ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಬೆನ್ನೂರು | ಬೆಲೆ ಕುಸಿತ: ಈಗ ಬೂದುಗುಂಬಳ ಸರದಿ

Published 23 ನವೆಂಬರ್ 2023, 6:14 IST
Last Updated 23 ನವೆಂಬರ್ 2023, 6:14 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಬೂದುಗುಂಬಳ ಬೆಳೆದು, ಉತ್ತಮ ದರದ ನಿರೀಕ್ಷೆಯಲ್ಲಿದ್ದ ಇಲ್ಲಿನ ರೈತರಿಗೆ ಬೆಲೆ ಕುಸಿತ ಭಾರಿ ಆಘಾತ ನೀಡಿದೆ. ಬರಗಾಲದಿಂದ ತತ್ತರಿಸಿರುವ ರೈತರಿಗೆ ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಕೊಯ್ಲು ಮಾಡಿ ಇನ್ನೇನು ಮಾರಾಟಕ್ಕೆ ಸಿದ್ಧ‍ಪಡಿಸಬೇಕು ಎನ್ನುವಾಗ ಬೆಲೆ ಕುಸಿದಿದೆ. ಇದರಿಂದ ಬೇಸತ್ತಿರುವ ರೈತರು ಹೊಲದಲ್ಲಿಯೇ ಫಸಲು ನಾಶ ಮಾಡಲು ಮುಂದಾಗಿದ್ದಾರೆ.

ಸಮೀಪದ ಭೀಮನೆರೆಯ ರೈತ ಮಂಜುನಾಥ್ ಕರಮಡಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೂದುಗುಂಬಳ ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೂದುಗುಂಬಳಕ್ಕೆ ಈಗ ಕೇವಲ ₹ 1 ದರ ದೊರೆಯುತ್ತಿದೆ. ಕೊಯ್ಲಿಗೆ ನೀಡುವ ಕೂಲಿ ಹಾಗೂ ಸಾಗಣೆ ವೆಚ್ಚವನ್ನೂ ಭರಿಸಲು ಅಸಾಧ್ಯ ಎಂಬುದನ್ನು ಅರಿತ ಅವರು ಕೊಯ್ಲು ಮಾಡದೇ ಕೈಚೆಲ್ಲಿದ್ದಾರೆ.

‘ಕಳೆದ ಬಾರಿ ಪ್ರತಿ ಕೆ.ಜಿ.ಗೆ ₹ 10 ರಂತೆ ಧಾರಣೆ ಸಿಕ್ಕಿತ್ತು. ಪ್ರತಿ ಕೆ.ಜಿ.ಗೆ ಕನಿಷ್ಠ ₹ 6 ಸಿಕ್ಕರೂ ಲಾಭ ಕಾಣಬಹುದು. ಎರಡು ಎಕರೆಗೆ ₹ 60,000 ಖರ್ಚು ತಗುಲಿದೆ. 3 ತಿಂಗಳಿನಿಂದ ಬೆಳೆ ಪೋಷಿಸಲು ಮಾಡಿದ ಶ್ರಮ ವ್ಯರ್ಥವಾಗಿದೆ. ಪ್ರತಿ ಎಕರೆಗೆ ಕನಿಷ್ಠ 20 ಟನ್ ಇಳುವರಿ ನಿರೀಕ್ಷೆ ಇತ್ತು. ಆದರೆ, ದರ ಕುಸಿತದಿಂದ ಬೇರೇನೂ ತೋಚುತ್ತಿಲ್ಲ. ಗ್ರಾಮದ ಕೆಲವರು ಬೂದುಗುಂಬಳ ಕಿತ್ತು ಜಾನುವಾರುಗಳ ಮೇವಿಗೆ ಕೊಯ್ದುಕೊಂಡು ಹೋಗಿದ್ದಾರೆ. ಹೊಲ ಉಳುಮೆ ಮಾಡಿ ಬೆಳೆ ನಾಶ ಮಾಡಲು ನಿರ್ಧರಿಸಿದ್ದೇನೆ’ ಎಂದು ಮಂಜುನಾಥ್ ಅವರು ಬೇಸರದಿಂದ ಹೇಳಿದರು.

ಗ್ರಾಮದಲ್ಲಿ ಮಂಜುನಾಥ್ ಅವರೊಬ್ಬರೇ ಬೂದುಗುಂಬಳ ಬೆಳೆದಿದ್ದರು. ಬೆಳೆ ವೈವಿಧ್ಯತೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ನಾಟಿ ಮಾಡಿದ್ದರು. ಮಾರುಕಟ್ಟೆಯಲ್ಲಿ ಸ್ಥಿರತೆ ಇಲ್ಲದ ಕಾರಣ, ರೈತರು ಬೆಳೆದ ಬೆಳೆಗೆ ತಕ್ಕ ದರ ಸಿಗುವ ಭರವಸೆಯೇ ಇಲ್ಲದಂತಾಗಿದೆ. ಕೈಗಾರಿಕಾ ಉತ್ಪನ್ನಗಳಂತೆ ರೈತರ ಬೆಳೆಗೂ ನಿಗದಿತ ದರ ಸಿಗುವ ವ್ಯವಸ್ಥೆ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದು ಗ್ರಾಮಸ್ಥ ವೆಂಕಟೇಶ್  ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT