ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಕಿರಿದಾದ ರಸ್ತೆ, ರಾಷ್ಟ್ರೀಯ ಹೆದ್ದಾರಿಯ ಯೋಗ ಸಿಗುವುದೆಂದು?

ಆರದ ಗಾಯವಾಗಿರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ: ಸೇತುವೆಗಳಿಂದ ವಾಹನ ಸಂಚಾರಕ್ಕೆ ಅಡ್ಡಿ
Published 19 ಮೇ 2024, 6:33 IST
Last Updated 19 ಮೇ 2024, 6:33 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನ ಮೂಲಕ ಹಾದು ಹೋಗಿರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ-25ರಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ಹಲವು ತೊಡರುಗಳು ಎದುರಾಗುತ್ತಿವೆ.

ರಾಜ್ಯದ ವಿಜಯನಗರ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ 194 ಕಿ.ಮೀ. ಉದ್ದಕ್ಕೆ ಹಾದು ಹೋಗಿರುವ ಈ ಹೆದ್ದಾರಿ ಹೊಸಪೇಟೆಯ ಮರಿಯಮ್ಮನಹಳ್ಳಿಯಿಂದ ಆರಂಭಗೊಂಡು ದಾವಣಗೆರೆ ಜಿಲ್ಲೆ ಮೂಲಕ ಶಿವಮೊಗ್ಗ ನಗರವನ್ನು ತಲುಪುತ್ತದೆ.

ಹೊಸಪೇಟೆ ಹಾಗೂ ಶಿವಮೊಗ್ಗದಿಂದ ಮುಂದಕ್ಕೆ ಈ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡು ಮುಂದುವರಿಯುತ್ತದೆ. ಈ ಎರಡೂ ನಗರಗಳ ನಡುವಿನ 194 ಕಿ.ಮೀ. ಉದ್ದದ ಪಟ್ಟಿ ಮಾತ್ರ ರಾಜ್ಯ ಹೆದ್ದಾರಿಯಾಗಿ ಹಾಗೆಯೇ ಉಳಿದಿದೆ. 

ಈ ಹೆದ್ದಾರಿ ಬಳಸಿ ಹೊಸಪೇಟೆಯಿಂದ ಮುಂದಕ್ಕೆ ಬಳ್ಳಾರಿ, ರಾಯಚೂರು, ಕಲಬುರಗಿ, ಬೀದರ್‌ ಹಾಗೂ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಿಗೆ ವಾಹನಗಳು ಸಂಚರಿಸುತ್ತವೆ. ಹಾಗೆಯೇ ಶಿವಮೊಗ್ಗದಿಂದ ಮುಂದಕ್ಕೆ ಚಿಕ್ಕಮಗಳೂರು, ಮೈಸೂರು, ಉಡುಪಿ, ಮಂಗಳೂರು, ಚಾಮರಾಜನಗರ ಹಾಗೂ ಕೇರಳ ರಾಜ್ಯಕ್ಕೆ ವಾಹನಗಳು ಸಂಚರಿಸುತ್ತವೆ.

194 ಕಿ.ಮೀ. ಉದ್ದದ ಈ ರಸ್ತೆ, ರಾಜ್ಯ ಹೆದ್ದಾರಿಯಾಗಿದ್ದರೂ ಕೂಡ ಇಲ್ಲಿರುವ ವಾಹನ ದಟ್ಟಣೆ ರಾಷ್ಟ್ರೀಯ ಹೆದ್ದಾರಿಗಿಂತ ಯಾವುದಕ್ಕೂ ಕಡಿಮೆ ಇಲ್ಲ. ಹರಿಹರ ವಲಯದಲ್ಲಿ ಈ ಹೆದ್ದಾರಿಯಲ್ಲಿ ದಿನಕ್ಕೆ ಸರಾಸರಿ 20,000 ಭಾರಿ ವಾಹನಗಳ ಸಂಚಾರ ದಟ್ಟಣೆ ಇದೆ ಎಂದು ಪಿಡಬ್ಲುಡಿ ಅಂಕಿ–ಅಂಶಗಳೇ ಹೇಳುತ್ತವೆ.

ಹರಿಹರ ತಾಲ್ಲೂಕಿನ ಕರಲಹಳ್ಳಿ ಬಳಿ ಇರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಕಿರಿದಾಗ ಸೇತುವೆಯಿಂದಾಗಿ ಒಮ್ಮೆಗೆ ಎರಡು ವಾಹನಗಳ ಸಂಚಾರ ಅಸಾಧ್ಯವಾಗಿದೆ
ಹರಿಹರ ತಾಲ್ಲೂಕಿನ ಕರಲಹಳ್ಳಿ ಬಳಿ ಇರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಕಿರಿದಾಗ ಸೇತುವೆಯಿಂದಾಗಿ ಒಮ್ಮೆಗೆ ಎರಡು ವಾಹನಗಳ ಸಂಚಾರ ಅಸಾಧ್ಯವಾಗಿದೆ

ಶತಮಾನದಷ್ಟು ಹಳೆಯ ಕಿರು ಸೇತುವೆಗಳು

ಈ ಹೆದ್ದಾರಿಯಲ್ಲಿ ಸಿಗುವ ನಗರ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ರಸ್ತೆ ವಿಭಜಕದೊಂದಿಗೆ ಏಕಮುಖ ಸಂಚಾರ ವ್ಯವಸ್ಥೆ ಇದೆ. ಉಳಿದಂತೆ ಶೇ 95 ಭಾಗ ದ್ವಿಪಥ ಮಾತ್ರ ಇದ್ದು ರಸ್ತೆ ವಿಭಜಕಗಳು ಇಲ್ಲ. ಈ ಹೆದ್ದಾರಿಯಲ್ಲಿ ಬರುವ ಸಣ್ಣಪುಟ್ಟ ಸೇತುವೆಗಳನ್ನು ಶತಮಾನದ ಹಿಂದೆ ನಿರ್ಮಿಸಿದ್ದು ಅವುಗಳ ಅಗಲ ಕಿರಿದಾಗಿವೆ. ಕೆಲವು ಸೇತುವೆಗಳ ಮೇಲೆ ಒಂದೇ ಬಾರಿಗೆ ಎರಡು ವಾಹನಗಳು ಸಂಚರಿಸಲಾರದಷ್ಟು ಇಕ್ಕಟ್ಟಾಗಿವೆ. ಇದೆಲ್ಲದರ ಪರಿಣಾಮವಾಗಿ ಅಪಘಾತಗಳು ಸಂಭವಿಸಿ ಅಪಾರ ಪ್ರಮಾಣದ ಜೀವ ಆಸ್ತಿ ಹಾನಿಯಾಗುತ್ತಿದೆ. ವಾಹನಗಳ ಸಂಚಾರದ ವೇಗವೂ ಕಡಿಮೆಯಾಗುತ್ತದೆ. ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.

ಕರಲಹಳ್ಳಿ ಬಳಿಯ ಸೇತುವೆ ಕಿರಿದಾಗಿರುವುದರಿಂದ ಭಾರಿ ಗಾತ್ರದ ವಾಹನ ಸಾಗುವಾಗ ಎದುರಿನಿಂದ ಬರುವ ಮತ್ತೊಂದು ಭಾರಿ ವಾಹನ ಕಾಯಬೇಕು. ಅವಸರದಲ್ಲಿ ಒಮ್ಮೆಗೆ ಎರಡು ವಾಹನಗಳು ಸಾಗಿ ಹಲವು ಬಾರಿ ಅಪಘಾತಗಳು ನಡೆದಿವೆ.
-ಕುಮಾರ್ ಜಿ., ಗಂಗನರಸಿ ಗ್ರಾಮದ ನಿವಾಸಿ 
ದಾವಣಗೆರೆ ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳ ಸಂಸದರು ಶಾಸಕರು ಸಚಿವರು ಪಕ್ಷಾತೀತವಾಗಿ ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರೆ ಈ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೇಗೇರಲು ಸಾಧ್ಯವಿದೆ.
-ಕರಿಬಸಪ್ಪ ಗುತ್ತೂರು, ಉದ್ಯಮಿ
ಹರಿಹರ ತಾಲ್ಲೂಕಿನ ಕರಲಹಳ್ಳಿ ಬಳಿಯ ಸೇತುವೆ 7 ಮೀಟರ್ ಅಗಲವಿದ್ದು ಅದನ್ನು 12 ಮೀಟರ್‌ಗೆ ವಿಸ್ತರಿಸಲು ಒಂದು ವರ್ಷದ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಮಂಜೂರಾತಿ ಸಿಕ್ಕಿಲ್ಲ
-ಸತೀಶ್ ನಾಯ್ಕ, ಪಿಡಬ್ಲುಡಿ ಎಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT