ಭಾನುವಾರ, ಮೇ 22, 2022
25 °C
ಸಾಮರಸ್ಯ ಸಾರಿದ ಮಾಯಕೊಂಡ ಹೋಬಳಿಯ ಅಣಬೇರು ಗ್ರಾಮ

ದಾವಣಗೆರೆ: ಈದ್ಗಾ ಗೋಡೆ ನಿರ್ಮಾಣಕ್ಕೆ ಹಿಂದೂಗಳ ಭೂಮಿ

ಎಚ್‌. ಅನಿತಾ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿಯ ಅಣಬೇರು ಗ್ರಾಮದ ರಾಜಶೇಖರಪ್ಪ ಮತ್ತು ರಾಜಪ್ಪ ಎಂಬುವವರ ಜಮೀನಿನ ನಡುವೆ ಈದ್ಗಾ ಮೈದಾನವಿದೆ. ಅಲ್ಲಿ ಕಳೆದ ವರ್ಷ ತೀವ್ರ ಗಾಳಿ–ಮಳೆಯಿಂದ ಈದ್ಗಾ ಗೋಡೆ ಕುಸಿದಿತ್ತು. ಅದನ್ನು ಮತ್ತೆ ಕಟ್ಟಲು ರಾಜಪ್ಪ ಅವರು ತಮಗೆ ಸೇರಿರುವ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಸಾಮರಸ್ಯ ಮೆರೆದಿದ್ದಾರೆ.

ರಾಜಶೇಖರಪ್ಪ ಹಾಗೂ ರಾಜಪ್ಪ ನೀಡಿದ ಸಹಕಾರದಿಂದಾಗಿ ನೂತನ ಈದ್ಗಾ ಗೋಡೆ ಈಚೆಗೆ ಉದ್ಘಾಟನೆಗೊಂಡಿದೆ.

ಈದ್ಗಾ ಗೋಡೆ ನಿರ್ಮಾಣಕ್ಕೆ ಸಹಕಾರ ನೀಡಿದ ರಾಜಶೇಖರಪ್ಪ ಮತ್ತು ರಾಜಪ್ಪ ಅವರಿಗೆ ಮುಸ್ಲಿಂ ಸಮುದಾಯದ ಮುಖಂಡರು ಗೌರವ ಸಮರ್ಪಣೆ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

‘ಗ್ರಾಮದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ವಿವಿಧ ಜಾತಿ, ಧರ್ಮಗಳ ಜನರು ಇಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆಯಲು ಅವಕಾಶ ನೀಡಿಲ್ಲ. ಕೋಮು ಸಾಮರಸ್ಯವನ್ನು ಕದಡುವಂತಹ ಅನೇಕ ಬೆಳವಣಿಗೆಗಳು ನಾಡಿನಲ್ಲಿ ನಡೆಯುತ್ತಿರುವುದನ್ನು ಪತ್ರಿಕೆ, ಟಿ.ವಿ.ಗಳಲ್ಲಿ ಗಮನಿಸುತ್ತಿದ್ದೇವೆ. ರಾಜಕೀಯ ಲಾಭಕ್ಕಾಗಿ ಯಾವುದೇ ಪಕ್ಷ ಅಥವಾ ಸಂಘಟನೆಗಳು ಕಿಡಿಗೇಡಿ ಕೃತ್ಯಗಳನ್ನು ನಡೆಸುವುದು ತಪ್ಪು. ಮುಸ್ಲಿಮರು ಎಲ್ಲಿಂದಲೋ ಬಂದವರಲ್ಲ. ಅವರೂ ಇಲ್ಲಿಯೇ ಹುಟ್ಟಿ, ಬೆಳೆದವರು. ನಮ್ಮಂತೆಯೇ ಅವರೂ ಬದುಕಬೇಕು. ಬಸವಣ್ಣ ಸೇರಿ ಹಲವು ದಾರ್ಶನಿಕರು ಇದನ್ನೇ ಹೇಳಿದ್ದಾರೆ. ಆದರೂ ಅಹಿತಕರ ಘಟನೆಗಳು ನಡೆಯುತ್ತಿರುವುದು ಬೇಸರ ತಂದಿದೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ಎಲ್ಲರೂ ಒಟ್ಟಾಗಿ ಬಾಳಬೇಕು’ ಎನ್ನುತ್ತಾರೆ ಆಂಜನೇಯಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ಗ್ರಾಮದ ಕೆ.ಸಿ. ರಾಜಪ್ಪ.

‘ಈದ್ಗಾ ಮೈದಾನದ ಜಾಗದ ಸಂಬಂಧ ಈ ಹಿಂದೆ ವಿವಾದ ಉಂಟಾಗಿತ್ತು. ಕೊನೆಗೆ ಪ್ರಕರಣ ಕೋರ್ಟ್‌ ಮೆಟ್ಟಿಲು ಏರಿತ್ತು. ಇದೀಗ ಯಾವುದೇ ಸಮಸ್ಯೆ ಇಲ್ಲ. ರಾಜಶೇಖರಪ್ಪ ಮತ್ತು ನಮ್ಮ ಜಮೀನಿನ ನಡುವೆ ಈದ್ಗಾ ಮೈದಾನವಿರುವುದರಿಂದ ಇಬ್ಬರೂ ಸೇರಿ ಜಾಗದ ಹಕ್ಕನ್ನು ಪ್ರಾರ್ಥನಾ ಮಂದಿರದವರಿಗೆ ಮಾಡಿಕೊಡಲು ನಿರ್ಧರಿಸಿದ್ದೇವೆ. ಇದರಿಂದ ಅವರಿಗೂ ಆತಂಕವಿಲ್ಲ. ಮುಂದೆ ಯಾರೂ ತಕರಾರು ತೆಗೆಯಲು ಅವಕಾಶ ಇಲ್ಲ. ಸರ್ವ ಜನಾಂಗದವರ ಸಮಾನತೆಗಾಗಿ ದುಡಿದ ಬಸವಣ್ಣನವರ ಜಯಂತಿ ಹಾಗೂ ಉಪವಾಸದ ಮಹತ್ವ ಸಾರುವ ರಂಜಾನ್‌ ಹಬ್ಬಗಳೆರಡೂ ಒಟ್ಟಿಗೆ ಬಂದಿರುವ ಸಂದರ್ಭದಲ್ಲಿ ನೂತನ ಪ್ರಾರ್ಥನಾ ಮಂದಿರ ಉದ್ಘಾಟನೆಯಾಗಿದ್ದು ಸಂತಸ ತಂದಿದೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು