ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯ ಸೌಕರ್ಯ, ಕೊರತೆ ತಿಳಿದೆ: ಎಸ್‌ಪಿ ಹನುಮಂತರಾಯ

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾ ಮುಕ್ತರಾದ ಎಸ್‌ಪಿ ಹನುಮಂತರಾಯ
Last Updated 14 ಆಗಸ್ಟ್ 2020, 3:58 IST
ಅಕ್ಷರ ಗಾತ್ರ

ದಾವಣಗೆರೆ: ‘ನಾವು ಸರ್ಕಾರಿ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿ ಇರುವವರು. ನಾವೇ ಸರ್ಕಾರಿ ಆಸ್ಪತ್ರೆಗೆ ಹೋಗದಿದ್ದರೆ ಹೇಗೆ? ಅದಕ್ಕಾಗಿ ನನಗೆ ಕೊರೊನಾ ಬಂದಾಗ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಾದೆ’.

ಕೋವಿಡ್‌ ಮುಕ್ತರಾಗಿ ಗುರುವಾರ ಬಿಡುಗಡೆಗೊಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ ಜತೆ ಹಂಚಿಕೊಂಡ ಅನುಭವದ ಮಾತಿದು.

‘ನನಗೆ ಹೇಗೆ ಕೊರೊನಾ ಬಂತು ಎಂಬುದನ್ನು ನಿಖರವಾಗಿ ಹೇಳಲಾರೆ. ಸೋಂಕು ತಗುಲಿರಬಹುದಾದ ಮೂರ್ನಾಲ್ಕು ಸಾಧ್ಯತೆಗಳು ಇವೆ. ನನ್ನ ಕಚೇರಿಗೆ ಸಾರ್ವಜನಿಕರು ನಿತ್ಯ ಬರು ತ್ತಾರೆ. ಅರ್ಜಿಗಳನ್ನು ಕೊಡುತ್ತಾರೆ. ಹೊರಗೆ ಪರಿಶೀಲಿಸಿಯೇ ಒಳಗೆ ಬಿಡು ತ್ತಾರೆ. ಆದರೂ ಅವರು ಕೊಡುವ ಅರ್ಜಿಗಳನ್ನು ಸ್ವೀಕರಿಸುತ್ತೇನೆ. ಫೈಲ್‌ಗಳನ್ನು ತೆಗೆದುಕೊಳ್ಳುತ್ತೇನೆ. ಆ ಮೂಲಕವೂ ಬಂದಿರಬಹುದು’ ಎಂದು ವಿವರಿಸಿದರು.

‘ನಮ್ಮ ಇಲಾಖೆಯಲ್ಲಿ ಕೆಲಸ ಮಾಡುವ 50ಕ್ಕೂ ಅಧಿಕ ಪೊಲೀಸರಿಗೇ ಕೊರೊನಾ ಬಂದಿದೆ. ಅವರಲ್ಲಿ ಕೆಲವರು ನನ್ನ ಜತೆಗೇ ಕೆಲಸ ಮಾಡುವವರು. ಅವರನ್ನು ಪರೀಕ್ಷೆ ಮಾಡಿದ ಮೇಲಷ್ಟೇ ಸೋಂಕಿದೆ ಎಂಬುದು ಗೊತ್ತಾಗುವುದು ತಾನೆ. ಅವರಿಂದಲೂ ಬಂದಿರಬಹುದು’ ಎಂದು ಎರಡನೇ ಸಾಧ್ಯತೆಯನ್ನು ತೆರೆದಿಟ್ಟರು.

‘ಮೀಟಿಂಗ್‌ಗಳಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಕಚೇರಿಗೆ ಹೋಗುತ್ತಿದ್ದೆ. ಜಿಲ್ಲಾಧಿಕಾರಿ ಕಚೇರಿಯ ಆರೇಳು ಸಿಬ್ಬಂದಿಗೇ ಕೊರೊನಾ ಬಂದಿದೆ. ಅಲ್ಲಿಯೂ ಸೋಂಕು ತಗುಲಿರಬಹುದು. ಸಾರ್ವಜನಿಕವಾಗಿ ಕೆಲಸ ಮಾಡುವುದ ರಿಂದ ಹೊರಗೆಯೂ ಬಂದಿರಬಹುದು’ ಎಂದು ಇನ್ನೆರಡು ಸಾಧ್ಯತೆಗಳನ್ನು ತಿಳಿಸಿದರು.

‘ನಮ್ಮದೇ ವ್ಯವಸ್ಥೆಯನ್ನು ನಾವು ಬಳಸಿಕೊಂಡಾಗ ಜನರಿಗೂ ಧೈರ್ಯ ಬರುತ್ತದೆ. ನನಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ವೈದ್ಯರ ಬಗ್ಗೆ ಪೂರ್ಣ ವಿಶ್ವಾಸ ಇತ್ತು. ನನ್ನ ವಿಶ್ವಾಸವನ್ನು ವೈದ್ಯರು ಉಳಿಸಿಕೊಂಡಿದ್ದಾರೆ. ಉತ್ತಮ ಆಹಾರ, ಔಷಧ, ಉಪಚಾರಗಳನ್ನು ನೀಡಿದ್ದಾರೆ. ವೈದ್ಯರು, ನರ್ಸ್‌ಗಳು ಪಿಪಿಇ ಕಿಟ್‌ ಹಾಕಿಕೊಂಡು ನಿರಂತರ ಏಳೆಂಟು ಗಂಟೆಗಳ ಕಾಲ ಕೆಲಸ ಮಾಡುವ ಅವರ ಶ್ರಮ ಮೆಚ್ಚಲೇಬೇಕಾದುದು’ ಎಂದು ಶ್ಲಾಘಿಸಿದರು. ‘ಜಿಲ್ಲಾ ಆಸ್ಪತ್ರೆಯಲ್ಲಿ ಏನೆಲ್ಲ ಸೌಲಭ್ಯಗಳಿವೆ? ಏನು ಅಗತ್ಯ ಇದೆ ಎಂಬುದನ್ನು ತಿಳಿಯಲು ಆಸ್ಪತ್ರೆಯಲ್ಲಿದ್ದ ಏಳು ದಿನಗಳು ಸಹಕಾರಿಯಾದವು. ಕೆಲವು ವ್ಯವಸ್ಥೆಗಳು ಸುಧಾರಣೆಯಾಗಬೇಕಿದೆ. ಆಕ್ಸಿಜನ್‌ ಪ್ಲಾಂಟ್‌ ಆಗಬೇಕು. ಆಸ್ಪತ್ರೆಗೆ ಬೇಕಾದ ಆಕ್ಸಿಜನ್‌ ಅಲ್ಲೇ ಉತ್ಪಾದನೆಯಾಗಬೇಕು. ಬೆಡ್‌ಗಳ ಹೆಚ್ಚಳ ಸಹಿತ ಇನ್ನೊಂದಿಷ್ಟು ಕೆಲಸಗಳಾಗಬೇಕು’ ಎಂದು ವಿವರಿಸಿದರು.

‘ಕೊರೊನಾ ಬಂದರೆ ಹೆದರಿ ಕೊಳ್ಳುವಂಥದ್ದೇನಿಲ್ಲ. ಆದರೆ ಎಚ್ಚರಿಕೆ ಯಿಂದ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸರಳವಾದ ನಿಯಮಗಳನ್ನು ನೀಡಿದೆ. ಮಾಸ್ಕ್‌ ಬಳಸುವುದು, ಸ್ಯಾನಿಟೈಸರ್‌ ಬಳಸುವುದು, ಎರಡು ಗಜ (ಆರು ಅಡಿ) ಅಂತರ ವನ್ನು ಕಾಪಾಡಿಕೊಳ್ಳುವುದು ಮುಂತಾ ದವುಗಳೆಲ್ಲ ಇವೆ. ಧಾರ್ಮಿಕ, ರಾಜಕೀಯ ಹೀಗೆ ಯಾವುದೇ ಕಾರ್ಯ ಕ್ರಮಗಳಿದ್ದರೂ ನಿಯಮಗಳನ್ನು ಮೀರದೇ ಇರುವುದು ಬಹಳ ಮುಖ್ಯ. ಕೊರೊನಾ ಇನ್ನುಮುಂದೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು’ ಎಂದು ಸಲಹೆ ನೀಡಿದರು.

‘ಮೊದಲು ಬೇಸರ, ಈಗ ಖುಷಿ’

‘ಜಿಲ್ಲೆಯಲ್ಲಿ ಕೊರೊನಾ ಕಾಣಿಸಿಕೊಂಡಾಗ ಆರಂಭದಲ್ಲಿ ಮನೆಗೆ ಹೋಗುತ್ತಿರಲಿಲ್ಲ. ಬಳಿಕ ಹೋಗಲು ಆರಂಭಿಸಿದೆ. ನನಗೇ ಕೊರೊನಾ ಸೋಂಕು ಬಂದಾಗ ಮನೆಯವರಿಗೆ ಬೇಸರವಾಯಿತು. ಈಗ ಬಿಡುಗಡೆಗೊಂಡಿರುವುದನ್ನು ನೋಡಿ ಖುಷಿಯಾಗಿದ್ದಾರೆ. ನನಗಾಗಿ ಅವರು ಮಾಡಿದ ತ್ಯಾಗಗಳಿಗೆ ನಾನು ಕೃತಜ್ಞನಾಗಿರಲೇಬೇಕು. ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರ ಆರೋಗ್ಯದ ದೃಷ್ಟಿಯಿಂದಲೂ ನಾನು ಇನ್ನಷ್ಟು ಎಚ್ಚರದಿಂದ ಇರಬೇಕು’ ಎಂದು ಎಸ್‌ಪಿ ಹನುಮಂತರಾಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT