ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲಗಳಲ್ಲಿ ಸಮೃದ್ಧಿ: ಅಂತರ್ಜಲ ವೃದ್ಧಿ

ಕೊಳವೆ ಬಾವಿಗಳಲ್ಲಿ ಉಕ್ಕಿ ಹರಿಯುತ್ತಿರುವ ನೀರು
Last Updated 8 ಸೆಪ್ಟೆಂಬರ್ 2022, 5:15 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನಾದ್ಯಂತ 4 ವರ್ಷಗಳಿಂದ ಉತ್ತಮವಾಗಿ ಮುಂಗಾರು ಹಾಗೂ ಹಿಂಗಾರು ಮಳೆ ಬೀಳುತ್ತಿರುವ ಕಾರಣ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.

ತಾಲ್ಲೂಕಿನಲ್ಲಿ 6 ಹೋಬಳಿಗಳಿದ್ದು, ಅದರಲ್ಲಿ ಸಂತೇಬೆನ್ನೂರು 1 ಮತ್ತು 2, ಕಸಬಾ ಹಾಗೂ ಬಸವಾಪಟ್ಟಣ ಹೋಬಳಿಗಳು 4 ವರ್ಷಗಳ ಹಿಂದೆ ನೀರಿನ ಬರ ಎದುರಿಸಿದ್ದವು. 4 ವರ್ಷಗಳ ಹಿಂದೆ ಈ ಹೋಬಳಿಗಳ ರೈತರು ಫಲಕ್ಕೆ ಬಂದಿರುವ ಅಡಿಕೆ ತೋಟಗಳನ್ನು ಟ್ಯಾಂಕರ್‌ ನೀರು ಹಾಯಿಸಿ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತೋಟಗಳಿಗೆ ನೀರು ಹಾಯಿಸಿಕೊಳ್ಳಲು 4 ವರ್ಷಗಳ ಹಿಂದೆ ವರ್ಷದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಆಗ ಈ ಹೋಬಳಿಗಳಲ್ಲಿ 800ರಿಂದ 1000 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ 1 ಇಂಚು ನೀರು ಲಭ್ಯವಾಗುತ್ತಿರಲಿಲ್ಲ.

2018ರಲ್ಲಿ ತಾಲ್ಲೂಕಿನಾದ್ಯಂತ ರೈತರು 5000ಕ್ಕಿಂತ ಹೆಚ್ಚು ಕೊಳವೆಬಾವಿ ಕೊರೆಯಿಸಲು ಕೋಟ್ಯಂತರ ರೂಪಾಯಿ ವ್ಯಯಿಸಿದ್ದರು. 2019ನೇ ಸಾಲಿನಿಂದ 2022ನೇ ಸಾಲಿನವರೆಗೆ ತಾಲ್ಲೂಕಿನಲ್ಲಿ ಪ್ರತಿ ವರ್ಷ ಉತ್ತಮವಾಗಿ ಮಳೆಯಾಗುತ್ತಿರುವ ಪರಿಣಾಮವಾಗಿ ಕೆರೆಕಟ್ಟೆ ಹಾಗೂ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೊಳವೆಬಾವಿಗಳಲ್ಲಿ ನೀರು ಸರಾಗವಾಗಿ ಬರುತ್ತಿದೆ.

ಈ ಸಾಲಿನಲ್ಲಿ ತಾಲ್ಲೂಕಿನಾದ್ಯಂತ ಕೇವಲ 100 ಕೊಳವೆಬಾವಿ ಕೊರೆಯಿಸಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಳದಿಂದಾಗಿ ಕೇವಲ 100ರಿಂದ 200 ಅಡಿ ಕೊಳವೆಬಾವಿ ಕೊರೆಯಿಸಿದರೂ 3ರಿಂದ 4 ಇಂಚು ನೀರು ಲಭ್ಯವಾಗುತ್ತಿದೆ.

ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ರೈತ ಚಂದ್ರಶೇಖರ್ ಅವರ ತೋಟದಲ್ಲಿ 6 ತಿಂಗಳಿಂದ ಪಂಪ್‌ಸೆಟ್‌ ನೆರವಿಲ್ಲದೆಯೇ ಕೊಳವೆಬಾವಿಯಲ್ಲಿ ನಿರಂತರವಾಗಿ ನೀರು ಉಕ್ಕಿ ಹರಿಯುತ್ತಿದೆ. ಕೊಳವೆಬಾವಿ ಸುತ್ತ ಸಿಮೆಂಟ್‌ನಿಂದ ಕಟ್ಟೆ ಕಟ್ಟಿದ್ದರೂ ನೀರು ಹೊರಹೊಮ್ಮುವುದು ನಿಂತಿಲ್ಲ. ಹೀಗಾಗಿ ಪ್ರಸ್ತುತ ತಾಲ್ಲೂಕಿನ ಎಲ್ಲ ಹೋಬಳಿಗಳ ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆ ಮಾಡುವಂತಾಗಿದೆ. ಹೀಗೆಯೇ ಹಲವಾರು ಗ್ರಾಮಗಳಲ್ಲಿ ಕೊಳವೆಬಾವಿಗಳ ಮೂಲಕ ನೀರು ಉಕ್ಕಿ ಹರಿಯುತ್ತಿರುವುದು ಕಂಡುಬಂದಿದೆ.

‘ನಮ್ಮ ತೋಟದಲ್ಲಿ 4 ಕೊಳವೆಬಾವಿಗಳಿವೆ. ಎಲ್ಲದರಲ್ಲಿ ಗಣನೀಯ ಪ್ರಮಾಣದಲ್ಲಿ ಅಂದರೆ, ಕೇವಲ 20 ಅಡಿ ಉದ್ದದ 4 ಪೈಪ್‌ಗಳನ್ನು ಬಿಟ್ಟರೆ ಸಾಕು, ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. 1 ಕೊಳವೆಬಾವಿಯಲ್ಲಿ 6 ತಿಂಗಳಿಂದ ನಿರಂತರವಾಗಿ ನೀರು ಉಕ್ಕಿ ಹೊರ ಹರಿಯುತ್ತಿದೆ. 4 ವರ್ಷಗಳಿಂದ ರೈತರು ನೆಮ್ಮದಿಯಿಂದ ಜೀವನ ಮಾಡುವಂತಾಗಿದೆ. ಇನ್ನು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಆರಂಭವಾದರೆ ಸಂತೇಬೆನ್ನೂರು ಹಾಗೂ ಕಸಬಾ ಹೋಬಳಿಗಳ ರೈತರ ಬದುಕು ಇನ್ನಷ್ಟು ಹಸನಾಗಲಿದೆ’ ಎನ್ನುತ್ತಾರೆ ಲಿಂಗದಹಳ್ಳಿ ಗ್ರಾಮದ ರೈತರಾದ ಚಂದ್ರಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT