ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರಂಟಿ’ಗಳಿಂದ ಅಭಿವೃದ್ಧಿ ಕುಂಠಿತವಾಗಲ್ಲ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ
Published 7 ಆಗಸ್ಟ್ 2023, 6:39 IST
Last Updated 7 ಆಗಸ್ಟ್ 2023, 6:39 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳನ್ನು ಇಡೀ ದೇಶವೇ ನೋಡುತ್ತಿದ್ದು, ರಾಜ್ಯ ಸರ್ಕಾರ ಇವುಗಳನ್ನು ಜಾರಿಗೊಳಿಸುವುದರ ಜೊತೆಜೊತೆಗೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳದಂತೆ ಎಚ್ಚರಿಕೆ ವಹಿಸುತ್ತದೆ. ನಡೆಯುತ್ತವೆ. ಇದರಲ್ಲಿ ಆತಂಕ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಬೆಸ್ಕಾಂನಿಂದ ಭಾನುವಾರ ಆಯೋಜಿಸಿದ್ದ ‘ಗೃಹ ಜ್ಯೋತಿ’ ಯೋಜನೆಗೆ ಗ್ರಾಹಕರಿಗೆ ಶೂನ್ಯ ದರದ ಬಿಲ್ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಚುನಾವಣೆ ವೇಳೆ ಘೋಷಿಸಿದ 5 ಗ್ಯಾರಂಟಿಗಳಲ್ಲಿ 3 ಅನ್ನು ಅನುಷ್ಠಾನ ಮಾಡಿದ್ದು, ಆಗಸ್ಟ್ 15ರಂದು ‘ಗೃಹ ಲಕ್ಷ್ಮಿ’ ಯೋಜನೆಗೆ ಚಾಲನೆ ದೊರೆಯಲಿದೆ. ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ದೇವಾಲಯಗಳ ಆದಾಯ ಹೆಚ್ಚಿದೆ. ಕಾಂಗ್ರೆಸ್ ಬಡವರು, ಹಿಂದುಳಿದವರಿಗೆ ಯೋಜನೆಗಳನ್ನು ನೀಡುವ ಮೂಲಕ ಅವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ’ ಎಂದು ಹೇಳಿದರು.

ಎಲ್ಲರ ಕೈಯಲ್ಲಿ ಜಣ ಜಣ:

‘ಕಾಂಗ್ರೆಸ್‌ನ 5 ಗ್ಯಾರಂಟಿಗಳಿಂದ ಎಲ್ಲರ ಕೈಯಲ್ಲಿ ಹಣ ಓಡಾಡುತ್ತಿದೆ. ಇದರಿಂದ ಎಲ್ಲರ ಆರ್ಥಿಕ ಅಭಿವೃದ್ಧಿಯಾಗಲಿದ್ದು, ಮುಖ್ಯಮಂತ್ರಿಗಳು ಆರ್ಥಿಕತೆಯಲ್ಲಿ ಅನುಭವಿಯಾಗಿ ಯಾವುದೇ ಆರ್ಥಿಕತೆಗೆ ಹಿನ್ನಡೆಯಾಗದಂತೆ ಯೋಜನೆ ರೂಪಿಸಲಿದ್ದಾರೆ’ ಎಂದರು.

ಬಿಜೆಪಿ ಅವ್ಯವಹಾರಗಳ ತನಿಖೆ:

ನರೇಂದ್ರ ಮೋದಿಯವರನ್ನು ಕೇಳಿ ಅಕ್ಕಿ ಕೊಡುವುದಾಗಿ ಘೋಷಿಸಿದ್ದೀರಾ ಎಂದು ಹೇಳಿದಾಗ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದರು. ಅವರ ಮಾತಿಗೆ ಉತ್ತರ ನೀಡುತ್ತೇನೆ ಎಂದು ಮೊದಲೇ ಹೇಳಿದ್ದ ಮಲ್ಲಿಕಾರ್ಜುನ್ ಬಿಜೆಪಿಯ ಲೋಪಗಳನ್ನು ಒಂದೊಂದಾಗಿ ಹೇಳುತ್ತಾ ಮಾತಿನಲ್ಲೇ ಬಿ.ಪಿ.ಹರೀಶ್ ಅವರನ್ನು ಕುಟುಕಿದರು.

‘ಬಿಜೆಪಿಯಲ್ಲಿ ಇರುವುದು ನಾನೊಬ್ಬನೇ. ಅದನ್ನು ನಿಮ್ಮಿಂದ ಸಹಿಸಲು ಸಾಧ್ಯವಿಲ್ಲ’ ಎಂಬ ಬಿ.ಪಿ. ಹರೀಶ್ ಅವರ ಮಾತಿಗೆ ‘ನಿಮ್ಮ ಅವಧಿಯಲ್ಲಿ ಶಿಷ್ಟಚಾರವನ್ನೇ ಪಾಲಿಸಿಲ್ಲ. ನಾನು ಪಕ್ಕದಲ್ಲೇ ನಿಮ್ಮನ್ನು ಕೂರಿಸಿಕೊಂಡಿದ್ದೇನೆ’ ಎಂದರು.

‘ಇಂದಿರಾ ಗಾಂಧಿ, ನೆಹರೂ ಅವರ ಕಾಲದಿಂದಲೂ ಗರಿಬೀ ಹಠಾವೋ ಘೋಷಣೆ ಮಾಡುವ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಕ್ಕೆ ದೇಶ ಅಭಿವೃದ್ಧಿಯಾಗಿರುವುದು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಯಿತು’ ಎಂದು ಆರೋಪಿಸಿದರು.

‘ನಿಮ್ಮದು 40 ಪರ್ಸೆಂಟ್ ಸರ್ಕಾರ. ಹಲವು ಕಾಮಗಾರಿಗಳು ಮುಗಿಯದಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದೆ. ವರ್ತುಲ ರಸ್ತೆಗೆ ಏನು ಮಾಡದವರ ಹೆಸರು ಇಡಲು ಹೊರಟಿದ್ದಾರೆ’ ಎಂದರು.

‘ವರ್ಗಾವಣೆ ವಿಷಯಕ್ಕೆ ಬರಬೇಡ, ಅದನ್ನು ನಮ್ಮವರು ನೋಡಿಕೊಳ್ಳುತ್ತಾರೆ. ನೀರಾವರಿ ವಿಷಯಗಳು ಇದ್ದರೆ ತೆಗೆದುಕೊಂಡು ಬಾ’ ಎಂದು ಬಿ.ಪಿ. ಹರೀಶ್‌ಗೆ ಹೇಳಿದರು.

‘ಕೋವಿಡ್‍ನಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೇ ಸಾಕಷ್ಟು ಜನರು ಸಾವನ್ನಪ್ಪಿದ್ದು, ಈ ಸಂದರ್ಭದಲ್ಲಿ ಅಳವಡಿಸಲಾದ ಆಕ್ಸಿಜನ್ ಯುನಿಟ್, ಔಷಧ ಪೂರೈಕೆ, ಕೋವಿಡ್ ವಾರಿಯರ್ಸ್ ವೈದ್ಯರು ಮತ್ತು ಸಿಬ್ಬಂದಿಗೆ ಸಂಬಳ ನೀಡದೇ ವಂಚನೆ ಮಾಡಲಾಗಿದೆ. ರೆಮ್‌ ಡಿಸಿವಿರ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿತ್ತು. ಈ ಕುರಿತು ಸಮಗ್ರ ತನಿಖೆ ಮಾಡಲು ಸೂಚಿಸಲಾಗಿದೆ’ ಎಂದರು.

‘ದಾವಣಗೆರೆ ನಗರ ಸಾಕಷ್ಟು ಅಭಿವೃದ್ದಿಯಾಗಿದ್ದು, ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ನೆಲಹಾಸು ಕೇಬಲ್ ಅಳವಡಿಸಲು ಸುಮಾರು ₹550 ಕೋಟಿ ಮೊತ್ತದ ಯೋಜನೆಯನ್ನು ಈ ಹಿಂದೆ ಮಂಜೂರು ಮಾಡಿಸಿದ್ದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದನ್ನು ತಡೆ ಹಿಡಿದರು. ಮುಂದಿನ ದಿನಗಳಲ್ಲಿ ಇದನ್ನು ಬೆಸ್ಕಾಂನಿಂದ ಕಾರ್ಯಗತ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

Quote - ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸದಿದ್ದಲ್ಲಿ ಹಳ್ಳಿಗೆ ಬಿಟ್ಟುಕೊಳ್ಳಬೇಡಿ ಎಂದಿದ್ದೆವು ಅದನ್ನು ಈಡೇರಿಸಲಾಗಿದೆ. 10 ಕೆಜಿ ಅಕ್ಕಿಯಲ್ಲಿ ಐದು ಕೆಜಿಗೆ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ. ಕೆ.ಎಸ್.ಬಸವಂತಪ್ಪ ಮಾಯಕೊಂಡ ಶಾಸಕ

Quote - ಏಕತೆ ಸಾಮರಸ್ಯದಿಂದಿ ಇರಲು ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಈಡೇರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಸ್‌.ಎಸ್. ಮಲ್ಲಿಕಾರ್ಜುನ್ ಅವರು ಮಾತು ಕಡಿಮೆ ಮಾಡಿ. ಕೆಲಸ ಜಾಸ್ತಿ ಮಾಡುತ್ತಿದ್ದಾರೆ. ಬಿ.ದೇವೆಂದ್ರಪ್ಪ ಜಗಳೂರು ಶಾಸಕ

Quote - ಬೆಳಿಗ್ಗೆ ಸೂರ್ಯ ಜಗತ್ತನ್ನು ಬೆಳಗಿದರೆ. ರಾತ್ರಿ ಬಡವರ ಗುಡಿಸಲುಗಳಲ್ಲಿ ಸರ್ಕಾರದ ‘ಗೃಹಜ್ಯೋತಿ’ ಬೆಳಗುತ್ತದೆ. ಗ್ಯಾರಂಟಿಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು ಸಂಪನ್ಮೂಲ ಹೊಂದಾಣಿಕೆಯಲ್ಲಿ ಸ್ವಲ್ಪ ಕಷ್ಟವಾಗುತ್ತದೆ. ಎಂ.ಪಿ.ಲತಾ ಮಲ್ಲಿಕಾರ್ಜುನ್ ಶಾಸಕಿ

Quote - ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸಮರ್ಥ ಒಳ್ಳೆಯ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ. ಇಲ್ಲದಿದ್ದರೆ ನಾನೇ ಸ್ಪರ್ಧಿಸುತ್ತೇನೆ. ಕಾರ್ಯಕರ್ತರು ಹೇಳಿದಂತೆ ಕೇಳುತ್ತೇನೆ. ಎಸ್.ಎಸ್.ಮಲ್ಲಿಕಾರ್ಜುನ್ ಸಚಿವ

Cut-off box - 10ರಿಂದ ಭದ್ರಾ ಜಲಾಶಯದಿಂದ ನೀರು ದಾವಣಗೆರೆ: ಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ನೀರು ಬಿಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು ಆಗಸ್ಟ್ 10ರಿಂದ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರ ಆದೇಶ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು. ಬೆಸ್ಕಾಂನಿಂದ ಭಾನುವಾರ ಆಯೋಜಿಸಿದ್ದ ‘ಗೃಹ ಜ್ಯೋತಿ’ ಯೋಜನೆಗೆ ಗ್ರಾಹಕರಿಗೆ ಶೂನ್ಯ ದರದ ಬಿಲ್ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

Cut-off box - ಶೇ 70ರಷ್ಟು ನೋಂದಣಿ ‘ಜಿಲ್ಲೆಯಲ್ಲಿ 494304 ವಿದ್ಯುತ್ ಗ್ರಾಹಕರಿದ್ದು ಜುಲೈ 27ರವರೆಗೆ 348260 ಅಂದರೆ ಶೇ 70.45 ರಷ್ಟು ಜನರು ಗೃಹಜ್ಯೋತಿ ಯೋಜನೆಗೆ ನೊಂದಾಯಿಸಿದ್ದಾರೆ. ಈ ಫಲಾನುಭವಿಗಳು ಆಗಸ್ಟ್ 1ರಿಂದ ಯೋಜನೆ ಲಾಭ ಪಡೆಯಲಿದ್ದು 200 ಯೂನಿಟ್‌ವರೆಗೆ ಶೂನ್ಯ ದರದ ಬಿಲ್‍ ಅನ್ನು ಪಡೆಯಲಿದ್ದಾರೆ. ಇದರಲ್ಲಿ ಭಾಗ್ಯಜ್ಯೋತಿ ಅಮೃತ ಜ್ಯೋತಿ ಹಾಗೂ ಕುಟೀರ ಜ್ಯೋತಿ ಫಲಾನುಭವಿಗಳು ಇದ್ದಾರೆ’ ಮಲ್ಲಿಕಾರ್ಜುನ್ ಹೇಳಿದರು.

Cut-off box - ಜಿಲ್ಲೆ ತವರು ಮನೆ ಇದ್ದಂತೆ ‘ಈ ಜಿಲ್ಲೆಯಲ್ಲಿ ಕೆಲಸ ಮಾಡಿದ್ದು ಉತ್ತಮ ಅನುಭವ ನೀಡಿತು. ಇಲ್ಲಿಗೆ ಬಂದರೆ ತವರು ಮನೆಗೆ ಬಂದಷ್ಟೇ ಖುಷಿಯಾಗುತ್ತದೆ’ ಎಂದು ಈ ಹಿಂದಿನ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಆಗ ಸಭಿಕರು ಶಿಳ್ಳೆಯ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೂ ಶ್ಲಾಘಿಸಿದರು. ಆದರೆ ಈ ಖುಷಿ ಬಹಳ ಸಮಯ ಇರಲಿಲ್ಲ. ‘ಮಹಾಂತೇಶ ಬೀಳಗಿ ಅವರು ಸರ್ಕಾರದ ಪರವಾಗಿ ಮಾತನಾಡುವ ಬದಲು ಪಕ್ಷದ ಪರವಾಗಿ ಮಾತನಾಡುತ್ತಿದ್ದಾರೆ’ ಎಂದು ಬಿ.ಪಿ. ಹರೀಶ್ ಅವರು ಟೀಕಿಸಿದಾಗ ಮಹಾಂತೇಶ ಬೀಳಗಿ ಸ್ವಲ್ಪ ವಿಚಲಿತರಾದರು. ‘ಅಧಿಕಾರಿಗಳು ಸರ್ಕಾರದ ಪರವಾಗಿ ಮಾತನಾಡದೇ ಇನ್ಯಾರ ಪರವಾಗಿ ಮಾತನಾಡಬೇಕು. ನಿಮ್ಮ ಸರ್ಕಾರದಲ್ಲಿ ನೀವು ಹೇಳಿದ ಹಾಗೆ ಕೇಳಿಲ್ಲವೇ’ ಎಂದು ಎಸ್.ಎಸ್. ಮಲ್ಲಿಕಾರ್ಜುನ್ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT