ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೊಲೆ ಪ್ರಕರಣ ಭೇದಿಸಲು ನೆರವಾದ ‘ತುಂಗಾ’ ನೀಡಿದ ಸುಳಿವು

ಧಾರವಾಡದಲ್ಲಿ ಕಳವು ಮಾಡಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ
Last Updated 16 ಜುಲೈ 2020, 17:26 IST
ಅಕ್ಷರ ಗಾತ್ರ

ದಾವಣಗೆರೆ: ಶ್ವಾನವೊಂದು ನೀಡಿದ ಮಹತ್ವದ ಸುಳಿವಿನಿಂದ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡದಲ್ಲಿ ಈಚೆಗೆ ನಡೆದ ಚಂದ್ರನಾಯ್ಕ ನಾಗರಕಟ್ಟೆ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಶ್ವಾನದಳದ9 ವರ್ಷದ ಡಾಬರ್‌ಮನ್‌ ಜಾತಿಯ ‌‘ತುಂಗಾ’ ಮಹತ್ವದ ಪಾತ್ರ ವಹಿಸಿದ್ದು ಪ್ರಕರಣಕ್ಕೆ ತಿರುವು ನೀಡಿದೆ.

ಕೊಲೆ ನಡೆದ ಜಾಗದಿಂದ 11 ಕಿ.ಮೀವರೆಗೆ ಓಡಾಡಿದ ‘ತುಂಗಾ’ ಆರೋಪಿಯ ಗುರುತು ಪತ್ತೆ ಮಾಡಿದೆ. ತನ್ನ ಚಾಣಾಕ್ಷತನದಿಂದ ಸೂಳೆಕೆರೆ ಗುಡ್ದದಿಂದ ಕಾಶಿಪುರ ತಾಂಡಾದವರೆಗೆ ಓಡಾಡಿ ಕೊಲೆ ಆರೋಪಿಯನ್ನು ಪತ್ತೆ ಮಾಡುವ ಮೂಲಕ ಪೊಲೀಸರಿಗೆ ನೆರವಾಗಿರುವುದು ಗಮನಾರ್ಹ.

ಕೊಲೆ ಆರೋಪಿ ಚೇತನ್‌ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಹಲವು ಆರೋಪಿಗಳು ಭಾಗಿಯಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಕರಣದ ವಿವರ: ಜುಲೈ 10ರಂದು ಸೂಳೆಕೆರೆ ಗುಡ್ಡದಲ್ಲಿ ಚಂದ್ರನಾಯ್ಕ್‌ ಕೊಲೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶ್ವಾನದಳದ ‘ತುಂಗಾ’ದೊಂದಿಗೆ ಸ್ಥಳ ಪರಿಶೀಲನೆಗೆ ಹೋಗಿದ್ದರು. ಆಗ ತುಂಗಾ ಕಾಶಿಪುರದ ತಾಂಡದವರೆಗೂ ಹೋಗಿ ಆರೋಪಿ ಪತ್ತೆಗೆ ಸಹಕರಿಸಿತ್ತು. ಅನುಮಾನಗೊಂಡ ಪೊಲೀಸರು ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ.

ಚಂದ್ರನಾಯ್ಕ್‌ ಚೇತನ್‌ಗೆ ₹ 1.70 ಲಕ್ಷ ಸಾಲ ನೀಡಿದ್ದ. ಅಲ್ಲದೇಚೇತನ್‌ ಹಾಗೂ ಸ್ನೇಹಿತರು ಮಾಡುತ್ತಿದ್ದ ಕಳವು ತಿಳಿದಿತ್ತು. ಚಂದ್ರನಾಯ್ಕ್‌ ಈ ಬಗ್ಗೆ ಪೊಲೀಸರಿಗೆ ತಿಳಿಸಬಹುದು ಎಂದು ಶಂಕಿಸಿದ ಆರೋಪಿಗಳು‘ಸಾಲ ಕೊಡುತ್ತೇವೆ’ ಎಂದು ನಂಬಿಸಿ ಕಳವು ಮಾಡಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದರು.

ಧಾರವಾಡದ ವಿದ್ಯಾಗಿರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಜೂನ್‌ 20ರಂದು ಆರೋಪಿಗಳು ಕೊಲೆಗೆ ಬಳಸಿದ ಪಿಸ್ತೂಲ್‌ ಕಳವು ಮಾಡಿದ್ದರು.‌ಒಟ್ಟು ಮೂರು ಕಳವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದು, ಆ ಪ್ರಕರಣವನ್ನೂ ಭೇದಿಸಲಾಗುತ್ತಿದೆ. ಪ್ರಕರಣದಲ್ಲಿ ಮೂರು, ನಾಲ್ಕು ಜನರು ಭಾಗಿಯಾಗಿರುವ ಸಾಧ್ಯತೆ ಇದ್ದು, ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದರು.

ಧಾರವಾಡದ ವಿದ್ಯಾಗಿರಿಯ ಅಲ್ಲದೇ ಇತರೆಡೆ ಸೇರಿ ಮೂರು ಕಳವು ಪ್ರಕರಣಗಳ ಆರೋಪವೂ ಈತನ ಮೇಲಿದ್ದು, ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ರಾಜೀವ್‌ ಎಂ., ಡಿವೈಎಸ್‌ಪಿ ಪ್ರಶಾಂತ್ ಜಿ. ಮುನ್ನೋಳಿ, ಸಿಪಿಐ ಆರ್‌.ಆರ್ ಪಾಟೀಲ, ಪಿಎಸ್‌ಐಗಳಾದ ಎಸ್. ಎಸ್‌.‌ ಮೇಟಿ, ಭಾರತಿ ಕಂಕಣವಾಡಿ ಇದ್ದರು.

ಕಾರ್ಯಾಚರಣೆಯಲ್ಲಿದ್ದ ಪೊಲೀಸರು: ಡಿವೈಎಸ್‌ಪಿ ಪ್ರಶಾಂತ್ ಜಿ. ಮುನ್ನೋಳಿ ಮಾರ್ಗದರ್ಶನ; ಸಿಪಿಐ ಆರ್‌.ಆರ್ ಪಾಟೀಲ, ಪಿಎಸ್‌ಐಗಳಾದ ಎಸ್. ಎಸ್‌.‌ ಮೇಟಿ, ಭಾರತಿ ಕಂಕಣವಾಡಿ,ರೂಪ್ಲಿಬಾಯಿ, ರುದ್ರೇಶ್ ಎಂ., ರುದ್ರೇಶ್ ಎಸ್.ಆರ್. ಧರ್ಮಪ್ಪ, ಮಹೇಶ್ ನಾಯ್ಕ್, ಮಂಜನಾಯ್ಕ್, ರವಿಕುಮಾರ್ , ಬಸವರಾಜಕೋಟೆಪ್ಪನವರ್, ರವಿ ಎಚ್.ಸಿ., ನಾಗರಾಜ ತಳವಾರ, ರೇವಣಸಿದ್ದಪ್ಪ, ನವೀನ್, ರಘು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT