ಭಾನುವಾರ, ಜನವರಿ 24, 2021
27 °C
ಬಿಜೆಪಿ ಜನಸೇವಕ ಸಮಾವೇಶದಲ್ಲಿ ಸಂಸದೆ ಶೋಭಾ ಕರಂದ್ಲಾಜೆ

ಕಾರ್ಯಕರ್ತರನ್ನು ಗೆಲ್ಲಿಸಿದ ಗ್ರಾ.ಪಂ. ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಹೀಗೆ ಪಕ್ಷದ ನಾಯಕರನ್ನು ಕಾರ್ಯಕರ್ತರು ಗೆಲ್ಲಿಸಿದ್ದರು. ಅಂಥ ಕಾರ್ಯಕರ್ತರನ್ನು ಗೆಲ್ಲಿಸುವ ಕೆಲಸವು ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ಆಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಲು ಬಿಜೆಪಿ ಹಮ್ಮಿಕೊಂಡಿದ್ದ ಜನಸೇವಕ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಹಳ್ಳಿಗಳಲ್ಲಿ ಕಾರ್ಯಕರ್ತರು ಗೆಲ್ಲುವ ಮೂಲಕ ಪಕ್ಷದ ಅಡಿಪಾಯ ಗಟ್ಟಿಗೊಳಿಸಿದ್ದಾರೆ. ಜಿಲ್ಲೆಯಲ್ಲಿ 2,750 ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 1,614 ಮಂದಿ ಬಿಜೆಪಿ ಕಾರ್ಯಕರ್ತರು ಎಂಬುದು ಹೆಮ್ಮೆಯ ವಿಚಾರ. ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದವರು ಒಂದಷ್ಟು ಮಂದಿ ಸದಸ್ಯರಾಗಿದ್ದಾರೆ. ಅವರೆಲ್ಲ ಬಿಜೆಪಿಗೆ ಬರಬೇಕು. ಆಗ ಅಭಿವೃದ್ಧಿ ಕಾರ್ಯಗಳು ಸುಲಭವಾಗುತ್ತದೆ. ಯಾಕೆಂದರೆ ಕೇಂದ್ರದಲ್ಲಿಯೂ ಬಿಜೆಪಿ, ರಾಜ್ಯದಲ್ಲಿಯೂ ಬಿಜೆಪಿ ಇದೆ ಎಂದು ವಿಶ್ಲೇಷಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗಿ ಬೇರೆ ‍ಪಕ್ಷಗಳಿಗೆ ಹೋಗಬೇಡಿ. ಪಕ್ಷ ನಿಷ್ಠೆ ಇದ್ದರೆ ರಾಜಕೀಯದಲ್ಲಿ ಬೆಳೆಯಲು ಸಾಧ್ಯ. ದಾವಣಗೆರೆಯನ್ನು ಕಾಂಗ್ರೆಸ್‌ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ‘ಸರ್ಕಾರಿ ಚೆಕ್‌ಗೆ ಸಹಿ ಮಾಡುವ ಅಧಿಕಾರ ಪ್ರಧಾನಿ, ಮುಖ್ಯಮಂತ್ರಿಯಿಂದ ಹಿಡಿದು ಯಾವ ಜನಪ್ರತಿನಿಧಿಗಳಿಗೂ ಇಲ್ಲ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇದೆ. ಸಹಿ ಹಾಕುವಾಗ ಜಾಗರೂಕರಾಗಿರಿ. ಅಧಿಕಾರಿಗಳು ನಿಮ್ಮನ್ನು ದಾರಿ ತಪ್ಪಿಸದಂತೆ ನೋಡಿಕೊಳ್ಳಿ’ ಎಂದು ಎಚ್ಚರಿಕೆ ನೀಡಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಬಿಸಲೇರಿ ನೀರು ಇಟ್ಟುಕೊಂಡು ವಿಧಾನಸೌಧದ ಎ.ಸಿ. ರೂಂನಲ್ಲಿ ಕುಳಿತುಕೊಂಡು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಸುಲಭ. ಆದರೆ ಸಮಸ್ಯೆಗಳ ಜತೆಗೆ ಬದುಕುವುದು ಕಷ್ಟ. ಗ್ರಾಮ ಪಂಚಾಯಿತಿಗಳೆಂದರೆ ಜನರಿಗೆ ಹತ್ತಿರವಾದ ಆಡಳಿತ ಕೇಂದ್ರ. ಜನರ ಸಮಸ್ಯೆಗಳನ್ನು ಹತ್ತಿರದಿಂದಲೇ ನೋಡುವುದರಿಂದ ಅವುಗಳನ್ನು ಪರಿಹರಿಸಲು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದವರು ಪ್ರಯತ್ನಿಸಬೇಕು. ಶೋಷಣೆ ರಹಿತ ಗ್ರಾಮಗಳು ನಿರ್ಮಾಣಗೊಂಡರೆ ಅದುವೇ ಸ್ವರಾಜ್ಯ’ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಅಡಿಪಾಯ ಗಟ್ಟಿ ಇದ್ದರೆ ಕಟ್ಟಡ ಗಟ್ಟಿಯಾಗಿರುತ್ತದೆ. ಹಳ್ಳಿಗಳಲ್ಲಿ ಕಾರ್ಯಕರ್ತರು ಗಟ್ಟಿಯಾಗಿದ್ದರೆ ಪಕ್ಷ ಗಟ್ಟಿಯಾಗುತ್ತದೆ. ಅದಕ್ಕಾಗಿ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುವ ವಿಭಿನ್ನ ಪಕ್ಷವಾಗಿ ಬಿಜೆಪಿ ಗುರುತಿಸಿಕೊಂಡಿದೆ.
ಮಧ್ಯಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯನ್ನು, ಕರ್ನಾಟಕದಲ್ಲಿ ಬಾಡಿಗೆ ಕಟ್ಟಲು ಪರದಾಡುವ ನಿಷ್ಠಾವಂತ ಕಾರ್ಯಕರ್ತರನ್ನು ರಾಜ್ಯಸಭೆಗೆ ಕಳುಹಿಸಿರುವುದೇ ಅದಕ್ಕೆ ಸಾಕ್ಷಿ. ಪಂಚಾಯಿತಿಗೆ ಆಯ್ಕೆಯಾದವರು ಪ್ರಾಮಾಣಿಕತೆ, ಶ್ರದ್ಧೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್‌ ಕಾರ್ಯಕ್ರಮ ನಿರೂಪಿಸಿದರು.

ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌.ವಿ. ರಾಮಚಂದ್ರಪ್ಪ, ಎಸ್.ಎ. ರವೀಂದ್ರನಾಥ್‌, ಪ್ರೊ. ಲಿಂಗಣ್ಣ, ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ಉಪಮೇಯರ್‌, ಸೌಮ್ಯಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಪಕ್ಷದ ಮುಖಂಡರಾದ ಡಾ.ಶಿವಯೋಗಿಸ್ವಾಮಿ, ಯಶವಂತರಾವ್‌ ಜಾಧವ್‌, ಅಣಬೇರು ಶಿವಮೂರ್ತಿ, ಸುರೇಶ್‌, ನಂದೀಶ್‌, ಜೀವನಮೂರ್ತಿ ಅವರೂ ಇದ್ದರು.

ಕಾಂಗ್ರೆಸ್‌ ಎಂಬ ಪಂಚರ್‌ ಆದ ಬಸ್‌
ಕಾಂಗ್ರೆಸ್‌ ಎಂಬ ಬಸ್‌ಗೆ ಸಿದ್ದರಾಮಯ್ಯ ಚಾಲಕ, ಡಿ.ಕೆ. ಶಿವಕುಮಾರ್‌ ಕಂಡಕ್ಟರ್‌ ಆಗಿದ್ದಾರೆ. ಕಂಡೆಕ್ಟರ್‌ ರೈಟ್‌ ಅಂದ್ರೆ ಬಸ್‌ ನಿಲ್ಲುತ್ತದೆ. ಬಸ್ ನಿಲ್ಲಿಸಲು ಸ್ಟಾಪ್‌ ಎಂದು ಹೇಳಿದರೆ ಬಸ್‌ ಓಡುತ್ತದೆ. ಹೀಗೆ ತಾಳಮೇಳ ಇಲ್ಲದ ಬಸ್‌ ಈಗ ಪಂಚರ್‌ ಆಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸುವರ್ಣ ಗ್ರಾಮ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯಡಿ ಆಯ್ಕೆಯಾದ ಗ್ರಾಮಕ್ಕೆ ₹ 1 ಕೋಟಿ ಅನುದಾನ ನೀಡಲಾಗುತ್ತಿತ್ತು. ಬಳಿಕ ಬಂದ ಕಾಂಗ್ರೆಸ್‌ ಈ ಯೋಜನೆಯನ್ನೇ ರದ್ದುಪಡಿಸಿತು. ಗ್ರಾಮ ವಿಕಾಸ ಎಂಬ ಯೋಜನೆಯನ್ನು ಜಾರಿಗೆ ತಂದಿತ್ತಾದರೂ ಯಾವ ಗ್ರಾಮವೂ ವಿಕಾಸಗೊಳ್ಳಲಿಲ್ಲ. ಹಾಗಾಗಿ ಸುವರ್ಣ ಗ್ರಾಮ ಯೋಜನೆಯನ್ನು ಮತ್ತೆ ಜಾರಿಗೆ ತರಲು ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು