ಹರಿಹರ: ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರ, ರೈತರ ಸಾಲ ಮನ್ನಾಕ್ಕೆ ಮುಂದಾಗದಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಆರೋಪಿಸಿದರು.
ನಗರದ ಎಪಿಎಂಸಿ ವಸತಿ ನಿಲಯದಲ್ಲಿ ಶನಿವಾರ ನಡೆದ ಹರಿಹರ ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉದ್ಯಮಿಗಳು ತೆರಿಗೆ ಪಾವತಿಸುತ್ತಾರೆ, ಹೀಗಾಗಿ ಅವರ ಸಾಲ ಮನ್ನಾ ಮಾಡುತ್ತೇವೆ ಎಂಬ ಭಾವನೆ ಕೇಂದ್ರ ಸರ್ಕಾರಕ್ಕಿದೆ. ರೈತರು ಕ್ರಿಮಿನಾಶಕ, ಗೊಬ್ಬರ, ವಿವಿಧ ಕೃಷಿ ಉಪಕರಣಗಳನ್ನು ಖರೀದಿಸಿದಾಗಲೂ ತೆರಿಗೆ ಪಾವತಿಸುತ್ತಾರೆ. ರೈತರ ಕುರಿತು ಕೇಂದ್ರ ಸರ್ಕಾರ ತಾತ್ಸಾರ ಭಾವನೆ ಹೊಂದಿದೆ ಎಂದು ಅವರು ಟೀಕಿಸಿದರು.
ರೈತರು ಸಂಘಟಿತರಾಗಿ ಹೋರಾಟ ಮಾಡಿ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ತಾಲ್ಲೂಕಿನ ಹೊಸ ಸಮಿತಿಯವರು ಮಾಡುವ ಹೋರಾಟಗಳಿಗೆ ನಮ್ಮ ಬೆಂಬಲವಿದೆ ಎಂದರು.
ತಾಲ್ಲೂಕಿನ ಭದ್ರಾ ಹಾಗೂ ದೇವರಬೆಳೆಕೆರೆ ಕಾಲುವೆಗಳು ಒಡೆದಿವೆ, ಹೂಳು ತುಂಬಿವೆ. ಸ್ಥಳೀಯ ಜನಪ್ರತಿನಿಧಿಗಳು ಕೊನೆ ಭಾಗದ ರೈತರಿಗೂ ನೀರು ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹರಿಹರ ತಾಲ್ಲೂಕು ಘಟಕ ಅಧ್ಯಕ್ಷ ಜಿ.ಪ್ರಭುಗೌಡ ಹೇಳಿದರು.
ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯರೈತ ಸಂಘ ಮತ್ತು ಹಸಿರು ಸೇನೆಯ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜಿ.ಪ್ರಭುಗೌಡ ಕೆ.ಎನ್.ಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಗುತ್ತೂರು ಗರಡಿಮನಿ ಬಸಣ್ಣ, ಉಪಾಧ್ಯಕ್ಷರಾಗಿ ಆಂಜಿನಪ್ಪ ಹಾಲಿವಾಣ, ಟಿ.ರಾಜಣ್ಣ, ಮಲೆಬೆನ್ನೂರು ಬಿ.ಮಹಮ್ಮದ್ ಹಸೀಫ್ ಸಾಬ್, ಸಂಚಾಲಕರಾಗಿ ಜಿ.ಎಸ್.ಮಲ್ಲೇಶಪ ಜಿ.ಟಿ.ಕಟ್ಟೆ ಅವರನ್ನು ನೇಮಿಸಲಾಗಿದೆ.
ಹಸೀರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎಂ.ಬಸಪ್ಪ, ಮಲೇಬೆನ್ನೂರು ಹೋಬಳಿ ಘಟಕದ ಅಧ್ಯಕ್ಷರಾಗಿ ಎಂ.ಮಂಜಪ್ಪ ಜಿ.ಟಿ.ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸೂರ್ಯಪ್ಪ, ಹರಿಹರ ಕಸಬಾ ಹೋಬಳಿ ಘಟಕದ ಅಧ್ಯಕ್ಷರಾಗಿ ಮಾರುತಿರಾವ್ ಪಾಮೇನಹಳ್ಳಿ ಆಯ್ಕೆಯಾದರು.