ಶನಿವಾರ, ಮೇ 28, 2022
31 °C
ಅಸ್ವಸ್ಥಗೊಂಡ ಡಾ. ಸುರೇಶ್‌ ಆಸ್ಪತ್ರೆಗೆ ದಾಖಲು

ಕ್ರಿಕೆಟ್‌ ಆಟಗಾರರ ಮೇಲೆ ಜೇನು ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ನಗರದ ಬಿಐಇಟಿ ಮೈದಾನದಲ್ಲಿ ಶುಕ್ರವಾರ ನಡೆಯುತ್ತಿದ್ದ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯದ ವೇಳೆ ಆಟಗಾರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಅಸ್ವಸ್ಥಗೊಂಡ ವೈದ್ಯರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹೆಜ್ಜೇನು ದಾಳಿ ನಡೆಸಿದ ಪರಿಣಾಮ ‘ದಾವಣಗೆರೆ ಡಾನ್ಸ್‌’ ತಂಡದ ಆಟಗಾರ ಡಾ.ಸುರೇಶ್‌ ಅವರು ಅಸ್ವಸ್ಥಗೊಂಡಿದ್ದು, ಆಂಬುಲೆನ್ಸ್‌ನಲ್ಲಿ ಅವರನ್ನು ತಕ್ಷಣವೇ ಸನ್‌ಶೈನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಐಇಟಿ ಮೈದಾನದಲ್ಲಿ ‘ದಾವಣಗೆರೆ ಡಾನ್ಸ್‌’ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತಂಡದ ನಡುವೆ ಪಂದ್ಯ ನಡೆಯುತ್ತಿದ್ದಾಗ ಮಧ್ಯಾಹ್ನ 2.30ರ ವೇಳೆಗೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಆಟಗಾರರು, ಅಂಪೈರ್‌ಗಳ ಮೇಲೂ ದಾಳಿ ಮಾಡಿದೆ. ಹಲವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆದರೆ, ಡಾ.ಸುರೇಶ್‌ ಅವರನ್ನು ಮುತ್ತಿಕ್ಕಿದ 100ಕ್ಕೂ ಹೆಚ್ಚು ಹುಳುಗಳು ಅಂಬುಗಳನ್ನು ಬಿಟ್ಟಿವೆ. ಜೇನು ಹುಳುಗಳಿಂದ ಅವರನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು.

ಜೇನು ದಾಳಿ ನಡೆಸಿದ್ದರಿಂದ ಕೆಲ ಕಾಲ ಕ್ರಿಕೆಟ್‌ ಪಂದ್ಯ ಸ್ಥಗಿತಗೊಂಡಿತ್ತು.

ಪ್ರಿ ಕ್ವಾಟರ್ಸ್‌ಗೆ ‘ದಾವಣಗೆರೆ ಡಾನ್ಸ್‌’

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಟೂರ್ನಿ ಶುಕ್ರವಾರ ಆರಂಭಗೊಂಡಿತು.

ನಗರದ ಆರು ಮೈದಾನದಲ್ಲಿ ಏಕ ಕಾಲಕ್ಕೆ ಪಂದ್ಯಗಳು ನಡೆಯುತ್ತಿವೆ. 30 ಜಿಲ್ಲೆಗಳ ವೈದ್ಯರ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ‘ದಾವಣಗೆರೆ ಡಾನ್ಸ್‌’ ತಂಡವು ಎರಡು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಪ್ರಿ ಕ್ವಾಟರ್ಸ್‌ ಹಂತಕ್ಕೆ ತಲುಪಿದೆ.

ಶುಕ್ರವಾರ ನಡೆದ ಲೀಗ್‌ ಪಂದ್ಯಗಳಲ್ಲಿ ಗೆದ್ದುಕೊಂಡ ಒಟ್ಟು ಹತ್ತು ತಂಡಗಳು ಪ್ರಿ ಕ್ವಾಟರ್ಸ್‌ ಪ್ರವೇಶಿಸಿವೆ. ಶನಿವಾರದಿಂದ ನಾಕ್‌ಔಟ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು