ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಗ್ಯಾರಂಟಿ: ಅರ್ಹರಿಗೂ ದೊರೆಯದ ಸೌಲಭ್ಯ...

Published 23 ಅಕ್ಟೋಬರ್ 2023, 5:04 IST
Last Updated 23 ಅಕ್ಟೋಬರ್ 2023, 5:04 IST
ಅಕ್ಷರ ಗಾತ್ರ

ದಾವಣಗೆರೆ: ಇ–ಕೆವೈಸಿ, ಆಧಾರ್ ಅಪ್ಡೇಟ್, ಎನ್‌ಪಿಸಿಐ ಮ್ಯಾಪಿಂಗ್...

ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಒಳಪಡಲು ಪರದಾಡುತ್ತಿರುವ ಜನಸಾಮಾನ್ಯರು ನಿತ್ಯವೂ ಇವುಗಳ ಕುರಿತೇ ಚರ್ಚಿಸುವಂತಾಗಿದೆ. 

‘ಗೃಹಲಕ್ಷ್ಮಿ’, ‘ಅನ್ನಭಾಗ್ಯ’, ‘ಗೃಹಜ್ಯೋತಿ’ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ, ಸಾವಿರಾರು ಜನರು ಅರ್ಹತೆಯಿದ್ದರೂ, ಈ ಕೆಲವು ಯೋಜನೆಗಳಿಗೆ ಸೇರ್ಪಡೆಯಾಗಲು ಆಗುತ್ತಿಲ್ಲ. ವಿವಿಧ ಸ್ವರೂಪದ ತಾಂತ್ರಿಕ ಸಮಸ್ಯೆಗಳನ್ನು ಫಲಾನುಭವಿಗಳು ಎದುರಿಸುತ್ತಿದ್ದಾರೆ.

ಇ–ಕೆವೈಸಿ ಮಾಡಿಸಬೇಕು, ಆಧಾರ್ ಅಪ್ಡೇಟ್ ಆಗಬೇಕು, ಎನ್‌ಸಿಪಿಐ ಮ್ಯಾಪಿಂಗ್ ಮಾಡಿಸಬೇಕು ಎಂಬಂಥ ವಿವಿಧ ಸಲಹೆಗಳನ್ನು ಬ್ಯಾಂಕ್ ಹಾಗೂ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿ ನೀಡುತ್ತಿದ್ದಾರೆ. ಎಲ್ಲ ಕಡೆ ಈ ಸಮಸ್ಯೆಗಳಿವೆ. ಯೋಜನೆಗಳಿಗೆ ಒಳಪಡಲು ನಿತ್ಯವೂ ಆಧಾರ್ ಕೇಂದ್ರ, ವಿವಿಧ ಸೇವಾ ಕೇಂದ್ರಗಳು ಹಾಗೂ ಬ್ಯಾಂಕ್‌ಗಳಿಗೆ ಸಂತ್ರಸ್ತರು ಎಡತಾಕುತ್ತಿದ್ದಾರೆ.

ಅರ್ಹತೆ ಇದ್ದರೂ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಹಲವು ವಿಧಗಳಿಗೆ. ಬ್ಯಾಂಕ್‌ ಹಾಗೂ ಆಧಾರ್‌ ಕಾರ್ಡ್ ಜೋಡಣೆ (ಇ–ಕೆವೈಸಿ) ಆಗದಿರುವುದು ಬಹುತೇಕರು ಎದುರಿಸುತ್ತಿರುವ ಸಮಸ್ಯೆ. ಒಂದು ವೇಳೆ, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಒಂದೇ ಇದ್ದರೂ, ಸ್ಪೆಲ್ಲಿಂಗ್ ವ್ಯತ್ಯಾಸವಿದೆ ಎಂಬ ಕಾರಣಕ್ಕೆ ಇ–ಕೆವೈಸಿ ಆಗುತ್ತಿಲ್ಲ. ಇದಕ್ಕೆ ಆಧಾರ್ ಕಾರ್ಡ್ ತಿದ್ದುಪಡಿ ಒಂದು ರೀತಿಯ ಪರಿಹಾರ. ಇನ್ನೂ ಕೆಲವರು ಆಧಾರ್‌ ದೃಢೀಕರಣಕ್ಕೆ ನೀಡಿವ ಬಯೊಮೆಟ್ರಿಕ್‌ನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಬಯೊಮೆಟ್ರಿಕ್‌ಗಾಗಿ ಪಡೆಯುವ ವ್ಯಕ್ತಿಯ ಕೈಬೆರಳಿನ ಗುರುತುಗಳು ಅಳಿಸಿವೆ ಎಂಬ ಕಾರಣಕ್ಕೂ ಆಧಾರ್ ತಿದ್ದುಪಡಿ ಸಾಧ್ಯವಾಗುತ್ತಿಲ್ಲ ಎಂದು ಕೆಲವು ಸಂತ್ರಸ್ತರು ಹೇಳಿಕೊಂಡಿದ್ದಾರೆ. 

‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಉಚಿತ ಅಕ್ಕಿಯ ಬದಲಾಗಿ ಪ್ರತೀ ತಿಂಗಳೂ ಪಡಿತರದಾರರ ಬ್ಯಾಂಕ್‌ ಖಾತೆಗೆ ನಗದು ನೇರ ವರ್ಗಾವಣೆ (ಡಿಬಿಟಿ) ಮೂಲಕ ₹ 170 ಪಾವತಿಸಲಾಗುತ್ತಿದೆ. ಇಲ್ಲಿಯೂ ಕೆಲವು ಸಮಸ್ಯೆಗಳನ್ನು ಜನ ಎದುರಿಸುತ್ತಿದ್ದಾರೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥನ ಸ್ಥಾನದಲ್ಲಿ ಪುರುಷನ ಹೆಸರಿದ್ದರೆ, ಅಂತಹ ಕುಟುಂಬದ ಮಹಿಳೆಗೆ ಡಿಬಿಟಿ ಲಾಭ ದೊರೆತಿಲ್ಲ. ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ ಮೂಲಕ ಹಣ ಪಾವತಿಸಲು ಎನ್‌ಪಿಸಿಐ ಮ್ಯಾಪಿಂಗ್ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಕಡ್ಡಾಯ. ಮ್ಯಾಪಿಂಗ್ ಆಗದವರು ತಮ್ಮ ಖಾತೆ ಇರುವ ಬ್ಯಾಂಕ್‌ಗಳಿಗೆ ಎಡತಾಕುತ್ತಿದ್ದಾರೆ. ಆದರೆ, ಪಡಿತರ ಚೀಟಿ ತಿದ್ದುಪಡಿಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಸಮಸ್ಯೆಗೆ ಕಾರಣವಾಗಿದೆ.

ಕುಟುಂಬವೊಂದರ ಹಿರಿಯ ಮಹಿಳೆಗೆ ‘ಗೃಹಲಕ್ಷ್ಮಿ’ ಯೋಜನೆಯಡಿ ಸರ್ಕಾರ ನೀಡುತ್ತಿರುವ ಮಾಸಿಕ ₹ 2,000 ಸಹಾಯಧನ ಪಡೆಯಲೂ ಕೆಲವರಿಗೆ ಸಾಧ್ಯವಾಗಿಲ್ಲ. ‘ಎಲ್ಲ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಪೂರ್ಣಗೊಳಿಸಲಾಗಿದೆ. ತಮ್ಮ ಪತ್ನಿಯ ಖಾತೆಗೆ ಡಿಬಿಟಿ ಮೂಲಕ ಹಣ ಪಾವತಿಯಾಗುತ್ತಿದೆ. ಆದರೆ, ‘ಗೃಹಲಕ್ಷ್ಮಿ’ಯ ಸಹಾಯಧನ ಪಾವತಿಯಾಗಿಲ್ಲ’ ಎಂದು ದಾವಣಗೆರೆ ಸಮೀಪದ ಹೊನ್ನೂರಿನ ಯೋಗೇಶ್ ಹೇಳಿದ್ದಾರೆ. ಡಿಬಿಟಿ ಹಣ ವರ್ಗಾವಣೆಗೆ ಎದುರಾಗದ ಅಡ್ಡಿ, ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಗೆ ಏಕೆ ಎದುರಾಗುತ್ತಿದೆ ಎಂದು ಅವರು ಪ್ರಶ್ನಿಸುತ್ತಾರೆ.

ಬ್ಯಾಂಕ್‌ಗೆ ಆಗಾಗ್ಗೆ ಬಂದುಹೋಗುವುದೇ ಮುಖ್ಯ ಕೆಲಸವಾಗಿದೆ. ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದರೆ, ‘ಸರ್ಕಾರದಿಂದ ಫಲಾನುಭವಿ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ. ಖಾತೆಗೆ ಹಣ ಬಿದ್ದರಷ್ಟೇ ಫಲಾನುವಿಗಳಿಗೆ ನೀಡಲು ಸಾಧ್ಯ’ ಎಂದು ಉತ್ತರಿಸುತ್ತಾರೆ ಎಂದು ತಿಳಿಸಿದರು. 

ಇವೆಲ್ಲವೂ ಇನ್ನೂ ಯೋಜನೆಗೆ ಅಡಿಯಿಡಲು ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳು. ಆದರೆ, ಈಗಾಗಲೇ ಯೋಜನೆಗೆ ಒಳಪಟ್ಟು, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತು ಪಡೆದ ಕೆಲವರೂ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರಿಗೆ ಮೊದಲ ಕಂತು ಪಾವತಿಯಾಗಿದ್ದು, ಎರಡನೇ ಕಂತನ್ನು ತಡೆಹಿಡಿಯಲಾಗಿದೆ ಎಂದು ಫಲಾನುಭವುಗಳು ಆರೋಪಿಸುತ್ತಿದ್ದಾರೆ. ಇದಕ್ಕೆ ತಾಂತ್ರಿಕ ಸಮಸ್ಯೆ ಗಳನ್ನು ಮುಂದಿಡಲಾಗುತ್ತಿದೆ ಎಂದು ಡಿಜಿಟಲ್ ಸೇವಾ ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದರು. 

ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿರುವ ಫಲಾನುಭವಿಗಳಿಗೆ 2ನೇ ಕಂತಿನ ಹಣ ಖಾತೆಗೆ ಜಮಾ ಆಗುತ್ತಿದೆ. ಆದರೆ,  ದೃಢೀಕರಣ ಆಗಿಲ್ಲ ಎಂಬ ಕಾರಣಕ್ಕೆ ತಡೆಹಿಡಿಯಲಾಗಿದ್ದ ಮೊದಲ ಕಂತಿನ ಹಣವನ್ನು ಪಾವತಿಸಿಲ್ಲ ಎಂಬ ಆರೋಪಗಳೂ ಫಲಾನುಭವಿಗಳಿಂದ ಕೇಳಿಬಂದಿವೆ. ‘ತಾಂತ್ರಿಕ ಕಾರಣಕ್ಕೆ ತಡೆಹಿಡಿಯಲಾಗಿದ್ದ ಹಣವನ್ನು, ಸಮಸ್ಯೆ ಬಗೆಹರಿದ ಮೇಲೆ ಕೊಡಬೇಕಲ್ಲವೇ’ ಎಂದು ಫಲಾನುಭವಿಯೊಬ್ಬರು ಪ್ರಶ್ನಿಸುತ್ತಾರೆ.

ಕೆಲವು ಹೆಣ್ಣುಮಕ್ಕಳಿಗೆ ತವರು ಮನೆಯಲ್ಲಿ ಇಟ್ಟಿದ್ದ ಹೆಸರನ್ನು ಮದುವೆಯಾದ ಬಳಿಕ ಪತಿಯ ಮನೆಯಲ್ಲಿ ಬದಲಾಯಿಸುವ ರೂಢಿಯಿದೆ. ಹೀಗೆ ಹೆಸರು ಬದಲಿಸಿಕೊಂಡ ಮಹಿಳೆಯರು ಅಫಿಡವಿಟ್ ಸಲ್ಲಿಸಿ, ಆಧಾರ್‌ ಹಾಗೂ ಇತರೆ ದಾಖಲೆಗಳಲ್ಲೂ ತಿದ್ದುಪಡಿ ಮಾಡಿಸಿರುತ್ತಾರೆ. ಹೀಗೆ ಎಲ್ಲ ಕಡೆಯೂ ತಿದ್ದುಪಡಿ ಮೂಲಕ ಬದಲಾವಣೆ ಮಾಡಿಸಿದ್ದರೂ, ತಮ್ಮನ್ನು ಯೋಜನೆಯಿಂದ ಹೊರಗಿಡಲಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ ಎಂದು ಸೇವಾ ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದರು.

ದಾವಣಗೆರೆಯ ಎಸ್‌.ಎಂ. ಕೃಷ್ಣ ನಗರದ ಲಕ್ಷ್ಮಮ್ಮ ಅವರದ್ದು ಭಿನ್ನ ಸಮಸ್ಯೆ. ಕುಟುಂಬದ ದುಡಿಮೆಗೆ ಆಸರೆಯಾಗಿದ್ದ ಅವರ ಪತಿ ಈಚೆಗೆ ತೀರಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಅವರಿಗೆ ‘ಗೃಹಲಕ್ಷ್ಮಿ’ ಇನ್ನೂ ಒಲಿದಿಲ್ಲ. ಎವಿಕೆ ಕಾಲೇಜು ರಸ್ತೆಯ ಬ್ಯಾಂಕೊಂದರಲ್ಲಿ ಖಾತೆ ಹೊಂದಿರುವ ಅವರು, ತಮ್ಮ ಮನೆ ಸಮೀಪದ ಬ್ಯಾಂಕ್‌ಗೆ ಖಾತೆ ವರ್ಗಾವಣೆ ಮಾಡಿಸಲು ಯತ್ನಿಸುತ್ತಿದ್ದಾರೆ. ಈ ಪ್ರಕ್ರಿಯೆ ನಡೆಯುತ್ತಿರುವ ಕಾರಣ, ಅವರಿಗೆ ಸದ್ಯಕ್ಕೆ ಯೋಜನೆ ಲಾಭ ಸಿಕ್ಕಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT