ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀಕೃಷ್ಣ’ನಿಗೆ ಸಹಾಯಹಸ್ತದ ಮಹಾಪೂರ

ಮೌಢ್ಯಕ್ಕೆ, ದೌರ್ಜನ್ಯಕ್ಕೆ ಬಲಿಯಾದ ಮಹಿಳೆ, ಮಗುವಿನ ನೆರವಿಗೆ ನಿಂತ ಸರ್ಕಾರ, ಜನರು
Last Updated 9 ಮಾರ್ಚ್ 2020, 9:29 IST
ಅಕ್ಷರ ಗಾತ್ರ

ದಾವಣಗೆರೆ: ಲೈಂಗಿಕ ದೌರ್ಜನ್ಯ ಮತ್ತು ಮೌಢ್ಯದ ದೌರ್ಜನ್ಯಕ್ಕೆ ಒಳಗಾಗಿ ಊರಿನಿಂದಲೇ ಹೊರ ಹಾಕಿಸಿಕೊಂಡ ಮಹಿಳೆ ಮತ್ತು ಮಗುವನ್ನು ಕರೆದುಕೊಂಡು ಬಂದು ಮಗುವಿಗೆ ಹೆಸರಿಟ್ಟು, ಮಹಿಳೆಗೆ ಆಶ್ರಯ ನೀಡಿದ್ದ ಅಧಿಕಾರಿಗಳೇ ಭಾನುವಾರ ಸನ್ಮಾನಿಸಿ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಜತೆಗೆ ಆ ಮಗುವಿನ ಭವಿಷ್ಯಕ್ಕೆ ನೆರವಾಗಲು ಅಧಿಕಾರಿಗಳು, ಸಂಘಟನೆಗಳ ಸದಸ್ಯರು ನೆರವು ಘೋಷಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸರ್ಕಾರಿ ನೌಕರರ ಸಂಘ, ಮಹಿಳಾ ಶಕ್ತಿ ಕೇಂದ್ರ, ಸ್ತ್ರೀಶಕ್ತಿ ಒಕ್ಕೂಟಗಳು ಇಲ್ಲಿನ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಪೋಷಣ್‌ ಅಭಿಯಾನ್‌ ಉದ್ಘಾಟನೆ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.

ಶೋಷಣೆಗೆ ಒಳಗಾಗಿದ್ದ ಶಿವಮ್ಮ ಅವರಿಂದಲೇ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಬಳಿಕ ಅವರ ಅತ್ತೆ ತಿಮ್ಮವ್ವ, ಅತ್ತಿಗೆ ಸಾಕಮ್ಮನ ಜತೆಗೆ ಶಿವಮ್ಮ ಅವರನ್ನು ಸನ್ಮಾನಿಸಲಾಯಿತು.

ಶಿವಮ್ಮ ಅವರ 9 ತಿಂಗಳ ಮಗು ‘ಶ್ರೀಕೃಷ್ಣ’ನ ಭವಿಷ್ಯದ ವಿದ್ಯಾಭ್ಯಾಸಕ್ಕೆ ಎಲ್ಲರೂ ನೆರವು ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಆರಂಭದಲ್ಲಿ ಕೋರಿದರು. ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ರಾಜ್ಯಾಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ, ‘ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ತಲಾ ₹ 50 ಸಂಗ್ರಹಿಸಿ ಕನಿಷ್ಠ ₹ 1 ಲಕ್ಷ ನೀಡಲಾಗುವುದು’ ಎಂದು ಘೋಷಿಸಿದರು.

‘ಸರ್ಕಾರಿ ನೌಕರರ ಸಂಘದಲ್ಲಿ ಚರ್ಚೆ ಮಾಡಿ ನಾವೂ ನೇರವು ನೀಡುತ್ತೇವೆ’ ಎಂದು ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಬಿ. ಫಾಲಾಕ್ಷಿ ತಿಳಿಸಿದರು. ‘ನಮ್ಮ ಇಲಾಖೆಯ ಎಲ್ಲರೂ ಒಂದು ದಿನದ ವೇತನವನ್ನು ನೀಡುತ್ತೇವೆ’ ಎಂದು ಕೆ.ಎಚ್‌. ವಿಜಯಕುಮಾರ್‌ ಅವರೇ ಘೋಷಿಸಿದರು. ಇವರೆಲ್ಲರಿಂದ ಭಿನ್ನವಾಗಿ ಅಲ್ಲೇ ಸಭೆಯಲ್ಲಿ ಇದ್ದ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಕರಿಗಾರ್‌ ವೈಯಕ್ತಿಕವಾಗಿ ₹ 10 ಸಾವಿರ ನೀಡುವುದಾಗಿ ತಿಳಿಸಿ ಕಾಳಜಿ ಮೆರೆದರು. ಸ್ತ್ರೀ ಶಕ್ತಿ ಸಂಘದ ಒಂದು ದಿನದ ಉಳಿತಾಯ ನೀಡುವುದಾಗಿ ಸಂಘದ ಅಧ್ಯಕ್ಷೆ ಮಂಜುಳಾ ತಿಳಿಸಿದರು.

ಈ ಎಲ್ಲರ ಮಾನವೀಯ ನೆರವಿನ ಘೋಷಣೆಗಳು ಮೆಚ್ಚುಗೆಗೆ ಪಾತ್ರವಾದವು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಆ ಮಗು ಏನು ತಪ್ಪು ಮಾಡಿದೆ’ ಎಂದು ಪ್ರಶ್ನಿಸುವ ಮೂಲಕ ಆರಂಭದಲ್ಲಿಯೇ ಸ್ಫೂರ್ತಿ ತುಂಬಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಸದಸ್ಯ ಸಂಗಜ್ಜ ಗೌಡ, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ್‌, ಸದಸ್ಯರಾದ ಶೈಲಜಾ ಬಸವರಾಜ್‌, ತೇಜಸ್ವಿ ಪಟೇಲ್‌, ಸ್ತ್ರೀ ಶಕ್ತಿ ಸಂಘದ ಶಕುಂತಲಾ ಅವರೂ ಇದ್ದರು.

ಮೇರಿ ದೇವಾಸಿಯ ಕರ್ನಾಟಕ ಸರ್ಕಾರಿ ನೌಕರರ ಮಹಿಳಾ ಘಟಕ ಉದ್ಘಾಟನೆಗೊಂಡಿತು. ಅಸಾಧಾರಣ ಪ್ರತಿಭೆವುಳ್ಳ ಮಕ್ಕಳನ್ನು ಸನ್ಮಾನಿಸಲಾಯಿತು. ಸ್ತ್ರಿಶಕ್ತಿ ಗುಂಪು, ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು.

‘ಪುರುಷರ ಮನಃಸ್ಥಿತಿ ಬದಲಾಗಲಿ’

‘ಮಹಿಳೆ ಹಾಕುವ ಬಟ್ಟೆ ಹಾಗಿರಬೇಕು, ರಾತ್ರಿಯಾದ ಮೇಲೆ ಹೊರಗೆ ಬರಬಾರದು ಎಂದೆಲ್ಲ ಹಲವು ಸಲಹೆಗಳನ್ನು ಹೆಣ್ಣುಮಕ್ಕಳಿಗೆ ನೀಡಲಾಗುತ್ತದೆ. ಜತೆಗೆ ಮಹಿಳೆಯರನ್ನು ಸಹೋದರಿಯರಂತೆ ನೋಡುವ ಸಲಹೆಯನ್ನು ಗಂಡು ಮಕ್ಕಳಿಗೆ ನೀಡಬೇಕು’ ಎಂದು ಉಪನ್ಯಾಸಕಿ ಅರುಣಕುಮಾರಿ ಬಿರಾದಾರ ಸಲಹೆ ನೀಡಿದರು.

‘ಪುರುಷರ ಮನಸ್ಥಿತಿ ಬದಲಾಗದೇ, ಮಹಿಳೆಯರನ್ನು ಗೌರವಿಸುವ ಚಿಂತನೆ ಬಾರದೇ ಇದ್ದರೆ ಯಾವ ಕಾನೂನುಗಳಿಂದಲೂ ಸಮಸ್ಯೆ ಬಗೆಹರಿಯದು’ ಎಂದರು.

‘ಐದು ಪ್ರತಿಜ್ಞೆ ತೆಗೆದುಕೊಳ್ಳಿ’

‘ಮುಂದಿನ ಮಹಿಳಾ ದಿನಾಚರಣೆಯ ಹೊತ್ತಿಗೆ ಜಿಲ್ಲೆಯಲ್ಲಿ ಒಂದೂ ವೃದ್ಧಾಶ್ರಮ ಇರುವುದಿಲ್ಲ. ಒಂದೇ ಒಂದು ಹೆಣ್ಣುಭ್ರೂಣ ಹತ್ಯೆ ಆಗುವುದಿಲ್ಲ. ಮಗುವಿಗೆ ಮೂರು ವರ್ಷ ಎದೆಹಾಲು ಕುಡಿಸುತ್ತೇವೆ. ಗಂಡಿರಲಿ, ಹೆಣ್ಣಿರಲಿ ಒಂದೇ ಮಗು ಸಾಕು. ರಾತ್ರಿ 12 ಗಂಟೆಗೆ ಮಹಿಳೆ ಧೈರ್ಯವಾಗಿ ಓಡಾಡುವ ಸಮಾಜ ನಿರ್ಮಿಸುತ್ತೇವೆ’ ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT