ಒತ್ತಡಕ್ಕೆ ಮಣಿಯದೆ ಅರ್ಹರಿಗೇ ಮನೆ ಹಂಚಿ

ದಾವಣಗೆರೆ: ‘ವಸತಿ ಯೋಜನೆಯಡಿ ಮನೆ ಹಂಚಿಕೆ ಮಾಡುವಾಗ ಸಂಸದರು, ಶಾಸಕರ ಒತ್ತಡಕ್ಕೂ ಮಣಿಯದೆ ವಸತಿರಹಿತ ಅರ್ಹ ಬಡ ಫಲಾನುಭವಿಗಳಿನ್ನೇ ಆಯ್ಕೆ ಮಾಡಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹರಿಹರ ತಾಲ್ಲೂಕಿನ ನಿಟ್ಟೂರಿನಲ್ಲಿ ಚಾನಲ್ ದುರಸ್ತಿಗೆ ಬಂದು 10 ವರ್ಷಗಳಿಂದ ಗುಡಿಸಲು ಹಾಕಿಕೊಂಡಿರುವ ಕೂಲಿ ಕಾರ್ಮಿಕರಿಗೆ ಇನ್ನೂ ಮನೆ ಹಂಚಿಕೆ ಮಾಡದಿರುವ ಬಗ್ಗೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಸರ್ಕಾರಿ ಜಾಗ ಇಲ್ಲ ಎಂದು ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಡಿದ ಕಾರಣದಿಂದ ಸಿಡಿಮಿಡಿಗೊಂಡ ಸಂಸದರು, ‘ಬಡವರಿಗೆ ಮನೆ ಕೊಡಲಿಕ್ಕೆ ಆಗದಿದ್ದರೆ ನಾವೇಕೆ ಜನಪ್ರತಿನಿಧಿಗಳಾಗಿ ಇರಬೇಕು? ಕೂಡಲೇ ಜಾಗವನ್ನು ಹುಡುಕಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿ’ ಎಂದು ಸೂಚಿಸಿದರು.
ಗ್ರಾಮ ಸಭೆಯನ್ನು ಸರಿಯಾಗಿ ನಡೆಸದೇ ಪಂಚಾಯಿತಿ ಸದಸ್ಯರು ತಮಗೆ ಬೇಕಾದವರಿಗೇ ಮನೆ ಕೊಡುತ್ತಿದ್ದಾರೆ ಎಂದು ಶಾಸಕ ಪ್ರೊ.ಎನ್. ಲಿಂಗಣ್ಣ ಹಾಗೂ ದಿಶಾ ಸಮಿತಿಯ ಸದಸ್ಯರು ಆಕ್ಷೇಪಿಸಿದರು.
‘ಮನೆ ಹಂಚಿಕೆ ವಿಚಾರದಲ್ಲಿ ತಾಲ್ಲೂಕು ಪಂಚಾಯಿತಿ ಇಒಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜನ ಬಂದು ಮನವಿ ಮಾಡುತ್ತಾರೆ ಎಂದು ನಾವು ಶಿಫಾರಸು ಪತ್ರವನ್ನು ಕೊಡುತ್ತೇವೆ. ಜನಪ್ರತಿನಿಧಿಗಳು ಅನರ್ಹರಿಗೆ ಶಿಫಾರಸು ಮಾಡಿದ್ದರೆ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು, ಕಾರ್ಯದರ್ಶಿ, ತಾಲ್ಲೂಕು ಪಂಚಾಯಿತಿ ಇಒ ಪರಿಶೀಲಿಸಿ ನಿಜವಾದ ಬಡವರಿಗೇ ಮನೆಯನ್ನು ನೀಡಬೇಕು’ ಎಂದು ಸಂಸದರು ಸೂಚಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಗ್ರಾಮ ವಾಸ್ತವ್ಯಕ್ಕೆ ಹೋದ ವೇಳೆ ಮನೆ ನೀಡುವಂತೆ ಹಲವು ಅರ್ಜಿಗಳು ಬರುತ್ತಿವೆ. ಸರ್ಕಾರ ಪ್ರತಿ ವರ್ಷ ಮನೆ ನೀಡುತ್ತಿದ್ದರೂ ಇನ್ನೂ ಜನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಇಒ ಹಾಗೂ ಪಿಡಿಒಗಳು ಶಾಸಕರಿಗೆ ಮನವರಿಕೆ ಮಾಡಿಕೊಟ್ಟು ಅರ್ಹರಿಗೆ ಮನೆ ಕೊಡಿಸುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ‘2018ರಲ್ಲಿ ಸಮೀಕ್ಷೆ ನಡೆಸಿ ವಸತಿರಹಿತರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ ಹೆಸರು ಇರುವವರನ್ನೇ ಆದ್ಯತೆ ಮೇಲೆ ಪರಿಗಣನೆಗೆ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
ಶಾಲೆಗೆ ಕಾಂಪೌಂಡ್ ನಿರ್ಮಿಸಿ: ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 193 ಶಾಲೆಗಳ ಕಾಂಪೌಂಡ್ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೂ ಕೇವಲ 16 ಕಾಮಗಾರಿಗಳು ಆರಂಭಗೊಂಡಿರುವುದಕ್ಕೆ ಸಿಡಿಮಿಡಿಗೊಂಡ ಸಂಸದರು, ಆದ್ಯತೆ ಮೇಲೆ ಈ ಕೆಲಸವನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ‘ನರೇಗಾ ಯೋಜನೆಯಡಿ 60:40 ಅನುಪಾತದಲ್ಲಿ ಕೆಲಸ ಮಾಡಿಸಬೇಕಾಗಿದ್ದು, ಈಗಾಗಲೇ ಮಟಿರಿಯಲ್ ಕೆಲಸಗಳು ನಿಗದಿಗಿಂತ ಹೆಚ್ಚಾಗಿರುವುದರಿಂದ ಈ ಕೆಲಸ ನಿಧಾನವಾಗಿ ಸಾಗುತ್ತಿದೆ. ಡಿಸೆಂಬರ್ ಬಳಿಕ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಸಿಇಒ ಪ್ರತಿಕ್ರಿಯಿಸಿದರು.
ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ‘ಶತಮಾನ ಕಂಡಿರುವ 49 ಶಾಲೆಗಳ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈಚೆಗೆ ಸುರಿದ ಮಳೆಗೆ 366 ಶಾಲೆಗಳು ತೀವ್ರವಾಗಿ ಶಿಥಿಲಗೊಂಡಿದ್ದು, ತುರ್ತಾಗಿ ಕೊಠಡಿಗಳನ್ನು ನಿರ್ಮಿಸಬೇಕು ಎಂದು ಪಸ್ತಾವ ಸಲ್ಲಿಸಲಾಗಿತ್ತು. ಆದರೆ, 64 ಶಾಲೆಗಳು ಮಾತ್ರ ಬೀಳುವ ಸ್ಥಿತಿಯಲ್ಲಿದೆ ಎಂದು ಲೋಕೋಪಯೋಗಿ ಇಲಾಖೆ ವರದಿ ನೀಡಿದೆ’ ಎಂದು ಸಭೆಯ ಗಮನಕ್ಕೆ ತಂದರು.
ಶಿಥಿಲಗೊಂಡಿರುವ ಶಾಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲಾ ಶಾಲೆಗಳಲ್ಲೂ ಕೊಠಡಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಪ್ರಮಾಣಪತ್ರ ನೀಡುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಟ್ಟಡ ನಿರ್ಮಿಸುವಾಗ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಳಪೆಯಾಗಿದ್ದರೆ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಸಂಸದ ಸಿದ್ದೇಶ್ವರ ಸೂಚಿಸಿದರು.
ಸಮಿತಿ ಸದಸ್ಯ ಜೆ.ಪಿ. ಮುಪ್ಪಣ್ಣ, ‘ಕುಂದವಾಡ ಕೆರೆಗೆ ಹೋಲಿಸಿದರೆ ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೆರೆಯ ಸುತ್ತ ಬೇಲಿ ಹಾಕಬೇಕು. ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಎಸ್.ಟಿ. ವೀರೇಶ್, ‘ಧೂಡಾದಿಂದ ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿ ಕೈಗೊಳ್ಳಲು ಯೋಜನೆ ರೂಪಿಸಿ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗಿದೆ’ ಎಂದರು.
‘ನಗರದ ಹಂದಿಗಳನ್ನು ಸ್ಥಳಾಂತರಿಸಲು ಹೆಬ್ಬಾಳು ಗ್ರಾಮದಲ್ಲಿ ಜಾಗ ಗುರುತಿಸಿ, ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಮೂರು ತಿಂಗಳ ಒಳಗೆ ಹಂದಿಗಳನ್ನು ಅಲ್ಲಿಗೆ ಸ್ಥಳಾಂತರಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ಮಾಹಿತಿ ನೀಡಿದರು.
ಸಂಸದರು ವಿವಿಧ ಇಲಾಖೆಗಳ ಪ್ರಗತಿಯ ವಿವರಗಳನ್ನು ಪಡೆದರು. ಶಾಸಕ ಎಸ್.ವಿ. ರಾಮಚಂದ್ರ, ದಿಶಾ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಬಾರದ ಪರಿಹಾರ: ರೈತರ ನಿರಾಸಕ್ತಿ
‘ಕಳೆದ ವರ್ಷ ಜಿಲ್ಲೆಯಲ್ಲಿ 17,127 ರೈತರು ಬೆಳೆ ವಿಮೆ ಮಾಡಿಸಿದ್ದರು. ಈ ಬಾರಿ 21,514 ರೈತರು ವಿಮೆ ಮಾಡಿಸಿದ್ದಾರೆ. ಸಾಲ ಪಡೆಯುವ ಮುನ್ನ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು ಎಂಬ ಷರತ್ತನ್ನು ಕೈಬಿಡಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ₹ 5.31 ಕೋಟಿ ವಿಮಾ ಕಂತು ಪಾವತಿಸಲಾಗಿತ್ತು. ₹ 4.80 ಕೋಟಿ ಮಾತ್ರ ವಿಮೆ ಬಂದಿದೆ. 18 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಪರಿಹಾರ ಬಂದಿದೆ. ಹೀಗಾಗಿ ರೈತರು ವಿಮೆ ಮಾಡಿಸಲು ಉತ್ಸಾಹ ತೋರಿಸುತ್ತಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾಹಿತಿ ನೀಡಿದರು.
‘ವಿಮಾ ಕಂಪನಿಯವರು ಅಧಿಕಾರಿಗಳೊಂದಿಗೆ ಶಾಮೀಲಾಗಿ ರೈತರು ಪಾವತಿಸಿದ ಕಂತಿನ ಹಣದಲ್ಲಿ ಉಳಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆಳೆ ಕಟಾವು ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿಸಿ, ರೈತರಿಗೆ ಪರಿಹಾರ ಸಿಗುವಂತೆ ಮಾಡಬೇಕು’ ಎಂದು ಸಂಸದರು ಸೂಚಿಸಿದರು.
ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲು ಯಾರೂ ಅಧಿಕಾರಿಗಳಿಗೆ ಹಣ ನೀಡಬಾರದು. ಹಣವನ್ನು ಕೇಳಿದರೆ ನನ್ನ, ಜಿಲ್ಲಾಧಿಕಾರಿ ಅಥವಾ ಜಿ.ಪಂ. ಸಿಇಒ ಗಮನಕ್ಕೆ ತನ್ನಿ. ಕ್ರಮ ಕೈಗೊಳ್ಳುತ್ತೇವೆ.
– ಜಿ.ಎಂ. ಸಿದ್ದೇಶ್ವರ, ಸಂಸದ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.