ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕ್ರಿಯೆಯಲ್ಲೇ ಉಳಿದ ‘ವರಾಹ’ಶಾಲೆ, ಗೋಶಾಲೆ ಯೋಜನೆ

ಹೆಚ್ಚುತ್ತಿರುವ ಹಂದಿ, ಬೀದಿ ನಾಯಿ, ಬೀಡಾಡಿ ದನಗಳ ಹಾವಳಿಗೆ ಬೇಕಿದೆ ಕಡಿವಾಣ
Last Updated 25 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ: ಸ್ಮಾರ್ಟ್‌ ಸಿಟಿ ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್‌. ಇನ್ನೂ ನಗರದಲ್ಲಿ ಸ್ವಚ್ಛತೆ ಇಲ್ಲ. ನಗರದ ಸೌಂದರ್ಯೀಕರಣ ಕೇವಲ ಮಾತಿನಲ್ಲೇ ಉಳಿದಿದೆ. ನಗರದ ಪ್ರಮುಖ ಸಮಸ್ಯೆಯಾಗಿರುವ ಹಂದಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಸ್ತಾವ ಸಭೆಗಳಲ್ಲಿ ಮಾತ್ರ ಕೇಳಿಬರುತ್ತಿದೆ.

ಬೀದಿ ನಾಯಿಗಳು, ಬೀಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕುವ ಕೆಲಸ ನಡೆದಿಲ್ಲ. ಹಂದಿ, ನಾಯಿಗಳ ದಾಳಿ, ಬೀಡಾಡಿ ದನಗಳಿಂದ ಸಮಸ್ಯೆಯಾದಾಗ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳುತ್ತಾರೆ. ಬಳಿಕ ಅದನ್ನು ಮರೆಯುತ್ತಾರೆ ಎಂಬುದು ಜನರ ಆರೋಪ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಈ ಸಮಸ್ಯೆ ಇದೆ. ಆದರೆ, ವರ್ಷಗಳೇ ಕಳೆದರೂ ಇದಕ್ಕೆ ಪರಿಹಾರ ಸಿಗದಿರುವುದು ದುರಂತ.

ಹಂದಿಗಳ ಸ್ಥಳಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಅದಕ್ಕೆ ಮುಕ್ತಿ ಸಿಗುವುದು ಯಾವಾಗ ಎಂಬುದು ನಗರದ ನಿವಾಸಿಗಳ ಪ್ರಶ್ನೆ.

ಈಚೆಗೆ ನಗರದಲ್ಲಿ ಬಾಲಕಿಯೊಬ್ಬಳ ಮೇಲೆ ಹಂದಿ ದಾಳಿ ನಡೆಸಿ, ಗಾಯಗೊಳಿಸಿತ್ತು. ಹಂದಿಗಳು, ಬೀದಿ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ನಗರ ಹಾಗೂ ಜಿಲ್ಲೆಯಲ್ಲಿ ಆಗಾಗ ವರದಿಯಾಗುತ್ತಲೇ ಇದೆ. ಬೀದಿ ನಾಯಿಗಳು ಬೈಕ್ ಸವಾರರನ್ನು ಬೆನ್ನಟ್ಟಿ ಬರುತ್ತವೆ. ಹಲವು ಬಾರಿ ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಬೀಡಾಡಿ ದನಗಳಿಂದ ವಾಹನ ಸವಾರರು ಸಂಚರಿಸುವುದು ಸಮಸ್ಯೆಯಾಗಿದೆ.

ನಗರದ ನಿಟುವಳ್ಳಿ, ನಿಟುವಳ್ಳಿ ಹೊಸ ಬಡಾವಣೆ, ಗುಂಡಿ ಛತ್ರ, ಡಾಂಗೆ ಪಾರ್ಕ್‌, ಕೆ.ಟಿ.ಜೆ ನಗರ, ಚಿಕ್ಕಮ್ಮಣ್ಣಿ ದೇವರಾಜ ಅರಸ್‌ ಬಡಾವಣೆ, ಸರಸ್ವತಿ ನಗರ, ಹಳೆ ದಾವಣಗೆರೆ ಭಾಗಗಳಾದ ಆಜಾದ್‌ ನಗರ, ಬಾಷಾ ನಗರ, ಗಾಂಧಿನಗರ ಸೇರಿ ಹಲವೆಡೆ ಬೀದಿ ನಾಯಿಗಳು ಹಾಗೂ ಹಂದಿಗಳ ಹಾವಳಿ ಹೆಚ್ಚಿದೆ. ಪಿ.ಬಿ.ರಸ್ತೆ, ಜಯದೇವ ವೃತ್ತ ಸೇರಿ ಹಲವೆಡೆ ಬಿಡಾಡಿ ದನಗಳ ಕಾಟ ವಿಪರೀತವಾಗಿದೆ.

ಗುಂಡಿ ವೃತ್ತ, ಡಾಂಗೆ ಪಾರ್ಕ್‌, ಶಾಮನೂರು ರಸ್ತೆ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಇದಕ್ಕೆ ಅಲ್ಲಿನ ಬೀದಿಬದಿ ವ್ಯಾಪಾರಿಗಳು ಮಾಂಸದ ಚೂರು ಹಾಗೂ ಕಸವನ್ನು ಅಲ್ಲೇ ಹಾಕುವ ಕಾರಣ ರಾತ್ರಿಯಿಡಿ ನಾಯಿಗಳ ಹಾವಳಿ ಹೆಚ್ಚಿರುತ್ತದೆ. ಅಲ್ಲಿ ಓಡಾಡುವುದೇ ದುಸ್ತರವಾಗಿದೆ ಎಂಬುದು ಸ್ಥಳೀಯರ ಆರೋಪ.

‘ಇಲ್ಲಿ ಮಾಂಸದ ಅಂಗಡಿಗಳ ವ್ಯಾಪಾರಿಗಳು ತ್ಯಾಜ್ಯವನ್ನು ಇಲ್ಲೇ ಹಾಕುತ್ತಾರೆ. ಬೀದಿ ಬದಿ ವ್ಯಾಪಾರಿಗಳು ಅಳಿದುಳಿದ ಮಾಂಸದ ಪದಾರ್ಥಗಳನ್ನು ಹಾಕುತ್ತಾರೆ. ಇದರಿಂದ ನಾಯಿಗಳು, ಹಂದಿಗಳ ಕಾಟ ವಿಪರೀತವಾಗಿದೆ. ರಾತ್ರಿ ಹೊತ್ತು ನಾಯಿಗಳು ಸ್ಥಳೀಯರನ್ನೇ ಕಚ್ಚಲು ಬರುತ್ತವೆ’ ಎಂದು ಆರೋಪಿಸುತ್ತಾರೆ ಕೆ.ಟಿ.ಜೆ. ನಗರದ ನಿವಾಸಿ ಕರಿಬಸಪ್ಪ.

‘ಹಂದಿಗಳ ಹಾವಳಿಯಿಂದ ಚಿಕ್ಕಮಕ್ಕಳು ಓಡಾಡದಂತಾಗಿದೆ. ಈಚೆಗೆ ಬಾಲಕನೊಬ್ಬನನ್ನು ಹಂದಿ ಅಟ್ಟಾಡಿಸಿಕೊಂಡು ಬಂದಿತ್ತು. ಅಲ್ಲಿದ್ದವರು ನೋಡಿ ಹಂದಿಯನ್ನು ಓಡಿಸಬೇಕಾಯಿತು. ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವ ಕಾರಣ ಬೈಕ್‌ ಸವಾರರು ಓಡಾಡಲು ಭಯಪಡುವಂತಾಗಿದೆ’ ಎಂದು ಹೇಳಿದರು ಸರಸ್ವತಿ ನಗರದ ಪ್ರವೀಣ್‌ ನಾಯಕ್.

‘ಬೀದಿ ನಾಯಿಗಳು ಹಂದಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಹಂದಿಗಳನ್ನು ಕಚ್ಚಿ ಸಾಯಿಸುವ ನಾಯಿಗಳು ಮನೆ ಎದುರು ತಂದುಹಾಕುತ್ತವೆ. ಸತ್ತ ಹಂದಿಗಳನ್ನು ತೆಗೆಯಲು ಪಾಲಿಕೆ ಸಿಬ್ಬಂದಿ ಮೀನಮೇಷ ಎಣಿಸುತ್ತಾರೆ. ನಿವಾಸಿಗಳು ದುರ್ವಾಸನೆ ಸಹಿಸಿಕೊಂಡು ಇರಬೇಕಾಗಿದೆ’ ಎಂದು ದೂರುತ್ತಾರೆ ವಿನೋಬನಗರದ ಗಿರೀಶ್‌.

ಸ್ಥಳಾಂತರ ಪ್ರಕ್ರಿಯೆ ಪ್ರಗತಿಯಲ್ಲಿ: ಹಂದಿಗಳ ಸ್ಥಳಾಂತರಕ್ಕೆ ದಾವಣಗೆರೆ ತಾಲ್ಲೂಕಿನ ಹೆಬ್ಬಾಳಿನಲ್ಲಿ 7 ಎಕರೆ ಜಾಗ ಗುರುತಿಸಲಾಗಿದೆ.ಅಲ್ಲಿ ಹಂದಿಗಳನ್ನು ಸ್ಥಳಾಂತರ ಮಾಡಿ ಶೆಡ್, ಕಾಂಪೌಂಡ್ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಬೀಡಾಡಿ ದನಗಳ ಹಾವಳಿ ತಡೆಗೆ ಬಾತಿ ಬಳಿ ಗೋಶಾಲೆ ನಿರ್ಮಿಸಲಾಗುವುದು ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದರು.

‘ವರಾಹ ಶಾಲೆ’ ನಿರ್ಮಾಣ

‘ಹಲವು ವರ್ಷಗಳಿಂದ ನಗರದಲ್ಲಿ ಹಂದಿಗಳ ಹಾವಳಿ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ‘ವರಾಹ ಶಾಲೆ’ ನಿರ್ಮಿಸಲಾಗುವುದು. ಪಾಲಿಕೆಯ ಅನುದಾನದಲ್ಲೇ ₹ 15 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಕಾಂಪೌಂಡ್‌ ಹಾಕಿ ಅಲ್ಲಿ ಹಂದಿಗಳನ್ನು ಬಿಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ, ಹಂದಿ ಮಾಲೀಕರು ಅಲ್ಲಿಗೆ ಹೋಗಲು ರಸ್ತೆ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದುಮೇಯರ್ ಎಸ್‌.ಟಿ. ವೀರೇಶ್ ಹೇಳಿದರು.

ಬೀಡಾಡಿ ದನಗಳ ಹಾವಳಿ ತಡೆಗೆ ಗೋಶಾಲೆ ನಿರ್ಮಿಸಲಾಗುವುದು. ಹೆಬ್ಬಾಳು ಬಳಿ ಮೊದಲು ಜಾಗ ಗುರುತಿಸಲಾಗಿತ್ತು. ಆದರೆ ಅಲ್ಲಿ ಮೇವು ಕೊರತೆಯಾಗುವ ಕಾರಣ ಬಾತಿ ಬಳಿ ಜಾಗ ಗುರುತಿಸಲಾಗಿದೆ. ಬಾತಿ ಬಳಿ ರೈತರ ಜಮೀನು ಇರುವ ಕಾರಣ ಮೇವಿನ ಸಮಸ್ಯೆಯಾಗುವುದಿಲ್ಲ. ಜಾಗ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಗೋಶಾಲೆ ನಿರ್ಮಿಸಲಾಗುವುದು. ಮೇವು, ನೀರಿನ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಅದಕ್ಕೆ ₹ 20 ಲಕ್ಷ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ಪುನರ್ವಸತಿ ಕಲ್ಪಿಸಿ:

ನಗರದಲ್ಲಿನ ಹಂದಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಹೆಬ್ಬಾಳು ಬಳಿ ಸ್ಥಳಾಂತರಕ್ಕೆ ಜಾಗ ಗುರುತಿಸಿರುವುದು ಒಳ್ಳೆಯ ಬೆಳವಣಿಗೆ. ಅದರ ಜತೆಗೆ ಹಂದಿ ಮಾಲೀಕರಿಗೆ ಪುನರ್ವಸತಿ ಕಲ್ಪಿಸಬೇಕು. ಪುನರ್ವಸತಿ ಕೇಂದ್ರ ತೆರೆದು ಅವರಿಗೆ ಅಲ್ಲಿ ಉದ್ಯೋಗ ನೀಡಬೇಕು. ಅವರ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸುತ್ತಾರೆ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಆವರಗೆರೆ ವಾಸು.

ಬೀದಿ ನಾಯಿಗಳು, ಬೀಡಾಡಿ ದನಗಳ ಹಾವಳಿಯೂ ಹೆಚ್ಚಾಗಿದೆ. ಬೀಡಾಡಿ ದನಗಳು ಸತ್ತರೆ ಗಮನಹರಿಸುವುದಿಲ್ಲ. ಹೋಬಳಿಗೊಂದು ಗೋಶಾಲೆ ನಿರ್ಮಿಸಬೇಕು. ಜಿಲ್ಲೆಯ ಹಲವು ಗೋಶಾಲೆಗಳಲ್ಲಿ ಮೇವು ಸೇರಿ ಅಗತ್ಯ ಸೌಲಭ್ಯ ಇಲ್ಲ. ಈ ಬಗ್ಗೆಯೂ ಸರ್ಕಾರ ಯೋಜನೆ ರೂಪಿಸಬೇಕು. ಕಾಟಾಚಾರಕ್ಕೆ ಗೋಶಾಲೆ ನಿರ್ಮಿಸಬಾರದು ಎಂದು ಒತ್ತಾಯಿಸುತ್ತಾರೆ ಅವರು.

ಸೌಲಭ್ಯ ನೀಡಿ: ‘ಹಂದಿಗಳನ್ನು ಸ್ಥಳಾಂತರಿಸಿದರೆ ಅಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅವುಗಳಿಗೆ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನಮಗೆ ಅಲ್ಲಿಗೆ ಹೋಗಿ ಬರುವ ವ್ಯವಸ್ಥೆ ಇರಬೇಕು. ಉದ್ಯೋಗ, ಪುನರ್ವಸತಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಹಂದಿ ಮಾಲೀಕ ದುರುಗಪ್ಪ.

‘ಶೀಘ್ರ ಪೂರ್ಣಗೊಳಿಸಲಿ’

ಹಂದಿ ಸ್ಥಳಾಂತರಕ್ಕೆ ಆಲೂರಹಟ್ಟಿ, ಬಾತಿ ಸೇರಿ ಸೇರಿ ಹಲವೆಡೆ ಜಾಗ ಗುರುತಿಸಲಾಗಿತ್ತು. ಪಾಲಿಕೆಯಿಂದ ‘ವರಾಹಶಾಲೆ’ ನಿರ್ಮಿಸಲು ಕ್ರಮ ಕೈಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಪಾಲಿಕೆ ವ್ಯಾಪ್ತಿಯ ಸಮೀಪದ ಸ್ಥಳ ಗುರುತಿಸಿದರೆ ಯೋಜನೆಯಲ್ಲಿ ಇನ್ನೂ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲು ಸಾಧ್ಯ.ಪಾಲಿಕೆಯಿಂದ ಸಂಗ್ರಹಿಸುವ ಕಸವನ್ನು ಅಲ್ಲಿಗೆ ರವಾನಿಸಬೇಕು. ಇದರಿಂದ ಹಂದಿಗಳಿಗೆ ಆಹಾರ ಪೂರೈಸುವುದು ತಪ್ಪುತ್ತದೆ. ಬರಿ ಬಾಯಿ ಮಾತಿನಲ್ಲೇ ಹೇಳಿದರೆ ಪ್ರಯೋಜನವಾಗದು. ಹೇಳುತ್ತಾ ಹೋದರೆ ಮತ್ತೊಂದು ಪಾಲಿಕೆ ಚುನಾವಣೆ ಬರಬಹುದು.ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್‌.

ಶೀಘ್ರ ಕಾಮಗಾರಿ ಆರಂಭ

‘ವರಾಹಶಾಲೆ’ಗೆ ಕಾಂಪಾಂಡ್‌ ಹಾಕುವ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಪಾಲಿಕೆಯ ಬಜೆಟ್‌ನಲ್ಲಿ ₹ 35 ಲಕ್ಷ ಮೀಸಲಿಡಲಾಗಿದೆ. 9 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ಇರುವ ಮಾಹಿತಿ ಇದೆ. ಗರ್ಭಿಣಿ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಲು ಬರುವುದಿಲ್ಲ. ಉಳಿದ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಲಾಗುವುದು. ಇದಕ್ಕೆ ₹ 20 ಲಕ್ಷ ಅನುದಾನ ಮೀಸಲಿಡಲಾಗಿದೆ. ಶೀಘ್ರ ಟೆಂಡರ್‌ ಕರೆಯಲಾಗುವುದು ಎಂದುಪಾಲಿಕೆಯ ಪಶು ವೈದ್ಯಕೀಯ ಸೇವೆ ಸಹಾಯಕ ನಿರ್ದೇಶಕ ಡಾ. ಸಂತೋಷ್ ಹೇಳಿದರು.

‘ಬೀಡಾಡಿ ದನಗಳ ಹಾವಳಿ ತಡೆಗೆ ಬಾತಿ ಬಳಿಯ ಜಾಗ ನೀಡುವಂತೆ ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದೆ. ಅನುಮೋದನೆ ಸಿಕ್ಕ ಬಳಿಕ ಜಾಗ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಹಂದಿ, ಬೀದಿ ನಾಯಿಗಳಿಂದಮುಕ್ತಿ ಯಾವಾಗ?

ಹೊನ್ನಾಳಿ: ಪಟ್ಟಣ ಪಂಚಾಯಿತಿ ಈಗ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಹತ್ತಾರು ವರ್ಷಗಳಿಂದಲೂ ಹಂದಿಗಳ ಕಾಟ, ಬೀಡಾಡಿ ದನಗಳ ಕಾಟ, ಬೀದಿ ನಾಯಿಗಳ ಹಾವಳಿಗೆ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ.

ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಹಂದಿಗಳು ಓಡಾಡುತ್ತಿವೆ. ಅಧಿಕಾರಿಗಳು ಸಾರ್ವಜನಿಕರು ದೂರುವವರೆಗೂ ಏನೂ ಕ್ರಮ ಕೈಗೊಳ್ಳುವುದಿಲ್ಲ. ದೂರಿನ ನಂತರ ಹಂದಿಗಳನ್ನು ಹಿಡಿದು ಸಾಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಮತ್ತೆ ಹಂದಿಗಳು ಅಡ್ಡಾಡುತ್ತವೆ. ಹಂದಿ, ಬೀದಿ ನಾಯಿಗಳ ಹಾವಳಿಯಿಂದ ವಾಹನ ಸವಾರರು ಅಪಘಾತಕ್ಕೀಡಾಗಿ ಕೈ ಕಾಲು ಮುರಿದುಕೊಂಡಿದ್ದಾರೆ.

ಬೀಡಾಡಿ ದನಗಳು ಬಸ್ ನಿಲ್ದಾಣದಲ್ಲಿ, ಮುಖ್ಯರಸ್ತೆಯಲ್ಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಣಸಿಗುತ್ತವೆ. ಬುಧವಾರದ ಸಂತೆಯಲ್ಲಿ ದನಗಳ ಕಾಟ ಹೇಳತೀರದು. ತರಕಾರಿಗಳಿಗೆ ಬಾಯಿ ಹಾಕುತ್ತವೆ. ಜನರನ್ನು ಗುದ್ದಲು ಬರುತ್ತವೆ. ಹಲವರು ‌ಬಿದ್ದು ಗಾಯಗೊಂಡಿರುವ ಉದಾಹರಣೆ ಇವೆ ಎನ್ನುತ್ತಾರೆ ವೀರೇಶ್‌.

ಬೀದಿನಾಯಿಗಳು ಮಕ್ಕಳ ಕೈಯಲ್ಲಿನ ತಿಂಡಿ ತಿನಿಸುಗಳನ್ನು ಕಚ್ಚಿ ತಿನ್ನುತ್ತವೆ. ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಪರಿಣಾಮಕಾರಿ ಕ್ರಮ ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು.

‘ಹಂದಿಗಳನ್ನು ಪಟ್ಟಣದಿಂದ 8-10 ಕಿ.ಮೀ. ದೂರವಿರುವ ಮಾಸಡಿ ಗ್ರಾಮದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿರ್ಮಿಸಿರುವ ವರಾಹ ಶಾಲೆಗೆ ಸಾಗಿಸುವಂತೆ ಹಂದಿ ಮಾಲೀಕರಿಗೆ ಸೂಚಿಸಲಾಗಿದೆ.ಆದರೆ, ಅವರು ಅಷ್ಟು ದೂರ ಹೋಗಲು ಮನಸ್ಸು ಮಾಡುತ್ತಿಲ್ಲ. ಅಲ್ಲಿಗೆ ಆಹಾರ ತೆಗೆದುಕೊಂಡು ಹೋಗುವುದು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ. ಬಿಸಿಲಿಗೆ ಹಂದಿಗಳು ಸಾವನ್ನಪ್ಪುತ್ತವೆ ಎಂದು ಹೇಳುತ್ತಿದ್ದಾರೆ. ಆದರೂ ಹಂದಿಗಳನ್ನು ಹಿಡಿದು ಸಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ್ ಹಾಗೂ ಎಂಜಿನಿಯರ್ ದೇವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT