್ಕಳನ್ನು ಬೇರೆ ಕಡೆ ಸೇರಿಸಿ ಶಿಕ್ಷಣ ಕೊಡಿಸಲು ಅಸಾಧ್ಯವಾಗಿದೆ. ಶಾಲೆಯ ಕಟ್ಟಡವನ್ನು 1960ರಲ್ಲಿ ನಿರ್ಮಿಸಲಾಗಿದ್ದು, ಮಂಗಳೂರು ಹೆಂಚಿನ ಛಾವಣಿ ಹೊಂದಿದೆ. ಸುಮಾರು 60 ವರ್ಷದ ಹಳೆಯ ಕಟ್ಟಡ ಇದಾಗಿದ್ದು, ಕೂಡಲೇ ಶಿಕ್ಷಣ ಇಲಾಖೆ  ಬದಲಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಕೆ.ಆರ್‌. ಭೋಗೇಶ್ವರಪ್ಪ ಒತ್ತಾಯಿಸಿದ್ದಾರೆ.

‘ಶಿಥಿಲ ಕಟ್ಟಡದ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಿದ್ದೇವೆ. ಜೊತೆಗೆ ಅಗತ್ಯ ಮೂಲ ಸೌಲಭ್ಯದ ಕೊರತೆಯೂ ಇದೆ. ಕಟ್ಟಡ ಸೇರಿದಂತೆ ಉತ್ತಮ ವಾತಾವರಣ ಇದ್ದರೆ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಮಕ್ಕಳೂ ಸಂತಸದಿಂದ ಶಾಲೆಗೆ ಬರುತ್ತಾರೆ. ಈ ವರ್ಷ ಮಳೆ ಕಡಿಮೆ ಇರುವುದರಿಂದ ಶಾಲೆ ಕಟ್ಟಡ ಕುಸಿದು ಬಿದ್ದಿಲ್ಲ. ಇಂತಹ ಶಿಥಿಲ ಕಟ್ಟಡದಲ್ಲಿಯೇ ಪಾಠ ಪ್ರವಚನ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಡಿ.ಕೆ.ರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT