ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ವೇತನಕ್ಕಾಗಿ ವಸತಿನಿಲಯ ಕಾರ್ಮಿಕರ ಪ್ರತಿಭಟನೆ

Last Updated 11 ಡಿಸೆಂಬರ್ 2019, 14:24 IST
ಅಕ್ಷರ ಗಾತ್ರ

ದಾವಣಗೆರೆ: ಹಲವು ತಿಂಗಳುಗಳಿಂದ ಬಾಕಿ ಇರುವ ವೇತನ ಪಾವತಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಆಶ್ರಯದಲ್ಲಿ ಕಾರ್ಮಿಕರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

ಬಿಸಿಎಂ ಹಾಗೂ ಪರಿಶಿಷ್ಟ ಪಂಗಡ ಇಲಾಖೆಯ ವಸತಿ ನಿಲಯಗಳಲ್ಲಿ ಸುಮಾರು 600 ಕಾರ್ಮಿಕರು 15ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆರೇಳು ತಿಂಗಳಿನಿಂದ ವೇತನ ನೀಡದೇ ಇರುವುದರಿಂದ ಜೀವನ ನಿರ್ವಹಣೆ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಅನುದಾನ ಬಂದಿಲ್ಲ ಎಂಬ ನೆಪ ಹೇಳುತ್ತಿದ್ದಾರೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಗ್ಲೋಬಲ್‌ ಮ್ಯಾನ್‌ಪವರ್‌ ಮತ್ತು ಪ್ರೈವೇಟ್‌ ಬ್ಯುರೊ ಸಂಸ್ಥೆಗಳು ನೌಕರರಿಗೆ ವೇತನ ಹಾಗೂ ಇಪಿಎಫ್‌ ಕಡಿತವನ್ನು ಸಮರ್ಪಕವಾಗಿ ಮಾಡದೇ ವಂಚಿಸಿವೆ. ಈ ಬಗ್ಗೆ ಹೋರಾಟ ನಡೆಸಿದಾಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಸಮ್ಮುಖದಲ್ಲಿ ತುಟ್ಟಿಭತ್ಯೆ ನೀಡುವುದಾಗಿ ಭರವಸೆ ನೀಡಿದ್ದವು. ಆದರೆ, ಮೂರು ವರ್ಷ ಕಳೆದರೂ ಇದನ್ನು ಜಾರಿಗೊಳಿಸಿಲ್ಲ ಎಂದು ಆಕ್ಷೇಪಿಸಿದರು.

ನಿಯಮದಂತೆ ಕಾರ್ಮಿಕರಿಗೆ ವಾರದ ಮತ್ತು ತಿಂಗಳ ರಜೆ ಸೌಲಭ್ಯ ಕಲ್ಪಿಸಬೇಕು. ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ತಪ್ಪದೇ ವೇತನ ಪಾವತಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ ಕೈದಾಳೆ, ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಹರಿಹರದ ಈಶ್ವರ, ಜಗಳೂರಿನ ರಾಮಣ್ಣ, ಚನ್ನಗಿರಿಯ ಅಶೋಕ, ಸಂತೇಬೆನ್ನೂರು ಗಿರಿಜಮ್ಮ, ಮಂಜುಳಮ್ಮ, ಹೊನ್ನಾಳಿಯ ರಂಗಮ್ಮ, ಪರಶುರಾಮ್‌, ಹನುಮಂತಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT