ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ಒನ್‌’ ದೇಶಕ್ಕೆ ಮಾದರಿಯಾಗಲಿ: ಸಚಿವ ಎಸ್‌. ಸುರೇಶ್‌ ಕುಮಾರ್‌

ಮಾಳಗೊಂಡನಹಳ್ಳಿಯಲ್ಲಿ ಕೇಂದ್ರಕ್ಕೆ ಚಾಲನೆ ನೀಡಿದ ಸಕಾಲ ಸಚಿವ ಎಸ್‌. ಸುರೇಶ್‌ ಕುಮಾರ್‌
Last Updated 20 ನವೆಂಬರ್ 2020, 1:41 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಜನರ ಹಕ್ಕು. ಈ ಹಕ್ಕು ಪಡೆಯಲು ಅಲೆದಾಡಬಾರದು. ಅದಕ್ಕಾಗಿ ‘ಗ್ರಾಮ ವನ್‌’ ಯೋಜನೆ ಜಾರಿಗೆ ತಂದಿದ್ದೇವೆ. ಹಲವು ಸವಾಲುಗಳು ಇಲ್ಲಿ ಎದುರಾಗಬಹುದು. ಅವಲ್ಲವನ್ನು ನಿವಾರಿಸಿಕೊಂಡು ದೇಶಕ್ಕೇ ಮಾದರಿಯಾಗವಂತೆ ಕಾರ್ಯನಿರ್ವಹಿಸಬೇಕು ಎಂದು ಶಿಕ್ಷಣ ಮತ್ತು ಸಕಾಲ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

ಪ್ರಾಯೋಗಿಕ ಹಂತವಾಗಿ ದಾವಣಗೆರೆ ಜಿಲ್ಲೆಯ 100 ಗ್ರಾಮಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿರುವ ಗ್ರಾಮ ಒನ್‌ ಯೋಜನೆಯನ್ನು ವರ್ಚುವಲ್‌ ಮೀಡಿಯಾ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರೆ, ಮಾಳಗೊಂಡನಹಳ್ಳಿ (ಮಾಗನಹಳ್ಳಿ) ಗ್ರಾಮದಲ್ಲಿ ಸುರೇಶ್‌ ಕುಮಾರ್‌ ಚಾಲನೆ ನೀಡಿ ಮಾತನಾಡಿದರು. ಗ್ರಾಮ ಒನ್‌ ಕೇಂದ್ರವನ್ನು ರೈತಮಹಿಳೆ ಶಾಂತಮ್ಮ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಸದ್ಯಕ್ಕೆ 5000ಕ್ಕಿಂತ ಅಧಿಕ ಜನಸಂಖ್ಯೆ ಇರುವ 100 ಗ್ರಾಮಗಳನ್ನು ಆಯ್ಕೆ ಮಾಡಿ ಗ್ರಾಮ ಒನ್‌ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇಂಟರ್‌ನೆಟ್‌ ಮುಂತಾದ ಸಮಸ್ಯೆಗಳು ಆರಂಭದಲ್ಲಿ ಎದುರಾಗಬಹುದು. ಯಾವುದೇ ಸಮಸ್ಯೆಗಳು ಬಂದರೂ ಅದನ್ನು ಸರಿಪಡಿಸಿಕೊಂಡು ಹೋಗುವ ಜವಾಬ್ದಾರಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕೈಯಲ್ಲಿದೆ. ಇದನ್ನು ರಾಜ್ಯದಲ್ಲಿ ಯಶಸ್ವಿಗೊಳಿಸುವ ಹೊಣೆ ನಿಮ್ಮದು ಎಂದು ತಿಳಿಸಿದರು.

2012ರಲ್ಲಿ ಸಕಾಲವನ್ನು ಆರಂಭಿಸಿದಾಗ 151 ಸೇವೆಗಳು ಮಾತ್ರ ಅದರ ವ್ಯಾಪ್ತಿಗೆ ಬರುತ್ತಿದ್ದವು. ಈಗ 1050ಕ್ಕೂ ಅಧಿಕ ಸೇವೆಗಳು ಸಕಾಲದ ಅಡಿಯಲ್ಲಿ ಬರುತ್ತಿವೆ. ಸೇವಾಸಿಂಧು ಅಡಿಯಲ್ಲಿ 750 ಸೌಲಭ್ಯಗಳಿಗೆ ಅರ್ಜಿ ಸ್ವೀಕರಿಸುವ ಕೆಲಸಗಳು ನಡೆಯುತ್ತಿವೆ. ಸೇವಾಸಿಂಧು ಪವರ್‌ ಸೆಂಟರ್‌ ಆದರೆ ಗ್ರಾಮವನ್‌ ಡಿಸ್ಟ್ರೀಬ್ಯೂಷನ್‌ ಸೆಂಟರ್‌ ಆಗಲಿದೆ. ಇಲ್ಲಿ ಅರ್ಜಿ ವಿಲೇವಾರಿಯಾಗಿ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸಗಳಾಗಲಿವೆ. ನಗರಪ್ರದೇಶದಲ್ಲಿ ಜನಸೇವಕ ಮೂಲಕ ಸೇವೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ, ‘ಸರ್ಕಾರದ ಹಲವಾರು ಸೇವೆಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು. ಹಿರಿಯ ನಾಗರಿಕರು ತಮ್ಮ ಮನೆಬಾಗಿಲಲ್ಲಿ ಸೇವೆ ಪಡೆಯಬಹುದು. ಜನರ ಮನೆ ಬಾಗಿಲಿಗೆ ಅಧಿಕಾರಿಗಳೇ ಬರುವ ಈ ಯೋಜನೆ ಮಹತ್ವದ್ದಾಗಿದೆ. ಜನರು ಕೂಡ ಅಷ್ಟೇ ಇನ್ನು ಎಲ್ಲದಕ್ಕೂ ದಾವಣಗೆರೆಗೆ ಹೋಗುವ ಬದಲು ಇಲ್ಲೇ ಮುಗಿಯಬಹುದಾದ ಕೆಲಸಗಳನ್ನು ಇಲ್ಲೇ ಮಾಡುವ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ ರವೀಂದ್ರನಾಥ್, ‘ಇಂತಹ ಒಂದು ಅಭೂತಪೂರ್ವ ಕಾರ್ಯಕ್ರಮಕ್ಕೆ ನನ್ನ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿರುವುದು ಹೆಮ್ಮೆ ಉಂಟು ಮಾಡಿದೆ. ರಾಜ್ಯದಲ್ಲಿಯೇ ಮೊದಲ ಗ್ರಾಮ ಒನ್‌ ನಮ್ಮದಾಗಿದೆ. ಇದು ಸ್ವಲ್ಪ ಬೇಗನೇ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದೆವು. ಕೊರೊನಾ ಕಾರಣದಿಂದ ಸ್ವಲ್ಪ ಮುಂದಕ್ಕೆ ಹೋಯಿತು’ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮಾಯಕೊಂಡ ಶಾಸಕ ಪ್ರೊ.ಎನ್‌. ಲಿಂಗಣ್ಣ, ಮಾಗನೂರಿನಲ್ಲಿ ಜಗಳೂರು ಶಾಸಕ ಎಸ್.ವಿ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಒಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ತಹಶೀಲ್ದಾರ್‌ ಗಿರೀಶ್‌ ಉಪಸ್ಥಿತರಿದ್ದರು. ಉಪನ್ಯಾಸಕಿ ಶೋಭಾ ಚಪ್ಪರದಹಳ್ಳೀಮಠ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT