ಶುಕ್ರವಾರ, ಜುಲೈ 30, 2021
28 °C
₹12 ಸಾವಿರ ಗೌರವಧನ, ರಕ್ಷಣಾ ಸಲಕರಣೆ ವಿತರಣೆಗೆ ಆಗ್ರಹ

ಜುಲೈ 10ರಂದು ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಸೇವೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹12 ಸಾವಿರ ಗೌರವಧನ ಮತ್ತು ಕೊರೋನಾ ವಿರುದ್ಧದ ಹೋರಾಟಕ್ಕೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಇದೇ ಜುಲೈ 10 ರಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸಲಿದ್ದಾರೆ.

‘ಸರ್ಕಾರ ಆಶಾಗಳ ಬೇಡಿಕೆಗಳನ್ನು ಪರಿಹರಿಸಲು ಮುಂದಾಗದಿರುವುದರಿಂದ ಅನಿವಾರ್ಯವಾಗಿ ಅನಿರ್ದಿಷ್ಟವಾಗಿ ರಾಜ್ಯವ್ಯಾಪಿ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಎಲ್ಲಾ ಜಿಲ್ಲೆ, ತಾಲ್ಲೂಕು, ಪಿಎಚ್‌ಸಿ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಆರೋಗ್ಯಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ' ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ 42 ಸಾವಿರ ಮತ್ತು ಜಿಲ್ಲೆಯಲ್ಲಿ 1300 ಆಶಾ ಕಾರ್ಯಕರ್ತೆಯರಿದ್ದು, ಅವರು ಕೊರೊನಾ ತಡೆಗಟ್ಟುವ ಹೋರಾಟದಲ್ಲಿ ಆಧಾರ ಸ್ಥಂಭಗಳಾಗಿದ್ದಾರೆ. ಮನೆಮನೆಗೆ ತೆರಳಿ ಸಮಿಕ್ಷೆ ನಡೆಸುವುದು, ರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಮತ್ತು ಇತರರನ್ನು ಸ್ಕ್ರೀನಿಂಗ್ ಮಾಡುವುದು, ಅಪಾಯವನ್ನು ಮೈಮೇಲೆ ಎಳೆದುಕೊಂಡು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೆಲಸ ನಿರ್ವಹಿಸುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವರ ಕಾರ್ಯಕ್ಕೆ ಸರಿಯಾದ ಗೌರವಧನ ಮತ್ತು ರಕ್ಷಣಾ ಸಾಮಗ್ರಿಗಳನ್ನು ವಿತರಿಸದೇ ಇವರನ್ನು ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.

ಅಪಾಯಕಾರಿ ಕೆಲಸದಲ್ಲಿ ತೊಡಗಿರುವ ಆಶಾಗಳ ಕಾರ್ಯಕ್ಕೆ ಕೇಂದ್ರ ಸರ್ಕಾರ ಶ್ಲಾಘನೆ ವ್ಯಕ್ತಪಡಿಸಿದೆ. ಆದರೆ, ಪ್ರಾಣ ಒತ್ತೆಯಿಟ್ಟು ಕಾರ್ಯನಿರ್ವಸುತ್ತಿರುವ ಆಶಾಗಳು ಮಾತ್ರ ವೇತನದ ಅನಿಶ್ಚಿತೆಯಿಂದ ಹೈರಾಣಾಗಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಅವರ ಆರೋಗ್ಯ ರಕ್ಷಣೆಯ ಜತೆಗೆ ತಿಂಗಳಿಗೆ ₹12 ಸಾವಿರ ಗೌರವಧನ ಖಾತರಿ ಪಡಿಸಬೇಕೆಂದು ಆಗ್ರಹಿಸಿದರು.

‘ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕವಾಡ ಮಾತನಾಡಿ, ‘ಈಗಾಗಲೇ ನಿಶ್ಚಿತ ವೇತನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು 10 ಬಾರಿ ಹೋರಾಟ ನಡೆಸಿದ್ದಾರೆ. ಜೂನ್‌ 30ರಂದು ಎಲ್ಲಾ ಶಾಸಕರು, ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಕೂಡಲೇ ಸಮಸ್ಯೆ ಪರಿಹಾರಕ್ಕೆ ಧಾವಿಸಬೇಕು’ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಾರಮ್ಮ, ಲೀಲಾವತಿ, ಜುಬೇದಾ, ಯಶೋಧ, ಭಾರತಿ, ನೇತ್ರಾ, ಮಧು ತೊಗಲೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು